ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್ ‘ತ್ಯಾಜ್ಯ’ದ ಮೌಲ್ಯ ವರ್ಧನೆ!

ಕಾಳುಗಳನ್ನಾಗಿ ಮಾಡುವ ಘಟಕ ಹೊನ್ನಾವರದಲ್ಲಿ ಸ್ಥಾಪನೆ: ಬುಡಕಟ್ಟು ಸಮುದಾಯಕ್ಕೆ ಅನುಕೂಲ
Last Updated 18 ಮೇ 2022, 15:34 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯ ವಿವಿಧೆಡೆ ಸಂಗ್ರಹಿಸಿದ ಪ್ಲಾಸ್ಟಿಕ್ ‘ತ್ಯಾಜ್ಯ’ವು ಇನ್ನು ಮುಂದೆ ಮೌಲ್ಯವರ್ಧನೆ ಆಗಬೇಕು... ಅದನ್ನು ಸಂಗ್ರಹಿಸುವವರ ಆರ್ಥಿಕ ಸಬಲೀಕರಣಕ್ಕೂ ನೆರವಾಗಬೇಕು... ಜಿಲ್ಲಾಡಳಿತದ ಈ ಪ್ರಸ್ತಾವಕ್ಕೆ ಸರ್ಕಾರದ ಅನುಮೋದನೆ ಸಿಕ್ಕಿದ್ದು, ₹ 50 ಲಕ್ಷ ಮಂಜೂರಾಗಿದೆ.

ಸಿದ್ದಿ, ವಾಲ್ಮೀಕಿ, ಡೊಂಗ್ರಿ ಗರೇಶಿಯಾ ಮುಂತಾದ ಬುಡಕಟ್ಟು ಸಮುದಾಯಗಳ ಹಲವಾರು ಮಂದಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಆಯ್ದು, ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಈ ಹಿಂದೆ ಅವುಗಳನ್ನು ಮಧ್ಯವರ್ತಿಗಳಿಗೆ ಮಾರಾಟ ಮಾಡಿದಾಗ ಅತ್ಯಲ್ಪ ಆದಾಯ ಸಿಗುತ್ತಿತ್ತು.

ಬಳಿಕ ಅವರಿಗೆ ಪ್ಲಾಸ್ಟಿಕ್ ಬಾಟಲಿಗಳಂಥ ಮರುಬಳಕೆ ಸಾಧ್ಯವಿರುವ ವಸ್ತುಗಳನ್ನು ಜಜ್ಜಿ ಗಂಟು ಕಟ್ಟುವ ಘಟಕವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಕೊಡಲಾಗಿತ್ತು. ಗಂಟು ಕಟ್ಟಿದ ಬಳಿಕ ಹುಬ್ಬಳ್ಳಿ, ಮುಂಬೈನ ಘಟಕಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಇದರಿಂದಲೂ ಪ್ಲಾಸ್ಟಿಕ್ ಆಯ್ದವರಿಗೆ ಹೆಚ್ಚಿನ ಲಾಭವಾಗುತ್ತಿರಲಿಲ್ಲ.

ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಅವರಿಗೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಣ್ಣ ಕಾಳುಗಳನ್ನಾಗಿ ಮಾಡುವ ಘಟಕವನ್ನು ಇಲಾಖೆಯ ಮೂಲಕ ಒದಗಿಸಲಾಗುತ್ತಿದೆ. ಘಟಕವು ಹೊನ್ನಾವರದ ಹಳದೀಪುರದಲ್ಲಿ ಶೀಘ್ರವೇ ಸ್ಥಾಪನೆಯಾಗಲಿದೆ.

ಅದರಲ್ಲಿ ತಯಾರಾದ ಪ್ಲಾಸ್ಟಿಕ್ ಕಾಳುಗಳನ್ನು ಪ್ಲಾಸ್ಟಿಕ್ ಉದ್ಯಮಗಳಿಗೆ ಪೂರೈಕೆ ಮಾಡಲಾಗುತ್ತದೆ. ಇವು ಯಾವುದೇ ಪ್ಲಾಸ್ಟಿಕ್ ಉತ್ಪನ್ನದ ಮೂಲ ಧಾತುವಾಗಿವೆ. ಹಾಗಾಗಿ ಜಜ್ಜಿ ಗಂಟು ಮಾಡಿ ನೀಡುವ ಪ್ಲಾಸ್ಟಿಕ್‌ಗಿಂತಲೂ ಸಣ್ಣ ಕಾಳುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಅದಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ದರವೂ ಸಿಗುತ್ತದೆ.

‌ಸಿ.ಐ.ಪಿ.ಇ.ಟಿ ತಂತ್ರಜ್ಞಾನ: ಪ್ಲಾಸ್ಟಿಕ್ ಕಾಳುಗಳನ್ನು ತಯಾರಿಸಲು ಬೇಕಾದ ತಂತ್ರಜ್ಞಾನವನ್ನು ಮೈಸೂರಿನ ಕೇಂದ್ರೀಯ ಪ್ಲಾಸ್ಟಿಕ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಸಿ.ಐ.ಪಿ.ಇ.ಟಿ) ಒದಗಿಸಲಿದೆ. ಅದುವೇ ಘಟಕದ ನಿರ್ವಹಣೆಯನ್ನೂ ಮಾಡಲಿದೆ. ಈ ಸಂಬಂಧ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಫೆಬ್ರುವರಿಯಲ್ಲೇ ಒಪ್ಪಂದ ಮಾಡಿಕೊಂಡಿದೆ.

‘ಪ್ಲಾಸ್ಟಿಕ್ ಬಾಟಲಿ, ಹಳೆಯ ವಸ್ತುಗಳಂಥ ತ್ಯಾಜ್ಯಗಳನ್ನು ಮರು ಬಳಕೆ ಮಾಡಲು ಸಾಧ್ಯವಿದೆ. ಅವುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿದಾಗ ಪರಿಸರಕ್ಕೂ ಹಾನಿಯಾಗುವುದನ್ನು ನಿಯಂತ್ರಿಸಬಹುದು. ಆ ವಸ್ತುಗಳನ್ನು ಹೆಕ್ಕಿ ತರುವುದನ್ನೇ ಜೀವನೋಪಾಯ ಮಾಡಿಕೊಂಡವರ ಆರ್ಥಿಕ ಸಬಲೀಕರಣಕ್ಕೂ ನೆರವಾಗುತ್ತದೆ’ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.

₹ 10ರಿಂದ ₹ 60ಕ್ಕೆ ಏರಿಕೆ:

‘ಮರು ಬಳಕೆಗೆ ಸಾಧ್ಯವಿರುವ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ ಜೀವನ ನಡೆಸುವವರು ಹೊನ್ನಾವರ, ಶಿರಸಿ, ಮುಂಡಗೋಡ ತಾಲ್ಲೂಕುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸದ್ಯ ಅವರಿಗೆ ಪ್ರತಿ ಕೆ.ಜಿ ಪ್ಲಾಸ್ಟಿಕ್ ವಸ್ತುವಿಗೆ ಸರಾಸರಿ ₹ 10ರಂತೆ ದರ ಸಿಗುತ್ತಿದೆ. ಒಂದು ಕೆ.ಜಿ.ಯಾಗಲು 100ರಿಂದ 150 ಬಾಟಲಿಗಳನ್ನು ಸಂಗ್ರಹಿಸಬೇಕು. ಆದರೆ, ಪ್ಲಾಸ್ಟಿಕ್ ಕಾಳುಗಳನ್ನಾಗಿ ಮಾಡಿದಾಗ ಪ್ರತಿ ಕೆ.ಜಿ.ಗೆ ₹ 60 ದರವಿದೆ. ಈ ಘಟಕವನ್ನು ಅಳವಡಿಸುವ ಮೂಲಕ ಅವರ ಆದಾಯ ವೃದ್ಧಿಗೆ ಅವಕಾಶವಾಗಲಿದೆ’ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಅಜ್ಜಪ್ಪ ಸೊಗಲದ ‘ಪ್ರಜಾವಾಣಿ’ಗೆ ತಿಳಿಸಿದರು.

––––––

* ಪ್ಲಾಸ್ಟಿಕ್ ಬಾಟಲಿಗಳನ್ನು ಇಡಿಯಾಗಿ ಮಾರಾಟ ಮಾಡಿದಾಗ ಕಡಿಮೆ ದರ ಸಿಗುತ್ತದೆ. ಮೌಲ್ಯವರ್ಧನೆ ಮಾಡಿದಾಗ ಆದಾಯ ವೃದ್ಧಿಗೆ ಸಹಕಾರಿಯಾಗುತ್ತದೆ.

– ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT