ತುಂಬರಗಿ ಕಿರಿಯ ಪ್ರಾಥಮಿಕ ಶಾಲೆ ಕಸ ಮುಕ್ತ ಆವರಣದ ಹಸಿರುಮಯ...

7
ಮುಂಡಗೋಡ ತಾಲ್ಲೂಕು

ತುಂಬರಗಿ ಕಿರಿಯ ಪ್ರಾಥಮಿಕ ಶಾಲೆ ಕಸ ಮುಕ್ತ ಆವರಣದ ಹಸಿರುಮಯ...

Published:
Updated:
Deccan Herald

ಮುಂಡಗೋಡ: ಮಕ್ಕಳ ಮನಸ್ಸನ್ನು ಆಕರ್ಷಿಸುವ ವಿವಿಧ ಜಾತಿಯ ಹೂವಿನ ಗಿಡಗಳ ಸಾಲು. ಪ್ರವೇಶ ದ್ವಾರದಲ್ಲಿಯೇ ಆಲಂಕಾರಿಕ ಗಿಡಗಳ ನೆರಳಿನ ಸ್ವಾಗತ. ರಾಡಿಮುಕ್ತ ಇರಲು ಸಿಮೆಂಟಿನಿಂದ ಮಾಡಿರುವ ನೆಲಹಾಸು, ಸಣ್ಣ ಸಣ್ಣ ಬಿದಿರುಗಳನ್ನು ಬಳಸಿ ಕೈತೋಟಕ್ಕೆ ಅಳವಡಿಸಿರುವ ಬೇಲಿ, ತಂಬಾಕು ಮುಕ್ತ ಪ್ರದೇಶದೊಂದಿಗೆ ತ್ಯಾಜ್ಯ ಮುಕ್ತ ಆವರಣ ಈ ಶಾಲೆಗೆ ಗರಿ ಮೂಡಿಸಿದೆ.

ತಾಲ್ಲೂಕಿನ ಚಿಗಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತುಂಬರಗಿ ಕಿರಿಯ ಪ್ರಾಥಮಿಕ ಶಾಲೆ ‘ಹಸಿರು ಶಾಲೆ’ಯಾಗಿ ಆಕರ್ಷಿಸುತ್ತಿದೆ. ಶಾಲಾ ಆವರಣದಲ್ಲಿ ಪಪ್ಪಾಯಿ, ನೆಲ್ಲಿಕಾಯಿ, ತೆಂಗು, ಬಾಳೆ ಗಿಡಗಳಿವೆ. 25ಕ್ಕೂ ಹೆಚ್ಚು ಜಾತಿಯ ಗಿಡಗಳನ್ನು ಸಾಲು ಸಾಲಾಗಿ ಬೆಳೆಸಲಾಗಿದೆ. ಮಧ್ಯಾಹ್ನದ ಬಿಸಿ ಊಟಕ್ಕೆಂದು ಟೊಮೆಟೊ, ಬದನೆಕಾಯಿ, ಕರಿಬೇವು, ಹೀರೆಕಾಯಿ, ಸೌತೆಕಾಯಿ ಬಳ್ಳಿಗಳನ್ನು ಬೆಳೆಸಲಾಗಿದೆ. ರಾಶಿಯಾಗಿ ಬಿಟ್ಟಿರುವ ಗುಲಾಬಿ, ಡೇರೆ ಹೂಗಳು ಶಾಲೆಯ ಅಂದಕ್ಕೆ ಮತ್ತಷ್ಟು ಸೊಬಗು ನೀಡುತ್ತಿವೆ.

‘16 ವರ್ಷಗಳಿಂದ ಕರ್ತವ್ಯ ಸಲ್ಲಿಸುತ್ತಿರುವ ಶಿಕ್ಷಕ ಪ್ರಕಾಶ ಪವಾರ್ ಈ ಶಾಲೆಯನ್ನು ಬೇರೆಯವರೂ ಬಂದು ನೋಡುವಂತೆ ಮಾಡಿದ್ದಾರೆ. ಕಡಿಮೆ ಜಾಗವಿದ್ದರೂ ಆವರಣವನ್ನು ಹಸಿರುಮಯ ಮಾಡಿದ್ದಾರೆ. ನೀರಿನ ಟ್ಯಾಂಕ್‌, ಸಭಾಭವನ, ಮಕ್ಕಳಿಗೆ ವಾಚನಾಲಯ ಎಲ್ಲವನ್ನು ಸರ್ಕಾರದ ಅನುದಾನದಲ್ಲಿ ಅಚ್ಚುಕಟ್ಟಾಗಿ ಮಾಡಿಸಿಕೊಳ್ಳುವಲ್ಲಿ ಶ್ರಮವಹಿಸಿದ್ದಾರೆ. ಶಾಲೆಯ ಎಲ್ಲ ಕಾರ್ಯಕ್ರಮಗಳಲ್ಲಿ ಗ್ರಾಮಸ್ಥರು ಸಂತಸದಿಂದ ಪಾಲ್ಗೊಳ್ಳುತ್ತಾರೆ’ ಎನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ ಉಮೇಶ ನಿಂಬಾಯಿ.

‘ಅನುದಾನ ಇಲ್ಲದಿದ್ದರೂ ಗ್ರಾಮಸ್ಥರು ಹಾಗೂ ಶಿಕ್ಷಕ ಜತೆಯಾಗಿ ಶಾಲೆಯ ಅಭಿವೃದ್ದಿಗೆ ಮುಂದಾಗುತ್ತೇವೆ. ಇಲ್ಲಿ ಕಲಿತ ಮಕ್ಕಳು ಬೇರೆ ಕಡೆ ಪ್ರತಿಭಾವಂತ ವಿದ್ಯಾರ್ಥಿಗಳಾಗಿ ಶಿಕ್ಷಣ ಮುಂದುವರಿಸಿದ್ದಾರೆ. ಎರಡು ವರ್ಷಗಳ ಹಿಂದೆ ಈ ಶಾಲೆಯ ವಿದ್ಯಾರ್ಥಿನಿ ದ್ವಿತೀಯ ಪಿಯುನಲ್ಲಿ ತಾಲ್ಲೂಕಿಗೆ ಪ್ರಥಮರಾಗಿದ್ದರು’ ಎಂದು ಅವರು ಹೇಳಿದರು.

‘2002ರಲ್ಲಿ ಈ ಶಾಲೆಗೆ ಬಂದಿದ್ದು, 14 ವರ್ಷಗಳ ಕಾಲ ಏಕೋಪಾಧ್ಯಾಯನಾಗಿ ಸೇವೆ ಸಲ್ಲಿಸಿದ್ದೇನೆ. ಇರುವ ಆವರಣದಲ್ಲಿ ಸಾಧ್ಯವಾದಷ್ಟು ಗಿಡಗಳನ್ನು ಬೆಳೆಸಲಾಗಿದೆ. ಕೈತೋಟ ನಿರ್ವಹಣೆ, ಪರಿಸರ ಕಾಳಜಿ ಕುರಿತು ಶಿಕ್ಷಣ ನೀಡಲು ಇದು ಸಹಕಾರಿಯಾಗಿದೆ. ಮಕ್ಕಳು ಕುಳಿತುಕೊಂಡು ಊಟ ಮಾಡಲು ಭೋಜನಾಲಯ ನಿರ್ಮಿಸಿದ್ದು, ಊಟದ ಅವಧಿ ನಂತರ ಅದು ವಾಚನಾಲಯ ಆಗಿ ಬಳಕೆಯಾಗುತ್ತಿದೆ. ಶಾಲೆಯ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಸಹಕಾರ ಬಹಳಷ್ಟಿದೆ’ ಎನ್ನುತ್ತಾರೆ ಶಿಕ್ಷಕ ಪ್ರಕಾಶ ಪವಾರ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !