ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾತೆ ಹಂಚಿಕೆ: ಮೂಡದ ಒಮ್ಮತ

ಹಣಕಾಸು, ಇಂಧನ ಖಾತೆ
Last Updated 28 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಖಾತೆ ಹಂಚಿಕೆ ಬಿಕ್ಕಟ್ಟು ನಿವಾರಣೆಗಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರು ಸರಣಿ ಸಭೆ ನಡೆಸಿ ಚರ್ಚಿಸಿದರೂ, ಹಣಕಾಸು ಮತ್ತು ಇಂಧನ ಖಾತೆಗಳನ್ನು ಬಿಟ್ಟುಕೊಡುವ ವಿಷಯದಲ್ಲಿ ಸಂಧಾನ ಸಾಧ್ಯವಾಗದ್ದರಿಂದ ಸೋಮವಾರವೂ ಬಿಕ್ಕಟ್ಟು ಬಗೆಹರಿಯಲಿಲ್ಲ.

ಬೆಳಿಗ್ಗೆ ದೆಹಲಿಗೆ ಬಂದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ಜೆಡಿಎಸ್‌ ಮುಖಂಡ ಎಚ್‌.ಡಿ. ರೇವಣ್ಣ ಅವರು ಕಾಂಗ್ರೆಸ್‌ ಮುಖಂಡರಾದ ಗುಲಾಂ ನಬಿ ಆಜಾದ್‌, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್‌, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್‌ ಅವರೊಂದಿಗೆ ಎರಡು ಗಂಟೆ ಚರ್ಚಿಸಿದರಾದರೂ ಮಹತ್ವದ ಖಾತೆಗಳನ್ನು ಬಿಟ್ಟುಕೊಡುವ ವಿಷಯದಲ್ಲಿ ಒಮ್ಮತ ಮೂಡಲಿಲ್ಲ.

ಹಣಕಾಸು, ಇಂಧನ, ಲೋಕೋಪಯೋಗಿ ಮತ್ತು ಜಲಸಂಪನ್ಮೂಲ ಖಾತೆಗಳಿಗೆ ಪಟ್ಟು ಹಿಡಿದಿದ್ದ ಜೆಡಿಎಸ್‌ ಮುಖಂಡರು, ಲೋಕೋಪಯೋಗಿ ಮತ್ತು ಜಲಸಂಪನ್ಮೂಲ ಖಾತೆಗಳನ್ನು ಬಿಟ್ಟುಕೊಡಲು ಒಪ್ಪಿಗೆ ಸೂಚಿಸಿದರೂ ಹಣಕಾಸು ಮತ್ತು ಇಂಧನ ಖಾತೆಗಳನ್ನು ಬಿಟ್ಟುಕೊಡಲು ಕಾಂಗ್ರೆಸ್‌ ವಲಯದಿಂದ ಸಮ್ಮತಿ ದೊರೆಯಲಿಲ್ಲ.

‘ಸರ್ಕಾರ ರಚಿಸಲು ಬೇಷರತ್‌ ಬೆಂಬಲ ನೀಡುವುದಾಗಿ ಘೋಷಿಸಿರುವ ಕಾಂಗ್ರೆಸ್‌, ಖಾತೆ ಹಂಚಿಕೆ ವಿಷಯದಲ್ಲಿ ಷರತ್ತು ವಿಧಿಸುತ್ತಿರುವುದು ಸರಿಯಲ್ಲ. ಪ್ರಮುಖವಾದ ಎಲ್ಲ ಖಾತೆಗಳನ್ನೂ ಇರಿಸಿಕೊಳ್ಳಬೇಕೆಂಬ ಕಾಂಗ್ರೆಸ್‌ ಧೋರಣೆಯಿಂದಾಗಿ ಬಿಕ್ಕಟ್ಟು ಮುಂದುವರಿದಿದೆ. ಇದರಿಂದಾಗಿಯೇ ಸಂಪುಟ ರಚನೆ ಪ್ರಕ್ರಿಯೆ ವಿಳಂಬವಾಗುತ್ತ ಸಾಗಿದೆ’ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

‘ಕಾರ್ಮಿಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಮುಜರಾಯಿ, ಕೈಗಾರಿಕೆ ಮತ್ತಿತರ ಖಾತೆಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಒಪ್ಪಿರುವ ಕಾಂಗ್ರೆಸ್‌ ಮುಖಂಡರು, ಹಣಕಾಸು ಮತ್ತು ಇಂಧನ ಖಾತೆಗಳನ್ನು ನೀಡುವುದಕ್ಕೆ ಮೀನ–ಮೇಷ ಎಣಿಸುತ್ತಿರುವುದೇ ನಮಗೆ ಒಪ್ಪಿಗೆಯಾಗಿಲ್ಲ. ಮುಖ್ಯಮಂತ್ರಿ ಹೊರತುಪಡಿಸಿ ಪಕ್ಷದಿಂದ 11 ಜನ ಸಚಿವರಿಗೆ ಮಾತ್ರ ಅವಕಾಶ ದೊರೆಯಲಿದೆ. ಅದಕ್ಕಾಗಿಯೇ ಮಹತ್ವದ ಖಾತೆಗಳಿಗೆ ಬೇಡಿಕೆ ಸಲ್ಲಿಸಲಾಗಿದೆ’ ಎಂದು ಜೆಡಿಎಸ್‌ನ ಹಿರಿಯ ಶಾಸಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಂಗ್ರೆಸ್‌ ಮುಖಂಡರು ಸಂಜೆ ಗುಲಾಂ ನಬಿ ಆಜಾದ್‌ ನಿವಾಸದಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದರಲ್ಲದೆ, ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಅವರೊಂದಿಗೆ ದೂರವಾಣಿ ಹಾಗೂ ವಿಡಿಯೊ ಕಾನ್ಫರನ್ಸ್‌ ಮೂಲಕ ಮಾತುಕತೆ ನಡೆಸಿ ಚರ್ಚಿಸಿದರು. ಮಹತ್ವದ ಖಾತೆಗಳನ್ನು ‘ಪಡೆಯುವ’ ಮತ್ತು ‘ಬಿಟ್ಟುಕೊಡುವ’ ವಿಷಯದಲ್ಲಿ ಚರ್ಚೆ ನಡೆಸಲಾಗಿದೆ. ಒಂದೆರಡು ದಿನಗಳಲ್ಲಿ ಈ ಕುರಿತ ಬಿಕ್ಕಟ್ಟು ನಿವಾರಣೆಯಾಗಲಿದೆ ಎಂದು ಕಾಂಗ್ರೆಸ್‌ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದರು.

‘ನಮ್ಮ ಪಕ್ಷದಿಂದ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಕುರಿತು ವರಿಷ್ಠರು ಸೋಮವಾರ ಚರ್ಚಿಸುವ ಗೋಜಿಗೇ ಹೋಗಿಲ್ಲ. ಮೈತ್ರಿಕೂಟದಲ್ಲಿ ಯಾವ ಖಾತೆಯನ್ನು ಯಾರು ಪಡೆಯಬೇಕು ಎಂಬ ಬಗ್ಗೆಯೇ ಚರ್ಚೆ ನಡೆದಿದೆ. ಈಗ ತಲೆದೋರಿರುವ ಬಿಕ್ಕಟ್ಟು ಕೊನೆಗೊಂಡ ಬಳಿಕವಷ್ಟೇ ಕಾಂಗ್ರೆಸ್‌ನಿಂದ ಯಾರು ಸಚಿವ ಸ್ಥಾನ ಪಡೆಯಲಿದ್ದಾರೆ ಎಂಬ ಮಾಹಿತಿ ಪ್ರಕಟವಾಗಲಿದೆ’ ಎಂದು ಅವರು ಹೇಳಿದರು.

ಗೊಂದಲಗಳಿಲ್ಲ
ಸಂಪುಟ ರಚನೆ ವಿಚಾರದಲ್ಲಿ ಯಾವುದೇ ಸಮಸ್ಯೆ ಅಥವಾ ಗೊಂದಲಗಳು ಇಲ್ಲ. ಸಂಪುಟಕ್ಕೆ ಸೇರ್ಪಡೆಯಾಗುವವರ ಹೆಸರುಗಳನ್ನು ಮಂಗಳವಾರದೊಳಗೆ ಅಂತಿಮಗೊಳಿಸಲಾಗುವುದು. ಖಾತೆ ಹಂಚಿಕೆ ವಿಚಾರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಯಾವುದೇ ಸಮಸ್ಯೆಯಿಲ್ಲ. ಹಣಕಾಸು ಖಾತೆಯನ್ನು ಯಾರು ಹೊಂದಬೇಕು ಎಂಬ ಬಗ್ಗೆ ಚರ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬೆಳಿಗ್ಗೆ ನಡೆದ ಸಭೆಯ ನಂತರ ಹೇಳಿದರು.

ಸರ್ಕಾರದ ಕಾರ್ಯವೈಖರಿ ಮತ್ತು ಆಶಯಗಳಿಗೆ ತೊಂದರೆಯಾಗದಂತೆ ಸಂಪುಟ ರಚನೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಮೈತ್ರಿ ಸರ್ಕಾರದ ಎರಡೂ ಪಾಲುದಾರ ಪಕ್ಷಗಳು ಔದಾರ್ಯ ತೋರುವ ಮೂಲಕ ಖಾತೆ ಹಂಚಿಕೊಳ್ಳಬೇಕಿದೆ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT