ಶಿರಸಿಯಲ್ಲಿ ಆರೋಗ್ಯ ಮೇಳ 5, 6ರಂದು

ಮಂಗಳವಾರ, ಮಾರ್ಚ್ 26, 2019
22 °C
ತಜ್ಞ ವೈದ್ಯರಿಂದ ಚಿಕಿತ್ಸೆ, ಆಪ್ತ ಸಮಾಲೋಚನೆ ಕಾರ್ಯಕ್ರಮ: ಡಿಎಚ್ಒ ಡಾ.ಅಶೋಕ ಕುಮಾರ್

ಶಿರಸಿಯಲ್ಲಿ ಆರೋಗ್ಯ ಮೇಳ 5, 6ರಂದು

Published:
Updated:
Prajavani

ಕಾರವಾರ:  ಆರೋಗ್ಯ ಇಲಾಖೆಯು ಶಿರಸಿಯಲ್ಲಿ ಮಾರ್ಚ್ 5 ಮತ್ತು 6ರಂದು ಆರೋಗ್ಯ ಮೇಳ ಹಮ್ಮಿಕೊಂಡಿದೆ. ಎರಡು ದಿನವೂ ತಜ್ಞ ವೈದ್ಯರಿಂದ ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆ ಸಿಗಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಎನ್.ಅಶೋಕ ಕುಮಾರ್ ತಿಳಿಸಿದರು. 

ನಗರದಲ್ಲಿ ಶನಿವಾರ ಆಯೋಜಿಸಲಾದ ‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದ ವಿವಿಧ ಕಾರ್ಯಕ್ರಮಗಳ ಬಗ್ಗೆ ಪತ್ರಕರ್ತರಿಗೆ ಅರಿವು ಮೂಡಿಸುವ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.

ಒಂದು ಸಾವಿರಕ್ಕೂ ಅಧಿಕ ಮಂದಿ ಇದರ ಪ್ರಯೋಜನ ಪಡೆದುಕೊಳ್ಳುವ ನಿರೀಕ್ಷೆಯಿದೆ. ಎಲ್ಲ ರೀತಿಯ ಕಾಯಿಲೆಗಳ ಬಗ್ಗೆ ಮಾಹಿತಿ ನೀಡಿ ಅರಿವು ಮೂಡಿಸಲಾಗುವುದು. ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಮಂಗಳೂರಿನ ಎ.ಜೆ ಸಂಶೋಧನಾ ಕೇಂದ್ರದ ತಜ್ಞರು ಭಾಗವಹಿಸಲಿದ್ದು, ಹೆಚ್ಚಿನ ಚಿಕಿತ್ಸೆಯ ಅಗತ್ಯ ಉಳ್ಳವರ ಜತೆ ಆಪ್ತ ಸಮಾಲೋಚನೆ ಮತ್ತು ಚಿಕಿತ್ಸೆ ನೀಡಲಿದ್ದಾರೆ. ಹೃದಯ ಸಂಬಂಧಿ ಕಾಯಿಲೆ, ತಾಯಿ– ಮಕ್ಕಳ ಆರೋಗ್ಯ, ಕಿವಿ, ಗಂಟಲು, ನಾಲಿಗೆ ಆರೋಗ್ಯ, ಚರ್ಮರೋಗ, ಕ್ಷಯ, ಮಲೇರಿಯಾ, ಕಣ್ಣಿನ ಆರೋಗ್ಯ ಸಂಬಂಧ ಮಾಹಿತಿ ನೀಡಲಾಗುವುದು. ಮಾನಸಿಕ ಕಾಯಿಲೆಗೆ ಸಂಬಂಧಿಸಿದಂತೆ ಕೌನ್ಸೆಲಿಂಗ್ ಕೂಡ ಹಮ್ಮಿಕೊಳ್ಳಲಾಗುವುದು ಎಂದರು.

ಜಿಲ್ಲೆಯ ಡೆಂಗಿ, ಚಿಕೂನ್‌ ಗುನ್ಯಾ ನಿಯಂತ್ರಣ ಸಂಬಂಧ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ನೀರಿನ ಮೂಲದಿಂದ ಹರಡುವ ಕಾಯಿಲೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 22 ಜನರಿಗೆ ಮಂಗನಕಾಯಿಲೆಯ ವೈರಸ್ ತಗುಲಿದ್ದು, ಒಬ್ಬರೂ ಮೃತಪಟ್ಟಿಲ್ಲ. ಈ ಸಂಬಂಧ ಜಿಲ್ಲೆಯಲ್ಲಿ ಸಂಗ್ರಹಿಸಲಾದ 281 ರಕ್ತದ ಮಾದರಿಗಳ ಪೈಕಿ ಸಿದ್ದಾಪುರ ತಾಲ್ಲೂಕಿನಲ್ಲೇ ಅತ್ಯಧಿಕ 187 ಸೇರಿದೆ. ಈ ವರ್ಷವೇ ಇಷ್ಟೊಂದು ಪ್ರಕರಣಗಳು ಕಂಡುಬಂದಿದ್ದು, ನಿರಂತರ ನಿಗಾವಣೆಯಿಂದ ಮತ್ತಷ್ಟು ಹರಡದಂತೆ ತಡೆಯಲಾಗಿದೆ. ಶಾಲಾ ಮಕ್ಕಳಿಗೆ ಹಾಗೂ ಮನೆ ಮಂದಿಗೆ ಕರಪತ್ರಗಳನ್ನು ಹಂಚಿ ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು.

ಆರೋಗ್ಯ ಕರ್ನಾಟಕ ಮತ್ತು ಆಯುಷ್ಮಾನ್ ಭಾರತ ಯೋಜನೆಯನ್ನು ಅಳವಡಿಸಿಕೊಳ್ಳಲು ಜಿಲ್ಲೆಯಲ್ಲಿ 23 ಆಸ್ಪತ್ರೆಗಳು ಅರ್ಜಿ ಸಲ್ಲಿಸಿವೆ. ಅವುಗಳ ಪೈಕಿ ಒಂದರ ಜತೆ ಮಾತ್ರ ಸದ್ಯ ಒಪ್ಪಂದ ಮಾಡಿಕೊಳ್ಳಲಾಗಿದೆ. ಉಳಿದವುಗಳ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದ್ದು, ಒಂದು ತಿಂಗಳ ಒಳಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.

10ರಂದು ಪಲ್ಸ್ ಪೋಲಿಯೊ: ‘ಮಾರ್ಚ್ 10ರಂದು ಪಲ್ಸ್ ಪೋಲಿಯೊ ಲಸಿಕೆ ಹಾಕಲಾಗುವುದು. ಈ ಬಾರಿ ಒಂದೇ ಸುತ್ತಿನ ಕಾರ್ಯಕ್ರಮವಿದೆ. ಹಿಂದಿನ ವರ್ಷಗಳಂತೆ ಎರಡು ಸುತ್ತುಗಳಿಲ್ಲ. ಆದ್ದರಿಂದ ತಪ್ಪದೇ ಮಕ್ಕಳಿಗೆ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದು ಡಾ.ಅಶೋಕ ಕುಮಾರ್ ಹೇಳಿದರು. 

ಕಾರ್ಯಕ್ರಮದ ಸಂಬಂಧ ಟಾಸ್ಕ್‌ಫೋರ್ಸ್‌ ಸಮಿತಿ ಜತೆ ಚರ್ಚಿಸಲಾಗಿದ್ದು, ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

ಜಿಲ್ಲಾ ಕೇಂದ್ರ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಬಿ.ಹರಿಕಂತ್ರ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಕಡತೋಕ ಮಂಜು, ವಿವಿಧ ಆರೋಗ್ಯಾಧಿಕಾರಿಗಳಾದ ಡಾ.ಶರದ್ ನಾಯಕ, ಡಾ.ಶಂಕರ, ಡಾ.ಅನ್ನಪೂರ್ಣ ವಸ್ತ್ರದ, ಡಾ.ಸತೀಶ್ ಶೇಟ್, ಡಾ.ರಮೇಶ್ ರಾವ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !