ಮಂಗಳವಾರ, ಅಕ್ಟೋಬರ್ 15, 2019
29 °C
ಮೇಲಿನ ಓಣಿಕೇರಿ ಪಂಚಾಯ್ತಿಗೆ ಗಾಂಧಿ ಗ್ರಾಮ ಪುರಸ್ಕಾರ

ಶಿರಸಿ: ಕ್ಯಾಲೆಂಡರ್ ಮೂಡಿಸಿದ ನಿರಾತಂಕ !

Published:
Updated:
Prajavani

ಶಿರಸಿ: ಈ ಊರಿಗೆ ಗುಜರಿ ಖರೀದಿ, ತಲೆಮೇಲೆ ಸಾಮಗ್ರಿ ಹೊತ್ತು ಮಾರಲು ಬರುವ ಅನಾಮಿಕರು ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಮುಗ್ಧ ಗ್ರಾಮಸ್ಥರು ವಂಚನೆಗೊಳಗಾಗುವುದನ್ನು ತಡೆಗಟ್ಟಲು ಸ್ಥಳೀಯ ಗ್ರಾಮ ಪಂಚಾಯ್ತಿ ರೂಪಿಸಿರುವ ಕಾರ್ಯಕ್ರಮವಿದು !

ತಾಲ್ಲೂಕಿನ ಮೇಲಿನ ಓಣಿಕೇರಿ ಗ್ರಾಮ ಪಂಚಾಯ್ತಿಯು ಗಾಂಧಿಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಪಂಚಾಯ್ತಿ ರೂಪಿಸಿರುವ ಕ್ರಿಯಾಶೀಲ ಯೋಜನೆಗಳಲ್ಲಿ ಗ್ರಾಮ ಕಾಳಜಿಯೂ ಒಂದಾಗಿದೆ. ಅನಾಮಿಕರು ಬಂದು ಹಳ್ಳಿಗರಿಗೆ ಮೋಸ ಮಾಡುವ ಸಂದರ್ಭಗಳನ್ನು ಗಮನಿಸಿದ ಪಂಚಾಯ್ತಿ, ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಇದಕ್ಕಾಗಿ ಒಂದು ಕ್ಯಾಲೆಂಡರ್‌ ತಯಾರಿಸಿ ಪಂಚಾಯ್ತಿ ವ್ಯಾಪ್ತಿಯ ಎಲ್ಲ 680 ಮನೆಗಳಿಗೆ ವಿತರಿಸಿದೆ.

ಈ ಕ್ಯಾಲೆಂಡರ್‌ನಲ್ಲಿ ಆಂಬ್ಯುಲೆನ್ಸ್ ಸಂಪರ್ಕ ಸಂಖ್ಯೆ, ಜನಪ್ರತಿನಿಧಿಗಳು, ಸರ್ಕಾರಿ ಕಚೇರಿ ಸಂಪರ್ಕ ಸಂಖ್ಯೆ, ಸಾಮಾಜಿಕ ಭದ್ರತಾ ಯೋಜನೆಗಳ ವಿವರ, ಅದಕ್ಕೆ ಸಲ್ಲಿಸಬೇಕಾದ ಅಗತ್ಯ ದಾಖಲೆಗಳು, ಅಂಚೆ ವಿಮಾ ಯೋಜನೆ ಮಾಹಿತಿಗಳನ್ನು ಸೇರಿಸಲಾಗಿದೆ. ‘ವ್ಯಾಪಾರಕ್ಕೆ ಬರುವವರು ಮೋಸ ಮಾಡಿದರೆ, ಅವರು ಅನುಮತಿ ಪಡೆಯುವಾಗ ನೀಡಿದ ದಾಖಲೆ ಆಧರಿಸಿ, ಪೊಲೀಸ್ ದೂರು ದಾಖಲಿಸಲು ಸಾಧ್ಯವಾಗುತ್ತದೆ. ಒಂದೆರಡು ಪ್ರಕರಣಗಳು ನಡೆದಾಗ ನಾವು ಅನುಷ್ಠಾನಗೊಳಿಸಿರುವ ಈ ಯೋಜನೆ ಸಹಾಯಕ್ಕೆ ಬಂತು’ ಎನ್ನುತ್ತಾರೆ ಕಾರ್ಯದರ್ಶಿ ಗಣೇಶ ಹೆಗಡೆ.

ನಾಲ್ಕು ವರ್ಷಗಳ ಹಿಂದೆ ರಚನೆಯಾಗಿರುವ ಈ ಪಂಚಾಯ್ತಿ ವ್ಯಾಪ್ತಿಯ ರೈತರ ಬೆಟ್ಟದಲ್ಲಿ ಇಂಗುಗುಂಡಿ ನಿರ್ಮಿಸಲಾಗಿದೆ. 1000ಕ್ಕೂ ಹೆಚ್ಚು ಇಂಗುಗುಂಡಿಗಳು ಜಲದ ಸೆಲೆಯಾಗಿವೆ. ಶಾಲೆಯಲ್ಲೂ ನೀರಿಂಗಿಸುವ ಕಾರ್ಯಕ್ರಮವನ್ನು ಪಂಚಾಯ್ತಿ ಅನುಷ್ಠಾನಗೊಳಿಸಿದೆ. ಗ್ರಾಮಸ್ಥರಿಗೆ ಪಂಚಾಯ್ತಿ ಯೋಜನೆ ತಿಳಿಸುವ ನಿಟ್ಟಿನಲ್ಲಿ ‘ಗ್ರಾಮವಾಣಿ’ ವಾಟ್ಸ್‌ಆ್ಯಪ್ ಗ್ರೂಪ್‌ ಅನ್ನು ವರ್ಷದ ಹಿಂದೆಯೇ ರಚಿಸಲಾಗಿದೆ. ಪ್ರತಿ ಮನೆಯ ಒಬ್ಬ ವ್ಯಕ್ತಿಯನ್ನು ಈ ಗ್ರೂಪ್‌ನಲ್ಲಿ ಸೇರಿಸಿಕೊಂಡು ಮಾಹಿತಿ ನೀಡುತ್ತಿದೆ.

‘ಕರ ವಸೂಲಿ, ವಸತಿ ಯೋಜನೆ ಕಾರ್ಯಕ್ರಮ ಅನುಷ್ಠಾನದಲ್ಲಿ ಪಂಚಾಯ್ತಿ ಶೇ 100ರ ಸಾಧನೆ ಮಾಡಿದೆ. ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ’ ಎಂದು ಪ್ರಭಾರಿ ಪಿಡಿಒ ಯೋಗಿತಾ ಹೆಗಡೆ ಹೇಳಿದರು.

*
ಪಂಚಾಯ್ತಿ ಅಧ್ಯಕ್ಷರು, ಸದಸ್ಯರ ಮಾರ್ಗದರ್ಶನದಲ್ಲಿ  ಅತಿವೃಷ್ಟಿಪೀಡಿತ ಡೋಂಗ್ರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಊರಿನ ಸುಮಾರು 80 ಜನರು ತೆರಳಿ ಶ್ರಮದಾನ ಮಾಡಿದ್ದಾರೆ.
–ಗಣೇಶ ಹೆಗಡೆ, ಪಂಚಾಯ್ತಿ ಕಾರ್ಯದರ್ಶಿ

Post Comments (+)