ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ | ರಕ್ತನಿಧಿ ಕೇಂದ್ರಗಳಲ್ಲಿ ‘ಜೀವದ್ರವ’ದ ಕೊರತೆ

ಭಯ ಬಿಟ್ಟು ರಕ್ತದಾನ ಮಾಡಲು ವೈದ್ಯರ ಸಲಹೆ
Last Updated 1 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಶಿರಸಿ: ರಕ್ತ ಹೀನತೆಯಿಂದ ಬಳಲುತ್ತಿದ್ದ ವೃದ್ಧರೊಬ್ಬರಿಗೆ ತುರ್ತು ‘ಓ ಪಾಸಿಟಿವ್’ ಗುಂಪಿನ ರಕ್ತದ ಅಗತ್ಯವಿತ್ತು. ರಕ್ತನಿಧಿ ಕೇಂದ್ರಗಳಲ್ಲಿ ಲಭ್ಯವಾಗದೆ ಕುಟುಂಬದವರು ಪರದಾಡಿದರು. ಖಾಸಗಿ ಸಂಸ್ಥೆಯ ಉದ್ಯೋಗಿಯೊಬ್ಬರು ಕೆಲಸದ ಒತ್ತಡದ ನಡುವೆಯೂ ರಕ್ತ ನೀಡಲು ಮುಂದಾದ ಪರಿಣಾಮ ವೃದ್ಧರ ಆರೋಗ್ಯ ಚೇತರಿಕೆ ಕಂಡಿತು.

ಇದು ನಗರದಲ್ಲಿ ಶನಿವಾರ ನಡೆದ ಘಟನೆಯಾದರೆ, ಇನ್ನೊಂದು ಘಟನೆಯಲ್ಲಿ ಗರ್ಭಿಣಿಯೊಬ್ಬರಿಗೆ ತುರ್ತು ಎ ಪಾಸಿಟಿವ್ ಗುಂಪಿನ ರಕ್ತದ ಅಗತ್ಯವಿತ್ತು. ಇದನ್ನು ಹೊಂದಿಸಲಾಗದೆ ಸಂಜೆಯ ಹೊತ್ತಿಗೆ ದೂರದ ಸಾಗರದಿಂದ ಯುವಕರೊಬ್ಬರನ್ನು ಕರೆಯಿಸಿ ರಕ್ತ ಒದಗಿಸಲಾಯಿತು.

ಕೋವಿಡ್ ಮೂರನೆ ಅಲೆಯ ಹೊತ್ತಿಗೆ ರಕ್ತನಿಧಿ ಕೇಂದ್ರಗಳಲ್ಲಿ ಜೀವದ್ರವದ ಕೊರತೆಯಿಂದ ಜನರು ಎದುರಿಸುತ್ತಿರುವ ಸಮಸ್ಯೆಗಳ ಚಿತ್ರಣವಿದು.

ಕೋವಿಡ್ ಸೋಂಕು ರಕ್ತದಾನ ಶಿಬಿರಗಳು ನಡೆಯಲು ಅಡ್ಡಿಯಾಗಿದೆ. ರಕ್ತನಿಧಿ ಕೇಂದ್ರಗಳಲ್ಲಿ ರಕ್ತ ಸಂಗ್ರಹ ಖಾಲಿಯಾಗುತ್ತಿದ್ದು, ತುರ್ತು ಸಂದರ್ಭದಲ್ಲಿ ಹೊಂದಿಸುವುದೇ ಸವಾಲಾಗುತ್ತಿದೆ.

ಶಿರಸಿಯಲ್ಲಿ 2, ಕುಮಟಾ ಮತ್ತು ಕಾರವಾರದಲ್ಲಿ ತಲಾ ಒಂದು ರಕ್ತನಿಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯ ರಕ್ತನಿಧಿ ಕೇಂದ್ರ ವಾರ್ಷಿಕವಾಗಿ 1500ಕ್ಕೂ ಹೆಚ್ಚು ಯುನಿಟ್ ಸಂಗ್ರಹಿಸಿ, ಅಗತ್ಯ ಉಳ್ಳವರಿಗೆ ಪೂರೈಸುವ ಕೆಲಸ ಮಾಡುತ್ತಿದೆ. ಇಂತಹ ಕೇಂದ್ರಗಳಲ್ಲೂ ಈಗ ರಕ್ತದ ಕೊರತೆ ಉಂಟಾಗಿದೆ. ಇದೇ ಸ್ಥಿತಿ ಉಳಿದ ಕಡೆಯಲ್ಲೂ ಇದೆ.

‘ರಕ್ತದಾನ ಶಿಬಿರಗಳು ಈಚೆಗೆ ನಡೆಯುತ್ತಿಲ್ಲ. ಕೆಲವು ಕಡೆಗಳಲ್ಲಿ ನಡೆದಿದ್ದರೂ ರಕ್ತದಾನ ಮಾಡಿದವರ ಸಂಖ್ಯೆ ತೀರಾ ಕಡಿಮೆ ಇದೆ. ಹೀಗಾಗಿ ರಕ್ತಗಳು ನಿರೀಕ್ಷಿತ ಪ್ರಮಾಣದಲ್ಲಿ ಸಂಗ್ರಹವಾಗುತ್ತಿಲ್ಲ’ ಎನ್ನುತ್ತಾರೆ ಶಿರಸಿ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಸುಮನ್ ಹೆಗಡೆ.

‘ಕೋವಿಡ್ ಕಾರಣದಿಂದಾಗಿ ದೊಡ್ಡಮಟ್ಟದ ರಕ್ತದಾನ ಶಿಬಿರ ಆಯೋಜನೆಗೆ ಅನುಮತಿ ಸಿಗುತ್ತಿಲ್ಲ. ರಕ್ತ ನೀಡಲು ಸ್ವಯಂಪ್ರೇರಿತರಾಗಿ ಬಂದು ರಕ್ತ ನೀಡುವವರ ಸಂಖ್ಯೆಯೂ ಕಡಿಮೆ ಇದೆ. ರಕ್ತನಿಧಿ ಕೇಂದ್ರಗಳು ಆಸ್ಪತ್ರೆಗೆ ಹೊಂದಿಕೊಂಡೇ ಇರುವ ಕಾರಣ ಕೋವಿಡ್ ಭಯಕ್ಕೆ ದಾನಿಗಳು ಬರುತ್ತಿಲ್ಲ’ ಎಂದು ವೈದ್ಯರೊಬ್ಬರು ಅಭಿಪ್ರಾಯಪಟ್ಟರು.

ಹೊಸ ದಾನಿಗಳಿಲ್ಲ:ರಕ್ತದಾನದ ಮಹತ್ವ ಅರಿತ ಕೆಲ ಸಮಾನ ಮನಸ್ಕರು ವಾಟ್ಸಾಪ್ ಗುಂಪುಗಳ ಮೂಲಕ ಸಂವಹನ ನಡೆಸುತ್ತ ತುರ್ತು ಸಂದರ್ಭದಲ್ಲಿ ರಕ್ತದಾನಕ್ಕೆ ಜನರನ್ನು ಪ್ರೇರೇಪಿಸಿ ಹೊಂದಿಸುತ್ತಿದ್ದಾರೆ. ಈ ಮೂಲಕ ತುರ್ತು ವೇಳೆಯಲ್ಲಿ ರೋಗಿಗಳ ಜೀವ ಉಳಿಸುವ ಕಾರ್ಯಕ್ಕೆ ಕೈಜೋಡಿಸಿದ್ದಾರೆ.

‘ರಕ್ತದಾನ ಮಾಡಲು ಹಿಂಜರಿಕೆ ಹೆಚ್ಚುತ್ತಿದೆ. ಈ ಬಗ್ಗೆ ಭಯಪಡದಂತೆ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದೇವೆ. ಕೆಲವು ಖಾಯಂ ರಕ್ತದಾನಿಗಳು ಮಾತ್ರ ಪ್ರತಿ ಬಾರಿ ರಕ್ತದಾನ ಮಾಡುತ್ತಿದ್ದಾರೆ. ಹೊಸ ದಾನಿಗಳನ್ನು ಪ್ರೇರೇಪಿಸಿ ರಕ್ತ ಹೊಂದಿಸಲು ಸವಾಲಾಗುತ್ತಿದೆ’ ಎಂದು ವೈದ್ಯರೊಬ್ಬರು ಅಭಿಪ್ರಾಯಪಟ್ಟರು.

*

ರಕ್ತದಾನಕ್ಕೆ ಜನರನ್ನು ಪ್ರೇರೇಪಿಸಲು ನಿರಂತರ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.
-ಡಾ.ಎಸ್.ವಿ.ಭಟ್,ಶಿರಸಿ ರಕ್ತನಿಧಿ ಕೇಂದ್ರದ ಸಾರ್ವಜನಿಕ ಸಂಪರ್ಕಾಧಿಕಾರಿ

*

ರಕ್ತದಾನ ಮಾಡುವುದರಿಂದ ಆರೋಗ್ಯಕ್ಕೆ ಸಮಸ್ಯೆ ಆಗದು. ಆರೋಗ್ಯವಂತ ಜನರು ಭಯಬಿಟ್ಟು ರಕ್ತದಾನ ಮಾಡಬೇಕು.
-ಡಾ.ಸುಮನ್ ಹೆಗಡೆ,ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT