ಭಾನುವಾರ, ನವೆಂಬರ್ 17, 2019
24 °C

ನೆರೆ ಪರಿಹಾರ ವಾಪಸ್ ಪಡೆದ ಆಡಳಿತ!

Published:
Updated:
Prajavani

ಶಿರಸಿ: ನೆರೆ ಸಂದರ್ಭದಲ್ಲಿ ಮನೆ ಕಳೆದುಕೊಂಡ ಅತಿಕ್ರಮಣದಾರರಿಗೆ ಪರಿಹಾರ ನೀಡುವುದಾಗಿ ಹೇಳಿದ್ದ ಜಿಲ್ಲಾಡಳಿತದ ಭರವಸೆ ಹುಸಿಯಾಗಿದೆ ಎಂದು ಮನೆ ಕಳೆದುಕೊಂಡವರು ಆರೋಪಿಸಿದ್ದಾರೆ.

ಆಗಸ್ಟ್‌ನಲ್ಲಿ ನಿರಂತರ ಸುರಿದ ಮಳೆಗೆ ಇಲ್ಲಿನ ಗಣೇಶನಗರದಲ್ಲಿ ಅನೇಕರು ಮನೆ ಕಳೆದುಕೊಂಡಿದ್ದಾರೆ. ಅವರಿಗೆ ಪರಿಹಾರ ವಿತರಿಸಿದ್ದ ತಾಲ್ಲೂಕು ಆಡಳಿತ ಅದನ್ನು ವಾಪಸ್ ಪಡೆದಿದೆ. ‘ಆಗಸ್ಟ್ 14ರಂದು ₹ 95,100 ಪರಿಹಾರ ಮೊತ್ತ ಜಮಾ ಮಾಡಿದ್ದ ಆಡಳಿತ 21ರಂದು ಅದನ್ನು ವಾಪಸ್ ಪಡೆದಿದೆ. ಈಗ ಹಣವೂ ಇಲ್ಲ, ಮನೆಯೂ ಇಲ್ಲದಂತಾಗಿದೆ. ತಾತ್ಕಾಲಿಕ ಶೆಡ್‌ನಲ್ಲಿ ಉಳಿದಿದ್ದೇವೆ. ಸರ್ಕಾರ ಮನೆ ಕಟ್ಟಿಕೊಳ್ಳಲು ನಮಗೆ ನೆರವು ನೀಡಬೇಕು’ ಎಂದು ನಿರ್ಮಲಾ ಬೋವಿವಡ್ಡರ್ ವಿನಂತಿಸಿದರು.

‘ಮನೆಯ ಒಂದು ಭಾಗ ಸಂಪೂರ್ಣ ಕುಸಿದಿದೆ. ಉಳಿದಿರುವ ಒಂದು ಕೊಠಡಿಯಲ್ಲಿ ಉಳಿದುಕೊಂಡಿದ್ದೇವೆ. ಇನ್ನೂ ಆಗಾಗ ಮಳೆ ಬರುತ್ತಿರುವುದರಿಂದ ಇರುವ ಮನೆಯೂ ಬಿದ್ದರೆಂಬ ಆತಂಕ ಎದುರಾಗಿದೆ. ಮನೆ ಮುರಿದು ಬಿದ್ದಾಗ ಮೂರು ಬಾರಿ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿದ್ದರು. ಆದರೆ, ಇದರಿಂದ ಯಾವ ಪ್ರಯೋಜನವೂ ಆಗಿಲ್ಲ’ ಎಂದರು ಮನೆ ಕಳೆದುಕೊಂಡಿರುವ ಚಂದ್ರಕಾಂತ.

 

 

ಪ್ರತಿಕ್ರಿಯಿಸಿ (+)