ಭಾನುವಾರ, ಸೆಪ್ಟೆಂಬರ್ 19, 2021
29 °C
ಹೊನ್ನಾವರ ತಾಲ್ಲೂಕಿನ ಮಲ್ಲಾಪುರದಲ್ಲಿ ‘ಹಸಿರು ಶಾಲೆ’ಯೆಂಬ ಹೆಗ್ಗಳಿಕೆ

ಕುಮಟಾ: ‘ಸುವರ್ಣ’ ಸಂಭ್ರಮದಲ್ಲಿ ಗುರುಪ್ರಸಾದ ಶಾಲೆ

ಎಂ.ಜಿ.ನಾಯ್ಕ Updated:

ಅಕ್ಷರ ಗಾತ್ರ : | |

Prajavani

ಕುಮಟಾ: ಸಮಾಜಕ್ಕೆ ಒಬ್ಬರಿಗಿಂತ ಒಬ್ಬರು ಪ್ರತಿಭಾವಂತರನ್ನು ನೀಡಿದ ಹೆಮ್ಮೆ. ಸಮುದಾಯದಲ್ಲಿ ಪರಿಸರ ಪ್ರಜ್ಞೆ ಬೆಳೆಸಿದ್ದಕ್ಕಾಗಿ 2011ರಲ್ಲಿ ‘ಹಸಿರು ಶಾಲೆ’ ಎಂಬ ಬಿರುದು. 50 ವರ್ಷಗಳಿಂದ ನಿರಂತರವಾಗಿ ಜ್ಞಾನದೀವಿಗೆ ಬೆಳಗುತ್ತಿರುವ ವಿದ್ಯಾ ದೇಗುಲ.

ಇದು ಮಲ್ಲಾಪುರ ಗುರುಪ್ರಸಾದ ಪ್ರೌಢಶಾಲೆಯ ಹೆಗ್ಗಳಿಕೆ. ಹೊನ್ನಾವರ ತಾಲ್ಲೂಕಿನಲ್ಲಿದ್ದರೂ ಕುಮಟಾಕ್ಕೆ ಹತ್ತಿರದಲ್ಲಿದೆ. ಫೆ.15, 16ರಂದು ಶಾಲೆಯಲ್ಲಿ ಸುವರ್ಣ ಮಹೋತ್ಸವದ ಸಂಭ್ರಮ ಮೇಳೈಸಲಿದೆ.

50 ವರ್ಷಗಳ ಹಿಂದೆ ಶಿರಾಲಿ ಚಿತ್ರಾಪುರ ಮಠದ ಅಂದಿನ ಕಿರಿಯ ಪೀಠಾಧಿಪತಿ ಪರಿಜ್ಞಾನಾಶ್ರಮ ಸ್ವಾಮೀಜಿ ಮಲ್ಲಾಪುರ ಶಾಖಾಮಠಕ್ಕೆ ಬಂದಿದ್ದರಂತೆ. ಎರಡು ತಿಂಗಳು ವಾಸ್ತವ್ಯ ಮಾಡಿದ್ದಾಗ ಊರಿನ ತರುಣರೊಂದಿಗೆ, ‘ನೀವೆಲ್ಲ ಮುಂದೆ ಏನು ಮಾಡಬೇಕೆಂದಿದ್ದೀರಿ’ ಎಂದು ಕೇಳಿದರಂತೆ. ಅದಕ್ಕೆ ಯುವಕರು, ‘ಊರಿನಲ್ಲಿಯೇ ಒಂದು ಪ್ರೌಢಶಾಲೆ ಆರಂಭಿಸುವ ಕನಸಿದೆ. ಆದರೆ, ಹಣಕಾಸು ಕೊರತೆಯಿಂದ ಸಾಧ್ಯವಾಗುತ್ತಿಲ್ಲ’ ಎಂದರಂತೆ.

ಮುಂದೆ ಮಠದ ಅಧಿಕಾರ ವಹಿಸಿಕೊಂಡ ಸ್ವಾಮೀಜಿ, ಯುವಕರ ಕನಸಿಗೆ ನೀರೆದರು. ಸಮಿತಿಯವರನ್ನು ಚಿತ್ರಾಪುರ ಮಠಕ್ಕೆ ಕರೆಯಿಸಿದ ಸ್ವಾಮೀಜಿ, ಶಾಲೆಗಾಗಿ ಆಗ ₹ 3 ಸಾವಿರ ದೇಣಿಗೆ ನೀಡಿದ್ದರು. 1967ರಲ್ಲಿ ಮಲ್ಲಾಪುರದ ಗೋಪಾಲಕೃಷ್ಣ ದೇವಾಲಯ ಕಟ್ಟಡದಲ್ಲಿ ಗುರುಪ್ರಸಾದ ಪ್ರೌಢಶಾಲೆ ಆರಂಭವಾಯಿತು. 

ಆಗ ವಿದ್ಯಾರ್ಥಿಗಳು ಮಲ್ಲಾಪುರ ಸುತ್ತಲಿನ ಊರಕೇರಿ, ಕೋನಳ್ಳಿ, ಕೆಕ್ಕಾರ, ಕೂಜಳ್ಳಿ ಅಳವಳ್ಳಿ, ಹೊದ್ಕೆ ಶಿರೂರುಗಳಿಂದ ಸುಮಾರು 10 ಕಿ.ಮೀ. ದೂರದ ಕುಮಟಾದ ಗಿಬ್ ಪ್ರೌಢಶಾಲೆಗೆ ನಡೆದುಕೊಂಡು ಹೋಗುತ್ತಿದ್ದರು. ಏಳನೇ ತರಗತಿ ಉತ್ತೀರ್ಣರಾಗಿ ಓದು ನಿಲ್ಲಿಸಿದ್ದ ವಿದ್ಯಾರ್ಥಿಗಳಿಗೆ ಈ ಪ್ರೌಢಶಾಲೆಯು ಮುಂದಿನ ಶಿಕ್ಷಣಕ್ಕೆ ಆಸರೆಯಾಯಿತು. 

1971ರಲ್ಲಿ ಶಾಲೆಗೆ ಸರ್ಕಾರದ ಅನುದಾನ ದೊರೆಯಿತು. 1977ರಲ್ಲಿ ಸರ್ವೆ ನಂಬರ್ 10ರಲ್ಲಿ ಅರಣ್ಯ ಇಲಾಖೆಯ ಐದು ಎಕರೆ ಜಾಗ ಭೋಗ್ಯಕ್ಕೆ ಮಂಜೂರಾಯಿತು. ಶಾಲೆಯ ಹೊಸ ಕಟ್ಟಡಕ್ಕೆ ಅಂದಿನ ಶಿಕ್ಷಣ ಸಚಿವ ಎಸ್.ಎಂ.ಯಾಹ್ಯಾ ಶಿಲಾನ್ಯಾಸ ಮಾಡಿ, 1980ರ ಏ.1ರಂದು ಉದ್ಘಾಟನೆಗೊಂಡಿತು.

1993ರಲ್ಲಿ ನಡೆದ ಶಾಲೆಯ ರಜತ ಮಹೋತ್ಸವಕ್ಕೆ ಸಾಹಿತಿ ಶಿವರಾಮ ಕಾರಂತರು ಬಂದಿದ್ದರು. ಶಾಲೆಗೆ ಅಗತ್ಯವಿರುವ ಎಲ್ಲ ನೆರವನ್ನು ಚಿತ್ರಾಪುರ ಮಠದ ಸದ್ಯೋಜಾತ ಸ್ವಾಮೀಜಿ ಅವರು ಶ್ರೀವಲಿ ಟ್ರಸ್ಟ್ ಮೂಲಕ ನೀಡುತ್ತಾ ಬಂದಿದ್ದಾರೆ. ಹಳೆಯ ವಿದ್ಯಾರ್ಥಿಗಳೂ ನೆರವು ನೀಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ‘ಸ್ವಚ್ಛ ಶಾಲೆ’ ಎಂಬ ಕೀರ್ತಿಗೂ ಪಾತ್ರವಾಗಿದೆ.

‘ನಮ್ಮ ಶಾಲೆಯಲ್ಲಿ ಓದಿದ ಹಲವು ಕ್ರಿಯಾಶೀಲ ವಿದ್ಯಾರ್ಥಿಗಳು ಸಮಾಜ ಅಚ್ಚರಿಪಡುವಂತೆ ಬದುಕು ರೂಪಿಸಿಕೊಂಡಿದ್ದಾರೆ. ಅನೇಕ ಸಂದರ್ಭಗಳಲ್ಲಿ ಅತ್ಯುತ್ತಮ ಫಲಿತಾಂಶ ನೀಡಿದ ಶಾಲೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ’ ಎಂದು ಮುಖ್ಯ ಶಿಕ್ಷಕ ಎಂ.ಟಿ.ಗೌಡ ತಿಳಿಸುತ್ತಾರೆ.

ಪ್ರಸಿದ್ಧ ನಟರಾದ ಅನಂತನಾಗ್, ಶಂಕರನಾಗ್, ಮಹಿಳಾ ವಿಶ್ವವಿದ್ಯಾಲಯದ (ವಿ.ವಿ) ಮೊದಲ ಉಪಕುಲಪತಿ ಮೀನಾ ಚಂದಾವರಕರ್ ಈ ಊರಿನವರು. ಶಾಲೆಯ ಹಳೆಯ ವಿದ್ಯಾರ್ಥಿ ಎಚ್.ಆರ್.ನಾಯ್ಕ ಹೊಸಾಡದಲ್ಲಿ ಉದ್ಯಮಗಳನ್ನು ಆರಂಭಿಸಿ ನೂರಾರು ಮಂದಿಗೆ ಉದ್ಯೋಗ ನೀಡಿದ್ದಾರೆ. ಶಿವಮೊಗ್ಗ ಕೃಷಿ ವಿ.ವಿಯ ಉಪಕುಲಪತಿ ಡಾ.ಎಂ.ಕೆ.ನಾಯ್ಕ ಮಲ್ಲಾಪುರ, ಬೆಂಗಳೂರು ವಿ.ವಿಯ ಪ್ರಾಧ್ಯಾಪಕ ಡಾ.ವಿಷ್ಣು ಭಟ್ಟ, ಉಪನ್ಯಾಸಕರಾದ ಡಾ.ಐ.ಕೆ.ನಾಯ್ಕ, ಡಾ.ಪ್ರಕಾಶ ಪಂಡಿತ, ಮಹಿಳಾ ಪೊಲೀಸ್ ಅಧಿಕಾರಿಗಳಾದ ಇಂದಿರಾ ಅಡಿಗುಂಡಿ, ಸುಷ್ಮಾ ಭಂಡಾರಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಪ್ರಸಿದ್ಧರಾಗಿರುವ ಹತ್ತಾರು ಮಂದಿ ಈ ಶಾಲೆಯಲ್ಲಿ ಓದಿದವರು ಎಂಬ ಅಭಿಮಾನವೂ ಇಲ್ಲಿನ ಶಿಕ್ಷಕರದ್ದಾಗಿದೆ.

 ದೇಣಿಗೆ ಸಂಗ್ರಹಿಸಲು ಯಕ್ಷಗಾನ: ‘ಕಟ್ಟಡ ನಿಧಿ ಸಂಗ್ರಹಿಸಲು ಇಡಗುಂಜಿ ಕೆರೆಮನೆ ಮೇಳ, ಕರ್ಕಿ ಹಾಸ್ಯಗಾರ ಮೇಳದ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು. ಮುಂಬೈನಲ್ಲಿ ‘ದೇವ ದೀನಾಘರಿ ಧಾವಾಲಾ’, ‘ಗುಡ್ ಬಾಯ್ ಡಾಕ್ಟರ್’, ‘ಬ್ಯಾರಿಸ್ಟರ್’ ಮುಂತಾದ ಮರಾಠಿ ನಾಟಕಗಳನ್ನು ಪ್ರದರ್ಶಿಸಲಾಗಿತ್ತು’ ಎಂದು ನಿವೃತ್ತ ಮುಖ್ಯ ಶಿಕ್ಷಕ ಹಾಗೂ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಅರುಣ ಉಭಯಕರ ನೆನಪಿಸಿಕೊಳ್ಳುತ್ತಾರೆ.

**
ಶಾಲೆಯ ಮುಖ್ಯ ಶಿಕ್ಷಕರು 

* ಅರುಣ ಉಭಯಕರ

* ಎನ್.ಎಸ್.ನಾಯ್ಕ

* ಕೆ.ಆರ್.ಹೆಗಡೆ

* ಆರ್.ಎಸ್.ಭಟ್ಟ

* ಎಸ್.ಎಸ್.ಹೆಬ್ಬಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು