ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ದೊಡ್ಡ ಕೆರೆಗಳಿದ್ದರೂ ಸಿಹಿ ನೀರಿಗೆ ಬರ!

ಕಾರವಾರ ತಾಲ್ಲೂಕಿನ ಹಣಕೋಣ ಗ್ರಾಮಕ್ಕೆ ಬೇಸಿಗೆಯಲ್ಲಿ ಸಮಸ್ಯೆ
Last Updated 6 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಕಾರವಾರ: ಈ ಗ್ರಾಮದಲ್ಲಿ ಮೂರು ಬೃಹತ್ ಕೆರೆಗಳಿವೆ. ಅವುಗಳ ನೀರನ್ನು ಸರಿಯಾಗಿ ಬಳಕೆ ಮಾಡಿದರೆ ಬೇಸಿಗೆಯಲ್ಲಿ ಕೃಷಿ ಮತ್ತು ಕುಡಿಯುವ ನೀರಿಗೆ ಸಮಸ್ಯೆಯೇ ಇರಲಾರದು. ಆದರೆ, ಇನ್ನೂ ಯೋಜನೆಗಳು ಜಾರಿಯಾಗದೇ ಗ್ರಾಮಸ್ಥರು ಉಪ್ಪು ನೀರಿನ ಸಮಸ್ಯೆಯಿಂದ ಪರಿತಪಿಸುವಂತಾಗಿದೆ.

ಉಷ್ಣವಿದ್ಯುತ್ ಸ್ಥಾವರದಂಥ ಪರಿಸರ ವಿರೋಧಿ ಯೋಜನೆಗಳನ್ನು ಹಿಮ್ಮೆಟ್ಟಿಸಿದ ತಾಲ್ಲೂಕಿನ ಹಣಕೋಣ ಗ್ರಾಮದ ಸ್ಥಿತಿಯಿದು. ಏಳು ಮಜಿರೆಗಳನ್ನು ಒಳಗೊಂಡಿರುವ ಈ ಗ್ರಾಮದಲ್ಲಿ, ಮಳೆಗಾಲ ಮಾತ್ರ ಸಿಹಿ ನೀರು ಯಥೇಚ್ಛವಾಗಿರುತ್ತದೆ. ಬೇಸಿಗೆ ಶುರುವಾಗುತ್ತಿದ್ದಂತೆ ಕಾಳಿ ನದಿಯ ಮೂಲಕ ಸಮುದ್ರದ ಉಪ್ಪು ನೀರು ಹಿಮ್ಮೆಟ್ಟುತ್ತದೆ. ಮನೆಗಳ ಸುತ್ತ ಇರುವ ಜಲಮೂಲಗಳನ್ನು ಆವರಿಸಿಕೊಳ್ಳುತ್ತದೆ.

ಭೀಮಕೋಲ್ ಕೆರೆಯನ್ನು ಜಿಲ್ಲಾ ಪಂಚಾಯಿತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲವು ತಿಂಗಳ ಹಿಂದೆ ದುರಸ್ತಿ ಮಾಡಲಾಗಿದೆ. ಆದರೆ, ಅದಕ್ಕಿಂತಲೂ ವಿಸ್ತಾರವಾಗಿರುವ ಹಣಕೋಣ ಕೆರೆ ಮತ್ತು ಗೋಪಶಿಟ್ಟಾದಲ್ಲಿರುವ ಮತ್ತೊಂದು ಕೆರೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಹಣಕೋಣದ ಕೆರೆಯನ್ನಂತೂ ಪೊದೆಗಳ ನಡುವೆ ಹುಡುಕುವಂಥ ಸ್ಥಿತಿಯಿದೆ. ಕೆರೆಯ ಪ್ರದೇಶಕ್ಕೆ ಹೋಗಲು ಸೂಕ್ತ ದಾರಿಯೂ ಇಲ್ಲ. ಅದರ ದಂಡೆ ಶಿಥಿಲವಾಗಿದ್ದು, ಕೆಲವೇ ಸಮಯದಲ್ಲಿ ಕುಸಿಯುವ ಆತಂಕವಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

‘1976ರಲ್ಲಿ ನಿರ್ಮಿಸಲಾದ ಈ ಕೆರೆಯನ್ನು ಸಣ್ಣ ನೀರಾವರಿ ಇಲಾಖೆಯು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಗ್ರಾಮದ ಈ ಜಲಮೂಲಗಳನ್ನು ಭೀಮಕೋಲ್ ಕೆರೆಯ ಮಾದರಿಯಲ್ಲೇ ದುರಸ್ತಿ ಮಾಡಬೇಕು. ಇದರಿಂದ ಗ್ರಾಮದಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ. ಬೇಸಿಗೆಯಲ್ಲಿ ಬಾವಿಗಳು ಭರ್ತಿಯಾಗಿದ್ದು, ಕೃಷಿ ಹಾಗೂ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುವುದಿಲ್ಲ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಸುನೀಲ.

ಗ್ರಾಮದ ಖಾರ್ಲೆಂಡ್ ಪ್ರದೇಶದಲ್ಲಿ ಕಾಂಡ್ಲಾ ಗಿಡಗಳು ಬೆಳೆದಿವೆ. ನದಿಯಿಂದ ಉಪ್ಪು ನೀರು ಜಮೀನಿಗೆ ಹರಿಯದಂತೆ ಹಲಗೆಗಳನ್ನು ಅಳವಡಿಸಲಾಗಿದ್ದರೂ ಪ್ರಯೋಜನವಾಗಿಲ್ಲ. ಎಲ್ಲಿ ಸಮಸ್ಯೆ ಇದೆಯೋ ಅಲ್ಲಿ ಕಾಮಗಾರಿ ಮಾಡುತ್ತಿಲ್ಲ ಎಂಬ ಆರೋಪವೂ ಇದೆ.

ಹಣಕೋಣದಿಂದ ಹಣಕೋಣ ಜೂಗಕ್ಕೆ ಹೋಗುವ ರಸ್ತೆಯನ್ನು ಕಾಂಕ್ರೀಟ್ ಮಾಡಲಾಗಿದೆ. ಆದರೆ, ಅದರ ಇಕ್ಕೆಲಗಳಲ್ಲಿ ಚರಂಡಿ ನಿರ್ಮಿಸಿಲ್ಲ. ಹಾಗಾಗಿ ಮಳೆ ನೀರು ರಸ್ತೆಯಲ್ಲೇ ಹರಿಯುತ್ತದೆ. ಜೋರಾಗಿ ಮಳೆಯಾದಾಗ ಸಮೀಪದ ಕೆಲವು ಮನೆಗಳ ಆವರಣಕ್ಕೂ ನೀರು ನುಗ್ಗುತ್ತದೆ ಎಂಬ ಅಳಲು ಗ್ರಾಮಸ್ಥರದ್ದಾಗಿದೆ.

ಪ್ರಸಿದ್ಧ ಧಾರ್ಮಿಕ ತಾಣ:ಪ್ರಸಿದ್ಧವಾಗಿರುವ ಹಲವು ಧಾರ್ಮಿಕ ಕೇಂದ್ರಗಳು ಹಣಕೋಣ ಗ್ರಾಮದಲ್ಲಿವೆ. ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಸಾತೇರಿ ದೇವಿ ದೇವಸ್ಥಾನದಲ್ಲಿ ಈಗ ಜಾತ್ರಾ ಮಹೋತ್ಸವದ ಸಂಭ್ರಮವಿದೆ. ಜಿಲ್ಲೆಯ ಮಾತ್ರವಲ್ಲದೇ ಗೋವಾ, ಮಹಾರಾಷ್ಟ್ರದಿಂದಲೂ ಇಲ್ಲಿಗೆ ಭಕ್ತರು ಬರುತ್ತಾರೆ.

ಮಾಳಸಾ ನಾರಾಯಣಿ ದೇಗುಲ, ಚಣಕ ದೇವಿ ಹಾಗೂ ಮಾರುತಿ ಮಂದಿರವೂ ಇಲ್ಲಿದೆ. ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದ್ದು, ಸಾತೇರಿ ವಿದ್ಯಾಲಯದಲ್ಲಿ ಪ್ರೌಢ ಶಿಕ್ಷಣ ಸಿಗುತ್ತದೆ. ಊರಿಗೆ ಬಸ್ ಸಂಪರ್ಕ ಉತ್ತಮವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT