ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ: ಜಿ.ಟಿ.ನಾಯ್ಕ

Last Updated 22 ಮಾರ್ಚ್ 2019, 11:24 IST
ಅಕ್ಷರ ಗಾತ್ರ

ಕಾರವಾರ: ‘ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ. ಕ್ಷೇತ್ರದ ಮುಖಂಡರು, ಬೆಂಬಲಿಗರ ಅಭಿಲಾಷೆಯಂತೆ ಈ ನಿರ್ಧಾರ ಕೈಗೊಂಡಿದ್ದೇನೆ’ ಎಂದು ವಕೀಲ ಜಿ.ಟಿ.ನಾಯ್ಕ ತಿಳಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಕ್ಷೇತ್ರಕ್ಕೆ 23 ವರ್ಷಗಳಿಂದ ಸಂಸದರಾಗಿರುವ ಅನಂತಕುಮಾರ ಹೆಗಡೆ ಸಂಪೂರ್ಣ ನಿಷ್ಕ್ರಿಯರಾಗಿದ್ದಾರೆ. ಅವರು ಜನರ ಭಾವನೆಗಳನ್ನು ನಿರ್ಲಕ್ಷಿಸಿದ್ದಾರೆ. ಇ–ಸ್ವತ್ತು, ಅರಣ್ಯ ಒತ್ತುವರಿ, ಅಂಕೋಲಾ– ಹುಬ್ಬಳ್ಳಿ ರೈಲು ಮಾರ್ಗ ಸೇರಿದಂತೆ ವಿವಿಧ ವಿಚಾರಗಳಿಗೆ ಸ್ಪಂದಿಸಲೇ ಇಲ್ಲ. ಜಿಲ್ಲೆಯ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯೂ ಸಂಪೂರ್ಣ ವಿಫಲವಾಗಿದೆ’ ಎಂದು ಹೇಳಿದರು.

‘ಈಗ ಕಾಂಗ್ರೆಸ್‌ನಲ್ಲೂ ಜಡತ್ವ ತುಂಬಿದೆ. ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ನಡುವೆ ಯಾರಾದರೂ ಒಬ್ಬರನ್ನು ಆಯ್ಕೆ ಮಾಡುವ ಅನಿವಾರ್ಯತೆ ಮತದಾರರದ್ದಾಗಿದೆ. ಪ್ರಜ್ಞಾವಂತರು ಇರುವ ಈ ಕ್ಷೇತ್ರದಲ್ಲಿ ಹೊಸ ಮುಖವೊಂದು ಆಯ್ಕೆಯಾಗಲಿ ಎಂಬುದು ಜನರ ನಿರೀಕ್ಷೆಯಾಗಿದೆ. ಹೀಗಾಗಿ ಎರಡು ತಿಂಗಳಿನಿಂದ ನನಗೆ ಹಲವಾರು ಹಿತೈಷಿಗಳು ಒತ್ತಡ ತಂದರು. 18 ವರ್ಷಗಳಿಂದ ವಕೀಲ ವೃತ್ತಿಯಲ್ಲಿರುವ ನನಗೆ ಜಿಲ್ಲೆಯ ಜನರ ಸಮಸ್ಯೆಗಳ ಅರಿವಿದೆ’ ಎಂದರು.

‘ನಾನು ಈ ಹಿಂದೆ ಪಕ್ಷವೊಂದರಿಂದ ಟಿಕೆಟ್ ಕೇಳಿದ್ದಾಗ ಎಷ್ಟು ರೊಕ್ಕ ಖರ್ಚು ಮಾಡ್ಲಿಕ್ಕೆ ಸಿದ್ಧರಿದ್ದೀರಿ ಎಂದು ಪ್ರಶ್ನಿಸಿದ್ದರು. ನಾನು ದುಡ್ಡು ಖರ್ಚು ಮಾಡಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಭ್ರಷ್ಟಾಚಾರಕ್ಕೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದೆ. ಮೂರೂ ಪಕ್ಷಗಳ ಕಾರ್ಯಕರ್ತರು, ಮುಖಂಡರು ನನ್ನನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ’ ಎಂದು ಹೇಳಿದರು.

ಎ.ಆರ್.ಮಿಠಾಯಿಕರ್, ಬಾಬು ನಾಯ್ಕ, ಶಿವಾನಂದ ಗೌಂಡರಕರ್, ಸಮೀರ್, ಖಲೀಂ ಶೇಖ್, ಕೇದಾರ ಶಿರಸಾಟ್ ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT