ಬುಧವಾರ, ಮೇ 18, 2022
27 °C
‘ಪದ್ಮಶ್ರೀ ಸುಕ್ರಜ್ಜಿಗೆ ಹಾಲಕ್ಕಿ ನುಡಿ ನಮನ’, ‘ಹಾಡಿನ ಕಣಜ ಸುಕ್ರಜ್ಜಿ’ ಪುಸ್ತಕ ಬಿಡುಗಡೆ

ಹಾಲಕ್ಕಿ ಮಕ್ಕಳಿಗೆ ಉಚಿತ ಶಿಕ್ಷಣ: ನಿರ್ಮಲಾನಂದನಾಥ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಂಕೋಲಾ (ಉತ್ತರಕನ್ನಡ ಜಿಲ್ಲೆ): ‘ಹಾಲಕ್ಕಿಗಳು ತಮ್ಮ ಮಕ್ಕಳನ್ನು ಮಠಕ್ಕೆ ಕಳುಹಿಸಿದರೆ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ಉಚಿತವಾಗಿ ಶಿಕ್ಷಣ ನೀಡಲಾಗುವುದು’ ಎಂದು ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಬಡಗೇರಿಯ ಬೇಟೆಬೀರ ದೇವಸ್ಥಾನದ ಆವರಣದಲ್ಲಿ ಆದಿಚುಂಚನಗಿರಿ ಮಠ ಮತ್ತು ಹಾಲಕ್ಕಿ ಸಮುದಾಯದ ಸಹಯೋಗದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ‘ಪದ್ಮಶ್ರೀ ಸುಕ್ರಜ್ಜಿಗೆ ಹಾಲಕ್ಕಿ ನುಡಿ ನಮನ’ ಕಾರ್ಯಕ್ರಮ, ‘ಹಾಡಿನ ಕಣಜ ಸುಕ್ರಜ್ಜಿ’ ಪುಸ್ತಕ ಬಿಡುಗಡೆ ಹಾಗೂ ಮಠದ ಮಾರ್ಗದರ್ಶನದಲ್ಲಿ ನಿರ್ಮಿಸಿದ ‘ಸುಕ್ರಜ್ಜಿ ಕಲಾ ಗ್ಯಾಲರಿ’ ಉದ್ಘಾಟಿಸಿ ಅವರು ಮಾತನಾಡಿದರು.

‘ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು ಎನ್ನುವುದು ಹಾಲಕ್ಕಿ ಸಮುದಾಯದ ಒಕ್ಕೊರಲಿನ ಬೇಡಿಕೆ. ಸರ್ಕಾರ, ಜನಪ್ರತಿನಿಧಿಗಳು ಮತ್ತು ಮಠದ ಸಹಯೋಗದಲ್ಲಿ  ಸೇರ್ಪಡೆಗೊಳಿಸುವ ಮುಂದಿನ ಕಾರ್ಯ ನಡೆಯಬೇಕಿದೆ. ಜೊತೆಯಲ್ಲಿ ಶಿಕ್ಷಣ, ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಬೇಕಾಗಿದೆ. ಹಾಲಕ್ಕಿ ಸಮುದಾಯದ ಬೇಡಿಕೆಯಂತೆ ರಾಜ್ಯ ಒಕ್ಕಲಿಗರ ಸಂಘದ ನೇತೃತ್ವದಲ್ಲಿ ವರ್ಷದಲ್ಲಿ ಎರಡು ಬಾರಿ ಉಚಿತ ಬೃಹತ್ ಆರೋಗ್ಯ ಶಿಬಿರ ಏರ್ಪಡಿಸಲಾಗುವುದು’ ಎಂದರು.

ಆದಿಚುಂಚನಗಿರಿ ಶಾಖಾಮಠದ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ‘ಹಾಲಕ್ಕಿ ಸಮಾಜಕ್ಕೆ ಶಕ್ತಿ ಇದೆ. ಸಾಂಸ್ಕೃತಿಕ ನೆಲೆಯಿದೆ. ಆದರೂ ನೌಕಾನೆಲೆ, ಕೊಂಕಣ ರೈಲ್ವೆ ಮತ್ತಿತರ ಯೋಜನೆಗಳಿಗೆ ಬಲಿಪಶುಗಳಾಗಿದ್ದಾರೆ. ಸಮಾಜದ ಬೆಳವಣಿಗೆಗೆ ಮಠ ಶ್ರಮಿಸಲಿದೆ’ ಎಂದರು.

ಶಾಸಕಿ ರೂಪಾಲಿ ನಾಯ್ಕ,‘ರಾಜಕೀಯ ಹಿತಾಸಕ್ತಿ ಸಂಘರ್ಷದಿಂದ ಹಾಲಕ್ಕಿ ಸಮುದಾಯದ ಇನ್ನೂ ಬವಣೆಯಲ್ಲಿ ಬದುಕುತ್ತಿದೆ. ಮಾನವೀಯ ನೆಲೆಯಲ್ಲಿ ಹಾಲಕ್ಕಿ ಸಮುದಾಯದ ಬೆಳೆವಣಿಗೆಗೆ ಆದ್ಯತೆ ನೀಡಬೇಕಾಗಿದೆ’ ಎಂದರು.

ಸಾಹಿತಿ ಶ್ರೀಪಾದ ಶೆಟ್ಟಿ ‘ಹಾಡಿನ ಕಣಜ ಸುಕ್ರಜ್ಜಿ’ ಕೃತಿ ಪರಿಚಯ ಮಾಡಿದರು.

ಸುಕ್ರಜ್ಜಿ ಗೌಡ, ತುಳಸಿ ಗೌಡ, ರಾಜ್ಯ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಡಾ.ಆಂಜನಪ್ಪ, ಸುಕ್ರಜ್ಜಿ ಕುರಿತ ಕೃತಿ ರಚಿಸಿದ ಅಕ್ಷತಾ ಕೃಷ್ಣಮೂರ್ತಿ, ಮಾಜಿ ಶಾಸಕ ಸತೀಶ್ ಸೈಲ್, ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಗೌಡ ವೇದಿಕೆಯಲ್ಲಿದ್ದರು.

ವೇದಿಕೆ ಕಾರ್ಯಕ್ರಮಕ್ಕೆ ಮುನ್ನ, ಸ್ವಾಮೀಜಿ ಅವರು ಸುಕ್ರಿಜ್ಜಿ ಮನೆಗೆ ಭೇಟಿ ನೀಡಿದರು. ಆತಿಥ್ಯ ಸ್ವೀಕರಿಸಿ ಸುಕ್ರಜ್ಜಿ ನೀಡಿದ ಪಾಯಸ ಮತ್ತು ಅಕ್ಕಿ ಉಂಡೆ ಸವಿದರು. ಹಾಲಕ್ಕಿ ಸಮುದಾಯದವರು ಅದ್ದೂರಿ ಮೆರವಣಿಗೆಯಲ್ಲಿ ಸ್ವಾಮೀಜಿ ಮತ್ತು ಸುಕ್ರಿ ಗೌಡ ಅವರನ್ನು ವೇದಿಕೆಗೆ ಕರೆತಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು