ಈ ವರ್ಷದಿಂದಲೇ ಇಂಗ್ಲಿಷ್ ಮಾಧ್ಯಮ ಶಾಲೆ

ಶುಕ್ರವಾರ, ಏಪ್ರಿಲ್ 26, 2019
24 °C
ಎರಡೂ ಶೈಕ್ಷಣಿಕ ಜಿಲ್ಲೆಗಳಲ್ಲಿ 26 ಶಾಲೆಗಳ ಪರಿವರ್ತನೆಗೆ ಸರ್ಕಾರಕ್ಕೆ ಪಟ್ಟಿ ರವಾನೆ

ಈ ವರ್ಷದಿಂದಲೇ ಇಂಗ್ಲಿಷ್ ಮಾಧ್ಯಮ ಶಾಲೆ

Published:
Updated:

ಕಾರವಾರ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ಬಾರಿಯ ಬಜೆಟ್‌ನಲ್ಲಿ ಪ್ರಸ್ತಾಪಿಸಿದಂತೆ, ಸರ್ಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಆರಂಭಕ್ಕೆ ಜಿಲ್ಲೆಯಲ್ಲೂ ಸಕಲ ಸಿದ್ಧತೆ ನಡೆದಿದೆ.

ಈ ಶೈಕ್ಷಣಿಕ ವರ್ಷದಿಂದಲೇ ಶಾಲೆಗಳು ಆರಂಭವಾಗಲಿದ್ದು, ಕಾರವಾರ ಹಾಗೂ ಶಿರಸಿ ಎರಡೂ ಶೈಕ್ಷಣಿಕ ಜಿಲ್ಲೆಯಲ್ಲಿ ತಲಾ 13ರಂತೆ, ಒಟ್ಟು 26 ಶಾಲೆಗಳನ್ನು ಆಂಗ್ಲಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸಲು ಸರ್ಕಾರಕ್ಕೆ ಪಟ್ಟಿ ಸಲ್ಲಿಕೆಯಾಗಿದೆ.

ಶಾಲೆಗಳ ಆಯ್ಕೆ: ‘ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಐದು ಶಾಲೆಗಳಂತೆ ಆಯ್ಕೆ ಮಾಡಿ ಪಟ್ಟಿ ಕಳುಹಿಸಲು ಇಲಾಖೆಯಿಂದ ಸುತ್ತೋಲೆ ಬಂದಿತ್ತು. ಅದರಂತೆ ಪಟ್ಟಿ ಸಿದ್ಧಪಡಿಸಿ ಕಳುಹಿಸಲಾಗಿದೆ. ಅಲ್ಲಿಂದ ಮರು ಉತ್ತರ ಬಂದ ಬಳಿಕ ಶಾಲೆಗಳು ಕಾರ್ಯಾರಂಭ ಮಾಡಲಿವೆ’ ಎನ್ನುತ್ತಾರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು.

‘200ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇರುವ ಹಾಗೂ ಮೂಲ ಸೌಕರ್ಯಗಳು ಉತ್ತಮವಾಗಿರುವ ಶಾಲೆಗಳನ್ನು ಆಯ್ಕೆ ಮಾಡಲು ಬಂದ ಸುತ್ತೋಲೆಯಂತೆ ಪಟ್ಟಿ ಸಿದ್ಧಪಡಿಸಲಾಗಿತ್ತು. ಈ ಶಾಲೆಯಲ್ಲಿ ಕನ್ನಡ ವಿಭಾಗವೂ ಇರುತ್ತದೆ. ದಾಖಲಾತಿಯ ವೇಳೆ ಕನ್ನಡ ಅಥವಾ ಇಂಗ್ಲಿಷ್ ಆಯ್ಕೆ ವಿಚಾರ ಪಾಲಕರಿಗೆ ಬಿಡಲಾಗುತ್ತದೆ’ ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ದಿವಾಕರ ಶೆಟ್ಟಿ ವಿವರಿಸಿದರು.

ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದರೆ ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳ ಭವಿಷ್ಯಕ್ಕೆ ಅನುಕೂಲವಾಗಲಿದೆ ಎಂಬ ಕಾರಣಕ್ಕೆ ಪೋಷಕರು, ಸರ್ಕಾರಿ ಶಾಲೆಗಳನ್ನು ಬಿಟ್ಟು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದರು. ಇದರಿಂದಾಗಿ ಸರ್ಕಾರಿ ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆ ಕಡಿಮೆಯಾದ ಕಾರಣ ಅನೇಕ ಕಡೆ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಿತ್ತು.

ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಆರಂಭಿಸಲು ಸರ್ಕಾರ ತೀರ್ಮಾನಿಸಿದಂತೆ ಈ ಸಾಲಿನಲ್ಲೇ ಅದು ಜಾರಿಗೆ ಬರಲಿದೆ.

ಶಿಕ್ಷಕರಿಗೆ ತರಬೇತಿ: ‘ಸದ್ಯ ಇರುವ ಶಾಲೆಗಳಲ್ಲೇ ಆಂಗ್ಲ ಮಾಧ್ಯಮವನ್ನು ಪ್ರಾರಂಭಿಸಲಾಗುತ್ತಿದೆ. ಹೀಗಾಗಿ, ಆಯ್ಕೆಯಾಗಿರುವ ಶಾಲೆಗಳ ಶಿಕ್ಷಕರಿಗೆ ಒಂದು ತಿಂಗಳ ಇಂಗ್ಲಿಷ್ ತರಬೇತಿ ನೀಡಲಾಗುತ್ತದೆ. ಇದರ ಜತೆಗೆ, ಮತ್ತೆ 10 ದಿನಗಳ ರಿಫ್ರೆಶರ್ ಕೋರ್ಸ್ ಅನ್ನು ನೀಡಲಾಗುತ್ತದೆ’ ಎಂದು ದಿವಾಕರ್ ಶೆಟ್ಟಿ ಮಾಹಿತಿ ನೀಡಿದರು.

‘ಕನ್ನಡ ಶಾಲೆಗೆ ಆದ್ಯತೆ ನೀಡಿ’: ‘ಇಂದಿನ ಮಕ್ಕಳಿಗೆ ಆಂಗ್ಲಭಾಷೆ ಅವಶ್ಯಕ ನಿಜ. ಆದರೆ, ಮಾತೃಭಾಷೆಯನ್ನು ಮೂಲೆಗುಂಪಾಗಿಸಿ ಇನ್ನೊಂದು ಭಾಷೆಗೆ ಪ್ರಾಧಾನ್ಯತೆ ನೀಡುವುದು ಸರಿಯಲ್ಲ. ಉತ್ತರ ಕನ್ನಡ ಗಡಿ ಜಿಲ್ಲೆ. ಇಲ್ಲಿ ಕನ್ನಡ ಶಾಲೆಗಳು ಅಳಿವಿನಂಚಿಲ್ಲಿವೆ. ಇವುಗಳನ್ನು ಮೊದಲು ಅಭಿವೃದ್ಧಿ ಪಡಿಸಲಿ. ಜತೆಗೆ, ಆಂಗ್ಲ ಮಾಧ್ಯವನ್ನು ಪ್ರಾರಂಭಿಸುವ ಬದಲು ಈಗಿರುವ ಇಂಗ್ಲಿಷ್ ಪಾಠಗಳನ್ನೇ ಹೆಚ್ಚು ಪರಿಣಾಮಕಾರಿಯಾಗಿ ಕಲಿಸಲು ಶಿಕ್ಷಕರಿಗೆ ವಿಶೇಷ ತರಬೇತಿಗಳನ್ನು ನೀಡಿ. ಆಂಗ್ಲಭಾಷೆಗಾಗಿ ಹೆಚ್ಚುವರಿ ಸಮಯವನ್ನು ಬೇಕಾದರೂ ಮೀಸಲಿಡಲಿ’ ಎನ್ನುವುದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರ ಅಭಿಪ್ರಾಯ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !