ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ ವಿಮಾನ ನಿಲ್ದಾಣ: ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ

Last Updated 27 ಆಗಸ್ಟ್ 2021, 13:32 IST
ಅಕ್ಷರ ಗಾತ್ರ

ಕಾರವಾರ: ಅಂಕೋಲಾ ತಾಲ್ಲೂಕಿನ ಅಲಗೇರಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ನಾಗರಿಕ ವಿಮಾನ ನಿಲ್ದಾಣಕ್ಕೆ ಭೂ ಸ್ವಾಧೀನ ಸಂಬಂಧ ಸರ್ಕಾರವು ಅಂತಿಮ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 87 ಎಕರೆ 14 ಗುಂಟೆ ಖಾಸಗಿ ಮಾಲೀಕತ್ವದ ಜಮೀನು ಸ್ವಾಧೀನಕ್ಕೆ ಒಳಪಡಲಿದೆ.

ಅಲಗೇರಿ, ಬೇಲೆಕೇರಿ ಹಾಗೂ ಭಾವಿಕೇರಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಜಮೀನು ಇದರ ವ್ಯಾಪ್ತಿಯಲ್ಲಿವೆ. ಭೂ ಸ್ವಾಧೀನ ಪ್ರಕ್ರಿಯೆಗೆ ಕುಮಟಾ ಉಪ ವಿಭಾಗಾಧಿಕಾರಿಯನ್ನು ವಿಶೇಷ ಭೂ ಸ್ವಾಧೀನ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಶ್ರೀನಿವಾಸ.ಎ ಅವರು ಭೂ ಸ್ವಾಧೀನ ಕಾಯ್ದೆ 2013ರ ಕಲಂ (1) ಹಾಗೂ 19 (2) ಅಡಿ ಈ ಆದೇಶ ಮಾಡಿದ್ದಾರೆ.

ಭೂ ಸ್ವಾಧೀನಕ್ಕೆ ಬೇಕಾದ ವೆಚ್ಚವನ್ನು ಸಂಬಂಧಿಸಿದ ಇಲಾಖೆಗಳಿಂಧ ಭರಿಸಿಕೊಳ್ಳಬೇಕು. ಭೂ ಸ್ವಾಧೀನದ ಕರಡು ಐ ತೀರ್ಪು ಪ್ರಕಟವಾಗುವ ಮೊದಲು ಈ ಕಾರ್ಯವಾಗಬೇಕು. ಜಮೀನು ಕಳೆದುಕೊಳ್ಳುವವರಿಗೆ ಹೊಸ ಭೂಸ್ವಾಧೀನ ಕಾಯ್ದೆಯಂತೆ ಹಾಲಿ ಸರ್ಕಾರಿ ದರದ ನಾಲ್ಕು‍ ಪಟ್ಟು ಪರಿಹಾರ ಸಿಗಲಿದೆ.

ಕದಂಬ ನೌಕಾನೆಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದ್ದು, ಅದನ್ನು ಬಳಸಿಕೊಂಡು ನಾಗರಿಕ ವಿಮಾನ ನಿಲ್ದಾಣವೂ ತಲೆಯೆತ್ತಲಿದೆ. ಹೆಚ್ಚುವರಿಯಾಗಿ ಸ್ವಾಧೀನ ಪಡಿಸಿಕೊಳ್ಳಲು ಬೇಕಾಗಿರುವ ಜಮೀನಿನ ಸರ್ವೆ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ನಾಗರಿಕ ವಿಮಾನ ನಿಲ್ದಾಣದ ಟರ್ಮಿನಲ್ ಕಾಮಗಾರಿಯನ್ನು ಕರ್ನಾಟಕ ರಾಜ್ಯ ಮೂಲ ಸೌಕರ್ಯ ಅಭಿವೃದ್ಧಿ ನಿಗಮವು ನಡೆಸಲಿದೆ.

ಈ ಸಂಬಂಧ ಶೀಘ್ರವೇ ನೌಕಾದಳ ಮತ್ತು ನಿಗಮ ನಡುವೆ ಒಪ್ಪಂದ ಏರ್ಪಡಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ. ಎಲ್ಲವೂ ಸುಗಮವಾಗಿ ಸಾಗಿದರೆ 2025ರ ವೇಳೆಗೆ ಕಾರವಾರದಲ್ಲಿ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT