ಶನಿವಾರ, ಜುಲೈ 31, 2021
28 °C
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಇಂಗುಗುಂಡಿ ರಚಿಸಿರುವ ಕೂಲಿಕಾರ್ಮಿಕರು

ಶಿರಸಿ | ಇಲ್ಲಿ ಪ್ರತಿ ಮನೆಯಲ್ಲಿ ಜಲಮರುಪೂರಣ

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಈ ಪುಟ್ಟ ಮಜಿರೆಯಲ್ಲಿ ಎಲ್ಲ ಮನೆಯವರು ಮಳೆ ನೀರು ಹಿಡಿದಿಡಲು ಮುಂದಾಗಿದ್ದಾರೆ. ಕೂಲಿ ಕೆಲಸಕ್ಕೆ ರಜೆ ಮಾಡಿ, ಬೆವರುಹರಿಸಿ ಮನೆಯಂಗಳಲ್ಲೇ ಗುಂಡಿ ಹೊಡೆದು, ಜಲಮರುಪೂರಣ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಎರಡು ದಿನಗಳಿಂದ ಸುರಿಯುತ್ತಿರುವ ಮಳೆ, ಗುಂಡಿಗಳನ್ನು ತುಂಬಿಸಿ, ಬಾವಿಗೆ ಧಾರೆಯಾಗಿ ಹರಿಯುತ್ತಿದೆ.

ತಾಲ್ಲೂಕಿನ ಬಿಸಲಕೊಪ್ಪ ಗ್ರಾಮ ಪಂಚಾಯ್ತಿಯ ಸುಭಾಸ ನಗರದಲ್ಲಿ 30 ಮನೆಗಳಿವೆ. ಬಹುತೇಕ ಎಲ್ಲ ಮನೆಗಳಲ್ಲೂ ತೆರೆದ ಬಾವಿ ಇದೆ. ಆದರೆ, ಪ್ರತಿ ವರ್ಷ ಬೇಸಿಗೆಯಲ್ಲಿ ಇಲ್ಲಿ ಬಾವಿಯ ನೀರು ತಳಮುಟ್ಟುತ್ತದೆ. ಮನೆಬಳಕೆ, ಬಟ್ಟೆ ತೊಳೆಯಲು ಸಮೀಪದ ಕೆರೆ ನೀರನ್ನು ಆಶ್ರಯಿಸಬೇಕಾಗುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗ್ರಾಮಸ್ಥರು ಮಳೆನೀರು ಇಂಗಿಸಲು ಮುಂದಾಗಿದ್ದಾರೆ.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿ ಮನೆಯ ಅಂಗಳದಲ್ಲಿ ಇಂಗುಗುಂಡಿ ನಿರ್ಮಾಣವಾಗಿದೆ.

‘ಬೇಸಿಗೆಯ ನೀರಿನ ಬವಣೆಯಿಂದ ಬೇಸತ್ತಿದ್ದ ಸುಭಾಸ ನಗರದ ನಿವಾಸಿಗಳು ಸಭೆ ನಡೆಸಿ, ಮಳೆನೀರು ಇಂಗಿಸುವ ವ್ಯವಸ್ಥೆ ಅಳವಡಿಸಿಕೊಳ್ಳಲು ಒಮ್ಮತದಿಂದ ನಿರ್ಧರಿಸಿದರು. ಕೂಲಿ ಕೆಲಸವೇ ಜೀವನಾಧಾರವಾಗಿರುವ ಹಲವರು, ಎಂಟು ದಿನ ಹೊರಗಿನ ಕೆಲಸ ಬಿಟ್ಟು, ತಮ್ಮ ಮನೆಯಲ್ಲೇ ಕೂಲಿ ಮಾಡಿ, ನಾಲ್ಕು ಅಡಿ ಆಳದ ಗುಂಡಿ ತೆಗೆದು, ಅದಕ್ಕೆ ಸಿಮೆಂಟ್ ರಿಂಗ್ ಇಳಿಸಿದರು. ತಂತ್ರಜ್ಞರಿಂದ ಮಾಹಿತಿ ಪಡೆದು ವೈಜ್ಞಾನಿಕವಾಗಿ ಇಂಗುಗುಂಡಿ ರಚಿಸಿದರು’ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯ ರಾಘವೇಂದ್ರ ನಾಯ್ಕ.

‘ನರೇಗಾ ಯೋಜನೆಯಡಿ ವೈಯಕ್ತಿಕವಾಗಿ ಇಂಗುಗುಂಡಿ ನಿರ್ಮಾಣಕ್ಕೆ ಎರಡು ವರ್ಷಗಳ ಹಿಂದೆಯೇ ಅನುಮತಿ ದೊರೆತು, ಕೆಲ ಕಡೆಗಳಲ್ಲಿ ಇಂಗುಗುಂಡಿ ರಚನೆಯೂ ಆಗಿದೆ. ಆದರೆ, ತಾಂತ್ರಿಕ ಕಾರಣದಿಂದ ಇದಕ್ಕೆ ಹಣ ಮಂಜೂರು ಆಗಿರಲಿಲ್ಲ. ಈಗ ಎಲ್ಲ ಅಡೆತಡೆಗಳು ನಿವಾರಣೆಯಾಗಿವೆ. ಇನ್ನು ಮುಂದೆ ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬರೂ ನರೇಗಾದಲ್ಲಿ ಇಂಗುಗುಂಡಿ ನಿರ್ಮಿಸಿಕೊಳ್ಳಲು ಅವಕಾಶವಾಗಿದೆ’ ಎನ್ನುತ್ತಾರೆ ಈ ಬಗ್ಗೆ ನಿರಂತರ ಪ್ರಯತ್ನ ನಡೆಸಿ ಯಶಸ್ವಿಯಾಗಿರುವ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಚಂದ್ರು ದೇವಾಡಿಗ.

ಇಂಗುಗುಂಡಿ ರಚನೆ ಹೇಗೆ?

ಜಿಲ್ಲಾ ಪಂಚಾಯ್ತಿಯು ವೈಯಕ್ತಿಕ ಇಂಗುಗುಂಡಿ ನಿರ್ಮಾಣದ ಗಾತ್ರ ಮತ್ತು ವೆಚ್ಚವನ್ನು ನಿಗದಿ ಮಾಡಿದೆ. ಮನೆಯ ಚಾವಣಿ ಸುತ್ತ ಹರಣಿ ಹಾಕಿ, ಅದಕ್ಕೆ ಪೈಪ್ ಜೋಡಿಸಲಾಗಿದೆ. ಬಾವಿಯ ಪಕ್ಕದಲ್ಲಿ ನಾಲ್ಕು ಅಡಿ ಆಳದ ಗುಂಡಿ ತೆಗೆದು ರಿಂಗ್ ಇಳಿಸಿ, ಜೆಲ್ಲಿ, ಮರಳು, ಇದ್ದಿಲು ಹಾಕಲಾಗಿದೆ.

ಸುಭಾಸ ನಗರದಲ್ಲಿರುವ ಮನೆಗಳು 30, ಪ್ರತಿ ಇಂಗುಗುಂಡಿಯ ವೆಚ್ಚ ₹ 17,162.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು