ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲ್ಲಾಪುರ: ‘ಅರಣ್ಯ ನಾಶ ಮಾಡಿ ರಸ್ತೆ ನಿರ್ಮಾಣ: ಸತ್ಯಕ್ಕೆ ದೂರ’

Last Updated 14 ಜೂನ್ 2021, 15:14 IST
ಅಕ್ಷರ ಗಾತ್ರ

ಯಲ್ಲಾಪುರ: ‘ದೇಹಳ್ಳಿ ಗ್ರಾಮ ಪಂಚಾಯ್ತಿಯಿಂದ ಕುಂಬ್ರಾಳ ಜಲಪಾತಕ್ಕೆ ಅರಣ್ಯ ನಾಶ ಮಾಡಿ ರಸ್ತೆ ಮಾಡಲಾಗಿದೆ ಎಂಬ ಆರೋಪವು ಸತ್ಯಕ್ಕೆ ದೂರವಾಗಿದೆ’ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಪತಿ ಹಳೆಮನೆ ಸ್ಪಷ್ಟನೆ ನೀಡಿದ್ದಾರೆ.

‘ಗ್ರಾಮ ಪಂಚಾಯಿತಿಯಲ್ಲಿ ಹಿಂದಿನ ಅವಧಿಯಲ್ಲಿ ಮಾಡಿದ್ದ ಠರಾವನ್ನು ಅನುಷ್ಠಾನಕ್ಕೆ ತಂದಿದ್ದೇವೆಯೇ ಹೊರತು, ಹೊಸತಾಗಿ ಏನೂ ಮಾಡಿಲ್ಲ. ಕಳೆದ ವರ್ಷ ಫೆ.12ರಂದು ಉಮಾ ಪಟಗಾರ ಅವರ ಅಧ್ಯಕ್ಷತೆಯಲ್ಲಿ ದೇಹಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಸಮಿತಿ ಸಭೆ ನಡೆದಿತ್ತು. ಅದರಲ್ಲಿ ಕುಂಬ್ರಾಳ ಜಲಪಾತಕ್ಕೆ ದಾರಿ ನಿಮಿಸಬೇಕೆಂದು ಠರಾವು ಸ್ವೀಕರಿಸಲಾಗಿತ್ತು. ಅಂದಿನ ನಿರ್ಣಯದಂತೆ ಈಗಿನ ಸಮಿತಿಯು ಕಾರ್ಯ ನಿರ್ವಹಿಸಿದೆ’ ಎಂದು ತಿಳಿಸಿದ್ದಾರೆ.

‘ಗ್ರಾಮ ಪಂಚಾಯಿತಿಗೆ ಆದಾಯ, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಆ ದಾರಿಯಲ್ಲಿದ್ದ ಜಾರುವ ಕಲ್ಲು ಬಂಡೆ ತೆರವುಗೊಳಿಸಲಾಗಿದೆ. ಸ್ವಲ್ಪ ಅಗಲವಾದ ರಸ್ತೆಯಾಗಿ ದುರಸ್ತಿ ಮಾಡಿದ್ದೇವೆಯೇ ವಿನಾ ಮರಗಳ ಮಾರಣ ಹೋಮ ಮಾಡಿಲ್ಲ. ಒಣಗಿ ಬಿದ್ದ, ಗಾಳಿಗೆ ಬಿದ್ದ ಮರಗಳನ್ನು ಗ್ರಾಮ ಪಂಚಾಯಿತಿಯವರೇ ಬೀಳಿಸಿದ್ದು ಎಂಬಂತೆ ಬಿಂಬಿಸಲಾಗಿದೆ. ಇದು ಸತ್ಯಕ್ಕೆ ದೂರವಾದ ಸಂಗತಿ. ಈ ಆರೋಪವು ರಾಜಕೀಯ ದುರುದ್ದೇಶದಿಂದ ಕೂಡಿದ್ದು, ಕಳೆದ ಗ್ರಾಮ ಪಂಚಾಯ್ತಿ ಚುನಾವಣೆಯ ಸಂದರ್ಭದ ಮುಂದುವರಿದ ಭಾಗವಾಗಿದೆ’ ಎಂದು ಅವರು ಆರೋಪಿಸಿದ್ದಾರೆ.

‘ದೇಹಳ್ಳಿ ಪ್ರಾಥಮಿಕ ಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷನಾಗಿ ಮೂರು ವರ್ಷ, ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷನಾಗಿ ಏಳು ವರ್ಷ ಕೆಲಸ ಮಾಡಿದ ಅನುಭವವಿದೆ. ಆದ್ದರಿಂದ ಊರಿನ ಅಭಿವೃದ್ಧಿ ದೃಷ್ಟಿಕೋನದಿಂದ ಮಾಡುವ ಕೆಲಸಗಳಿಗೆ ರಾಜಕೀಯವನ್ನು ದೂರವಿಟ್ಟು ಎಲ್ಲರೂ ಕೈಜೋಡಿಸಬೇಕು’ ಎಂದು ಅವರು ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT