ಸರ್ಕಾರಿ ಕಾಲೇಜಿನ ಗೋಳು; ವಿದ್ಯಾರ್ಥಿಗಳ ಅಳಲು

7
ಡಿಸಿಸಿ ಅಧ್ಯಕ್ಷರಿಗೆ ಮನವಿ ಸಲ್ಲಿಕೆ

ಸರ್ಕಾರಿ ಕಾಲೇಜಿನ ಗೋಳು; ವಿದ್ಯಾರ್ಥಿಗಳ ಅಳಲು

Published:
Updated:
Deccan Herald

ಶಿರಸಿ: ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿರುವ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಸ್ಯೆ ನಿವಾರಿಸುವಂತೆ ಒತ್ತಾಯಿಸಿ, ಕಾಲೇಜಿನ ಕೆಲವು ವಿದ್ಯಾರ್ಥಿಗಳು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಅವರಿಗೆ ಗುರುವಾರ ಇಲ್ಲಿ ಮನವಿ ಸಲ್ಲಿಸಿದರು.

ಸರ್ಕಾರಿ ಪದವಿ ಕಾಲೇಜಿನಲ್ಲಿ 2500ರಿಂದ 3000 ವಿದ್ಯಾರ್ಥಿಗಳಿದ್ದಾರೆ. ರಾಜ್ಯದಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳಿರುವ ಕಾಲೇಜು ಇದೆಂದು ಗುರುತಿಸಿಕೊಂಡಿದೆ. ಆದರೆ, ಇಲ್ಲಿ ವಿದ್ಯಾರ್ಥಿಗಳಿಗೆ ಕುಳಿತು ಪಾಠ ಕೇಳಲು ತರಗತಿ ಕೊಠಡಿಗಳ ಕೊರತೆ ಇದೆ. ಹಾಲಿ ತರಗತಿ ನಡೆಯುತ್ತಿರುವ ಹಳೆಯ ಕಟ್ಟಡ ಮಳೆಯಲ್ಲಿ ಸೋರುತ್ತದೆ. ಕಾಲೇಜಿನಲ್ಲಿ ಶೌಚಾಲಯ ವ್ಯವಸ್ಥೆ ಸರಿಯಾಗಿಲ್ಲ. ನೀರಿನ ವ್ಯವಸ್ಥೆ ಕೂಡ ಇಲ್ಲ. ವಿದ್ಯಾರ್ಥಿನಿಯರಿಗೆ ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಅಳಲು ಹೇಳಿಕೊಂಡರು.

ಕಾಲೇಜಿಗೆ ಪ್ರವೇಶ ಪಡೆದು ತಿಂಗಳಾದರೂ ತರಗತಿಗಳು ಆರಂಭವಾಗಿಲ್ಲ. ಇದರಿಂದ ಪಠ್ಯಕ್ರಮ ಹಿಂದೆ ಬಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಯ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ. ಅತಿಥಿ ಶಿಕ್ಷಕರ ನೇಮಕ ಆಗಿಲ್ಲ. ಕಾಯಂ ಶಿಕ್ಷಕರು ತರಗತಿ ನಡೆಸಲು ಪ್ರಾಚಾರ್ಯರು ಅವಕಾಶ ನೀಡುತ್ತಿಲ್ಲ. ಪ್ರಾಚಾರ್ಯರು ಮಕ್ಕಳ ಸಮಸ್ಯೆ ಕೇಳಲು ಸಿದ್ಧರಿಲ್ಲ. ಇದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಮನವಿ ಸ್ವೀಕರಿಸಿದ ಭೀಮಣ್ಣ ಅವರು, ಈ ಕುರಿತು ಸಂಬಂಧಪಟ್ಟ ಸಚಿವರ ಜತೆ ಚರ್ಚಿಸಿ, ಸಮಸ್ಯೆ ಪರಿಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ವಿದ್ಯಾರ್ಥಿ ಪ್ರಮುಖರಾದ ಅಭಿಷೇಕ, ಸ್ನೇಹ, ಸುಷ್ಮಾ, ರಾಘು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !