ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಸೌಕರ್ಯದ ನಿರೀಕ್ಷೆಯಲ್ಲಿ ಗುಡ್ಡಳ್ಳಿ ವಾರ್ಡ್

ನಗರಸಭೆಯ 31ನೇ ವಾರ್ಡ್‌ನಲ್ಲಿ ರಸ್ತೆಯದ್ದೇ ದೊಡ್ಡ ಸಮಸ್ಯೆ
Last Updated 23 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಕಾರವಾರ: ಗುಡ್ಡಳ್ಳಿ, ನಗರಸಭೆ ವ್ಯಾಪ್ತಿಯಲ್ಲಿರುವ ಕುಗ್ರಾಮ. ಇಂದಿಗೂ ಮೂಲಸೌಕರ್ಯಗಳಿಲ್ಲದೇ ಸೊರಗಿರುವ ಪ್ರದೇಶ. ನಗರಸಭೆಯ 31 ವಾರ್ಡ್ ಆಗಿದ್ದರೂ ಅಲ್ಲಿನ ನಿವಾಸಿಗಳು ದಿನಸಿ ಸೇರಿದಂತೆ ದೈನಂದಿನ ಅಗತ್ಯಗಳಿಗೆ ಐದು ಕಿಲೋಮೀಟರ್ ನಡೆಯಲೇಬೇಕು.

ಸುಮಾರು 110 ಜನಸಂಖ್ಯೆಯಿರುವ ಗುಡ್ಡಳ್ಳಿಯಲ್ಲಿ 25 ಮನೆಗಳಿವೆ. ಬೆಟ್ಟದ ಮೇಲಿರುವ ಇವರಿಗೆ ರಸ್ತೆ ಸಂಪರ್ಕವೇ ದೊಡ್ಡ ಸವಾಲು. ಕಳೆದ ವರ್ಷ ನಗರಸಭೆಯಿಂದ ಕಚ್ಚಾ ರಸ್ತೆ ನಿರ್ಮಿಸಲಾಗಿದ್ದು, ಸದ್ಯ ದ್ವಿಚಕ್ರ ವಾಹನಗಳು ಕಷ್ಟಪಟ್ಟು ಸಾಗುತ್ತವೆ. ಆದರೆ, ಮಳೆ ಶುರುವಾದರೆ ಅದೂ ಸಾಧ್ಯವಾಗುವುದಿಲ್ಲ.

‘ಬೇಸಿಗೆಯಲ್ಲಿ ರಸ್ತೆಗೆ ಹಾಕಿದ ಮಣ್ಣು ಜೋರಾದ ಮಳೆಗೆ ಕೊಚ್ಚಿಕೊಂಡು ಹೋಗುತ್ತದೆ. ಎರಡು ವಾರಗಳ ಹಿಂದೆ ಅಧಿಕಾರಿಗಳು ಗುಡ್ಡಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಹಮ್ಮಿಕೊಂಡಿದ್ದರು. ಆಗಲೂ ರಸ್ತೆಯ ಸಮಸ್ಯೆಯ ಬಗ್ಗೆ ಗಮನ ಸೆಳೆಯಲಾಗಿದೆ. ಈ ಸಮಸ್ಯೆಯ ಬಗ್ಗೆ ಗಮನ ಹರಿಸಬೇಕು’ ಎಂಬುದು ಗ್ರಾಮಸ್ಥರ ನಿರಂತರ ಬೇಡಿಕೆ.

ಇಲ್ಲಿ ಹಾಲಕ್ಕಿ ಒಕ್ಕಲಿಗ ಸಮುದಾಯದವರು ಮೊದಲಿನಿಂದಲೂ ಕೃಷಿ, ಬೇಸಾಯ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸೌಕರ್ಯಗಳ ಕೊರತೆಯಿಂದ ಬೇಸತ್ತು ವ್ಯವಸಾಯದಿಂದ ಕೆಲವು ದೂರವಾಗುತ್ತಿದ್ದಾರೆ.

ಕಾಡಿನ ನಡುವೆ ಇರುವ ವಾರ್ಡ್ ಆಗಿರುವ ಕಾರಣ ಇಲ್ಲಿ ಕೃಷಿಗೆ ವನ್ಯಜೀವಿಗಳ ಕಾಟವೂ ಇದೆ. ಕಾಡು ಹಂದಿ, ಕೆಂದಳಿಲು ಮುಂತಾದ ಪ್ರಾಣಿಗಳು ಬೆಳೆ ನಾಶ ಮಾಡುತ್ತವೆ. ಶ್ರಮಪಟ್ಟು ಬೆಳೆದ ಫಸಲಿಗೆ ಹಾನಿಯಾಗಿ ನಷ್ಟವಾಗುವ ಬದಲು ಅಂಗಡಿಗಳಿಂದ ತರುವುದೇ ಉತ್ತಮ ಎಂಬ ಭಾವನೆಯೂ ಕೃಷಿಯಿಂದ ದೂರವಿರುವಂತೆ ಮಾಡಿದೆ.

ಗುಡ್ಡಳ್ಳಿಯಲ್ಲಿ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲ. ಮನೆಯೊಂದರಲ್ಲಿ ಬಾಡಿಗೆಗೆ ನಡೆಯುತ್ತಿದೆ. ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಭೇಟಿ ನೀಡಿದ್ದ ಅಧಿಕಾರಿಗಳಿಗೆ ಈ ಬಗ್ಗೆ ಗ್ರಾಮಸ್ಥರು ಮನವಿ ಮಾಡಿದ್ದರು. ಇದಕ್ಕೆ ಸ್ಪಂದನೆ ಸಿಕ್ಕಿದ್ದು, ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಕ್ರಿಯೆಗಳು ನಡೆಯುತ್ತಿವೆ. ಅಂತೆಯೇ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿವರೆಗೆ ಇದ್ದು, ಒಬ್ಬರು ಕಾಯಂ ಶಿಕ್ಷಕರು, ಮತ್ತೊಬ್ಬರು ಅತಿಥಿ ಶಿಕ್ಷಕರ ನೇಮಕವಾಗಿದೆ. ಈ ಪ್ರದೇಶದಲ್ಲಿ ಮೊಬೈಲ್‌ ನೆಟ್‌ವರ್ಕ್‌ ಕೂಡ ಸರಿಯಾಗಿ ಬರುವುದಿಲ್ಲ. ಹಾಗಾಗಿ ಏನೇ ಬೇಕಿದ್ದರೂ ನಡೆದುಕೊಂಡೇ ಬರಬೇಕು.

ನೀರಿನ ಸಮಸ್ಯೆ

‘ಗುಡ್ಡಳ್ಳಿಯಲ್ಲಿ ಕುಡಿಯುವ ನೀರಿನ ಸಾರ್ವಜನಿಕ ಬಾವಿಯಿದೆ. ಅದರಲ್ಲಿ ಮಾರ್ಚ್ ತನಕ ನೀರು ಸಿಗುತ್ತದೆ. ಆದರೆ, ಏಪ್ರಿಲ್‌ ಕೊನೆ ಹಾಗೂ ಮೇ ತಿಂಗಳಲ್ಲಿ ಸಮಸ್ಯೆಯಾಗುತ್ತದೆ. ನೀರು ತಳ ಸೇರುವ ಕಾರಣ ಪರದಾಡಬೇಕಾಗುತ್ತದೆ. ಟ್ಯಾಂಕರ್‌ಗಳಲ್ಲಿ ನೀರು ಪೂರೈಸಿದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಗ್ರಾಮಸ್ಥ ಕೃಷ್ಣ ಗೌಡ.

ವಾರ್ಡ್‌ಗೆ ರುಕ್ಮಿಣಿ ಗೌಡ ಸದಸ್ಯೆಯಾಗಿದ್ದು, ನಗರಸಭೆಯ ಸಾಮಾನ್ಯ ಸಭೆಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT