ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕೋಲಾ: ಖಾಸಗಿ ಕ್ಲಿನಿಕ್‌ಗಳ ಮೇಲಿನ ದಾಳಿ ಮುಂದುವರಿಕೆ

ನಿಯಮಬಾಹಿರವಾಗಿ ವೈದ್ಯಕೀಯ ವೃತ್ತಿಯಲ್ಲಿ ಭಾಗಿ ಆರೋಪ
Last Updated 30 ಜೂನ್ 2021, 13:05 IST
ಅಕ್ಷರ ಗಾತ್ರ

ಅಂಕೋಲಾ: ಸುಳ್ಳು ಮಾಹಿತಿಗಳನ್ನು ನೀಡಿ ವಂಚಿಸುತ್ತಿದ್ದ ಮತ್ತು ಕೆ.ಪಿ.ಎಂ.ಇ ಕಾಯ್ದೆ ಅಡಿ ನೋಂದಣಿ ಮಾಡಿಕೊಳ್ಳದೆ ವೈದ್ಯಕೀಯ ವೃತ್ತಿ ಮಾಡುತ್ತಿರುವ ಖಾಸಗಿ ಕ್ಲಿನಿಕ್‌ಗಳ ಮೇಲಿನ ದಾಳಿಯನ್ನು ತಾಲ್ಲೂಕು ಆರೋಗ್ಯ ಅಧಿಕಾರಿಗಳು ಮುಂದುವರಿಸಿದ್ದಾರೆ.

ಪಟ್ಟಣದ ವಿವಿಧಡೆ ಬುಧವಾರ ಆರು ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಲಾಗಿದೆ. ಪಟ್ಟಣದ ಹೆಗಡೆ ಕ್ಲಿನಿಕ್‌ನ ನಾರಾಯಣ ಹೆಗಡೆ ಮತ್ತು ಆದರ್ಶ ಕ್ಲಿನಿಕ್‌ನ ಮ್ಯಾನುಯೆಲ್ ಫರ್ನಾಂಡಿಸ್ ಇವರು ವೈದ್ಯಕೀಯ ಪದವಿ ಪಡೆದಿದ್ದಾರೆ. ಇದುವರೆಗೂ ಕೆ.ಪಿ.ಎಂ.ಇ ಅಡಿಯಲ್ಲಿ ನೋಂದಣಿ ಮಾಡಿಕೊಂಡಿಲ್ಲ. ಹಾಗಾಗಿ ನೋಂದಾಯಿಸಿಕೊಳ್ಳುವಂತೆ ನೋಟಿಸ್ ನೀಡಲಾಗಿದೆ. ಗುಡಿಗಾರ ಗಲ್ಲಿಯ ನಾಸೀರ್ ಅಹಮದ್ ಅವರ ಐಡಿಯಲ್ ಲ್ಯಾಬ್ ಅನ್ನು ಕಾನೂನಿನ ಪ್ರಕಾರ ನೋಂದಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಪಟ್ಟಣದ ಮುಖ್ಯರಸ್ತೆಯ ಮಾಸ್ತಿ ಕ್ಲಿನಿಕ್‌ನ ನಾಗರಾಜ್ ಮಾಸ್ತಿ, ಕೆ.ಪಿ.ಎಂ.ಇ ಅಡಿಯಲ್ಲಿ ಆಯುರ್ವೇದ ಚಿಕಿತ್ಸೆ ನೀಡುವುದಾಗಿ ನೋಂದಾಯಿಸಿಕೊಂಡಿದ್ದಾರೆ. ದಾಳಿಯ ವೇಳೆ ಅಲೋಪತಿ ಚಿಕಿತ್ಸೆ ನೀಡುತ್ತಿರುವುದು ಹಾಗೂ ಅನುಮತಿ ಇಲ್ಲದ ಔಷಧಗಳನ್ನು ಬಳಕೆ ಮಾಡುತ್ತಿರುವುದು ಕಂಡುಬಂದಿದೆ.

‘ಜೋಗಳಸೆಯಲ್ಲಿ ಆಸ್ಪತ್ರೆ ನಡೆಸುತ್ತಿರುವ ನಿತ್ಯಾನಂದ ಜೈವಂತ್, ವೈದ್ಯಕೀಯ ಪದವಿ ಪಡೆದ ಕುರಿತು ಸ್ಪಷ್ಟ ದಾಖಲೆಗಳಿಲ್ಲ. ಇಬ್ಬರು ವೈದ್ಯರ ಮೇಲೆ ಐ.ಪಿ.ಸಿ 420 ಅಡಿ ಯಾಕೆ ದೂರು ದಾಖಲಿಸಬಾರದು ಎಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಮೇಲಿನ ದಾಳಿಯ ಕುರಿತು ಮೇಲಧಿಕಾರಿಗಳಿಗೆ ಸಂಪೂರ್ಣ ವರದಿ ನೀಡಲಾಗುವುದು’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ನಿತಿನ್ ಹೊಸ್ಮೆಲ್ಕರ್ ತಿಳಿಸಿದ್ದಾರೆ.

ಕೆಲವು ದಿನಗಳಿಂದ ಕಾನೂನುಬಾಹಿರವಾಗಿ ಖಾಸಗಿ ಆಸ್ಪತ್ರೆ ನಡೆಸುತ್ತಿರುವವರ ಮೇಲೆ ಆರೋಗ್ಯ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತಿದೆ. ವೈದ್ಯಕೀಯ ಪದವಿ ಪಡೆದರೂ ಕೆಲವು ವೈದ್ಯರು ಕೆ.ಪಿ.ಎಂ.ಇ ಕಾಯ್ದೆ ಅಡಿ ನೋಂದಾಯಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಕೆಲವು ನಕಲಿ ವೈದ್ಯರು ರಾಜಕೀಯ ಒತ್ತಡ ಹೇರಿ ತಪ್ಪಿಸಿಕೊಳ್ಳಲು ಮುಂದಾಗುತ್ತಿರುವುದೂ ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT