ಶನಿವಾರ, ನವೆಂಬರ್ 16, 2019
21 °C
ಶೈಕ್ಷಣಿಕ ಸಮಾವೇಶ

ಶಿಕ್ಷಣದಿಂದ ಜ್ಞಾನ ಸೃಷ್ಟಿಯಾಗಲಿ: ಚಿಂತಕ ಗುರುರಾಜ ಕರಜಗಿ

Published:
Updated:
Prajavani

ಶಿರಸಿ: ಶಿಕ್ಷಕರು ಕಲಿಸುವ ಮತ್ತು ಮಕ್ಕಳು ಕಲಿಯುವ ವಿಧಾನದಲ್ಲಿ ಹಿಂದಾಣಿಕೆಯಾದರೆ ಅದು ನಿಜ ಅರ್ಥದಲ್ಲಿ ಕಲಿಕೆಯಾಗುತ್ತದೆ ಎಂದು ಚಿಂತಕ ಗುರುರಾಜ ಕರಜಗಿ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳು, ಖಾಸಗಿ ಪ್ರೌಢಶಾಲಾ ನೌಕರರ ಸಂಘದ ಘಟಕದ ಸಂಯುಕ್ತ ಆಶ್ರಯದಲ್ಲಿ ಶನಿವಾರ ಇಲ್ಲಿ ಆಯೋಜಿಸಿದ್ದ ಶಿಕ್ಷಕರ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ ಅವರು ‘ಕಲಿಕಾ ಉತ್ತರಾಯಿತ್ವ’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಶೇ 95ಕ್ಕಿಂತ ಹೆಚ್ಚು ಅಂಕ ಪಡೆದವರು ಮಾತ್ರ ಬುದ್ಧಿವಂತ ಮಕ್ಕಳು ಎಂದು ಪರಿಭಾವಿಸುವ ಕ್ರಮವೇ ತಪ್ಪು. ಯಾವ ಮಗುವಿನಲ್ಲೂ ದಡ್ಡತನ ಇರುವುದಿಲ್ಲ. ಪ್ರತಿ ಮಗುವಿನಲ್ಲಿ ವೈವಿಧ್ಯಮಯ ಪ್ರತಿಭೆ ಹುದುಗಿರುತ್ತದೆ. ಅದನ್ನು ಶಿಕ್ಷಕರು ಗುರುತಿಸಬೇಕು ಎಂದರು.

ಶಿಕ್ಷಣದಿಂದ ಜ್ಞಾನ ಪ್ರಸಾರದ ಜತೆಗೆ ಜ್ಞಾನ ಸೃಷ್ಟಿಯಾಗಬೇಕು. ಆದರೆ, ಇತ್ತೀಚಿನ ವರ್ಷಗಳಲ್ಲಿ ತರಗತಿ ಕೊಠಡಿಗಳಲ್ಲಿ ಜ್ಞಾನ ಸೃಷ್ಟಿ ಕಡಿಮೆಯಾಗಿದೆ. ಅಂಕ ಗಳಿಕೆಯ ಆಶಯವೇ ಪ್ರಾಮುಖ್ಯವಾಗಿದೆ. ಶಿಕ್ಷಕರು ಪಠ್ಯಕ್ಕೆ ಸೀಮಿತವಾಗುತ್ತಿದ್ದಾರೆ. ಶಿಕ್ಷಕರಲ್ಲಿ ಪಠ್ಯಕ್ರಮದ ಹೊರತಾಗಿನ ಪುಸ್ತಕಗಳನ್ನು ಓದುವ ಪ್ರವೃತ್ತಿ ಕಡಿಮೆಯಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಪಠ್ಯದ ಚೌಕಟ್ಟಿನೊಳಗೆ ಬೆಳೆಯುತ್ತಿದ್ದಾರೆ. ತರಗತಿಯಗಳಲ್ಲಿ ದೃಶ್ಯ ಕಲಿಕಾ ವಿಧಾನ ಹೆಚ್ಚು ಪರಿಣಾಮಕಾರಿ ಎಂದು ಹೇಳಿದರು.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರ್ಯಕ್ರಮ ಉದ್ಘಾಟಿಸಿದರು. ಮಕ್ಕಳನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಈ ನಿಟ್ಟಿನಲ್ಲಿ ಶಿಕ್ಷಕರು ಆತ್ಮಸಾಕ್ಷಿ ಮೆಚ್ಚುವಂತೆ ಕರ್ತವ್ಯ ನಿರ್ವಹಿಸಬೇಕು. ಪಠ್ಯಕ್ರಮ ಮೀರಿದ ಜ್ಞಾನ, ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ‘ಶಿಕ್ಷಕರು ಮಾನಸಿಕವಾಗಿ ನೆಮ್ಮದಿಂದ ಪಾಠ ಮಾಡುವ ವಾತಾವರಣ ಶಿಕ್ಷಣ ಇಲಾಖೆಯಿಂದ ರೂಪಿತವಾಗಬೇಕು. ಸೌಲಭ್ಯ ಕಡಿಮೆಯಿದ್ದ 1970ರ ದಶಕದಲ್ಲಿ ಶಿಕ್ಷಕರಲ್ಲಿ ಹೆಚ್ಚು ಬದ್ಧತೆ ಕಾಣುತ್ತಿತ್ತು. ಆ ಬದ್ಧತೆ ಇಂದಿನ ಶಿಕ್ಷಕರಲ್ಲೂ ಬರಬೇಕು. ಆಯುಕ್ತರ ಕಚೇರಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿವರೆಗೆ ಇರುವ ಭ್ರಷ್ಟಾಚಾರ ಕಡಿಮೆಯಾಗಿ ಶಿಕ್ಷಕರಿಗೆ ಕಿರುಕುಳ ತಪ್ಪಬೇಕು’ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಡಿಡಿಪಿಐ ದಿವಾಕರ ಶೆಟ್ಟಿ, ಡಯಟ್ ಪ್ರಾಚಾರ್ಯ ಬಿ.ವಿ.ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ, ಲಯನ್ಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್.ವಿ.ಜಿ.ಭಟ್ಟ, ಪ್ರೌಢಶಾಲಾ ಶಿಕ್ಷಕರ ಸಂಘದ ಪ್ರಮುಖರಾದ ಜಿ.ಯು.ಹೆಗಡೆ, ವಿನಾಯಕ ಶೇಟ್, ಮಹೇಶ ಭಟ್ಟ, ಬಿ.ಎನ್.ನಾಯ್ಕ, ಎನ್.ಡಿ.ಮುಡೆಣ್ಣವರ್, ಎಂ.ಕೆ.ಭಟ್ಟ, ಗುರುಶಾಂತಪ್ಪ ಸಿ.ಎಂ ಇದ್ದರು.

ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್.ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಘಟಕದ ಅಧ್ಯಕ್ಷ ನಾರಾಯಣ ದೈಮನೆ ಸ್ವಾಗತಿಸಿದರು. ವಿ.ಎಂ.ಭಟ್ಟ ನಿರೂಪಿಸಿದರು.

ಪ್ರತಿಕ್ರಿಯಿಸಿ (+)