ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಗಡಿಯಲ್ಲಿ ಆರೋಗ್ಯ ತಪಾಸಣೆ ಶುರು

ಮಹಾರಾಷ್ಟ್ರ, ಕೇರಳದಿಂದ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ
Last Updated 17 ಮಾರ್ಚ್ 2021, 12:32 IST
ಅಕ್ಷರ ಗಾತ್ರ

ಕಾರವಾರ: ‘ಮಹಾರಾಷ್ಟ್ರ ಮತ್ತು ಕೇರಳದಿಂದ ಉತ್ತರ ಕನ್ನಡಕ್ಕೆ ಬರುವವರು ಆರ್‌.ಟಿ.ಪಿ.ಸಿ.ಆರ್ ಪರೀಕ್ಷೆಯಲ್ಲಿ 72 ಗಂಟೆಗಳ ಒಳಗೆ ಪಡೆದ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ಹೊಂದಿರಲೇಬೇಕು. ಜಿಲ್ಲೆಯ ಗಡಿಗಳಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲಿ ಬುಧವಾರದಿಂದ ತಪಾಸಣೆ ಶುರು ಮಾಡಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ ಹೇಳಿದರು.

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದ ಅವರು, ‘ನೆರೆಯ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಹಾಗಾಗಿ ಜಿಲ್ಲೆಯ ಗಡಿಗಳಲ್ಲಿ ಕಟ್ಟುನಿಟ್ಟಿನ ತಪಾಸಣೆಗೆ ಸೂಚನೆ ನೀಡಲಾಗಿದೆ. ಜಿಲ್ಲೆಗೆ ಬರುವ ಆ ಎರಡು ರಾಜ್ಯಗಳ ಪ್ರವಾಸಿಗರು ಪರೀಕ್ಷೆ ಮಾಡಿಕೊಳ್ಳದಿದ್ದಲ್ಲಿ, ಅವರಿಗೆ ನಮ್ಮ ಜಿಲ್ಲೆಯಲ್ಲೇ ಪರೀಕ್ಷೆ ನಡೆಸಲು ಸೂಚಿಸಲಾಗಿದೆ’ ಎಂದರು.

‘ಕಾರವಾರದ ಮಾಜಾಳಿ, ಜೊಯಿಡಾದ ಅನಮೋಡ ಚೆಕ್‌ಪೋಸ್ಟ್‌ಗಳು ಹಾಗೂ ಭಟ್ಕಳದ ಗಡಿಯಲ್ಲಿ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ನೇಮಿಸಲಾಗಿದೆ. ಇದೇರೀತಿ, ಸೋಂಕು ದೃಢಪಟ್ಟವರ ಹೋಂ ಕ್ವಾರಂಟೈನ್ ಅಥವಾ ಸಾಂಸ್ಥಿಕ ಕ್ವಾರಂಟೈನ್‌ಗೂ ವ್ಯವಸ್ಥೆ ಪುನರಾರಂಭಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದ್ದಾರೆ. ಕೋವಿಡ್ ಎರಡನೇ ಅಲೆ ತಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಸೂಚಿಸಿದ್ದಾರೆ. ಅದರಂತೆ ಗೋವಾದ ಗಡಿಯಲ್ಲಿ, ಮುರ್ಡೇಶ್ವರ ಹಾಗೂ ಗೋಕರ್ಣದಲ್ಲಿ ಮಹಾರಾಷ್ಟ್ರ ಹಾಗೂ ಕೇರಳದಿಂದ ಬರುವವರನ್ನು ಪರಿಶೀಲಿಸಲಾಗುತ್ತದೆ. ಪ್ರಯಾಣಿಕರು ಅಥವಾ ಪ್ರವಾಸಿಗರಿಗೆ ಜಿಲ್ಲೆಗೆ ಬರಲು ಯಾವುದೇ ಅಡ್ಡಿ ಉಂಟು ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಅಭಿಯಾನ ಮತ್ತಷ್ಟು ತೀವ್ರ’:

‘ಜಿಲ್ಲೆಯಲ್ಲಿ ಈಗ ದಿನವೊಂದಕ್ಕೆ 1,200 ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಅಗತ್ಯವಿದ್ದಷ್ಟು ಲಸಿಕೆ ಸಂಗ್ರಹವಿದೆ. 15 ಸಾವಿರ ಮಂದಿ ಲಸಿಕೆ ಪಡೆದುಕೊಂಡಿದ್ದು, ಮತ್ತಷ್ಟು ಜನರಿಗೆ ಲಸಿಕಾ ಅಭಿಯಾನವನ್ನು ತೀವ್ರಗೊಳಿಸಲಾಗುತ್ತದೆ. ವಿಶೇಷ ಗ್ರಾಮ ಸಭೆಗಳ ಮೂಲಕ ಸಾರ್ವಜನಿಕರನ್ನು ಲಸಿಕಾ ಕೇಂದ್ರಗಳಿಗೆ ಕರೆದುಕೊಂಡು ಬರಲು ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯ ಎಲ್ಲ 82 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಲ್ಲಿ ಬೇಕಾದರೂ ಲಸಿಕೆ ಪಡೆದುಕೊಳ್ಳಲು ಅವಕಾಶವಿದೆ’ ಎಂದು ಪ್ರಿಯಾಂಗಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT