ಸೋಮವಾರ, ಜುಲೈ 4, 2022
24 °C

ಭಾರಿ ಮಳೆ, ಗಾಳಿ: ಉತ್ತರ ಕನ್ನಡದ ಹಲವೆಡೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಮಟಾ/ ಮುಂಡಗೋಡ: ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ಮತ್ತು ಮಂಗಳವಾರ ಬೆಳಿಗ್ಗೆ ಬೀಸಿದ ಗಾಳಿ ಮತ್ತು ಸುರಿದ ಜೋರು ಮಳೆಯಿಂದ ವಿವಿಧೆಡೆ ಹಾನಿಯಾಗಿದೆ.

ಕುಮಟಾ ತಾಲ್ಲೂಕಿನಾದ್ಯಂತ ಸೋಮವಾರ ರಾತ್ರಿ ಗುಡುಗು, ಮಿಂಚು, ಬಿರುಗಾಳಿ ಸಹಿತ ಮಳೆಗೆ ₹12.87 ಲಕ್ಷ ಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಲ್ಲೂಕಿನ ಗೋಕರ್ಣದ ಪದ್ಮಾ ಹರಿಜನ ಎನ್ನುವವರ ಮನೆಯ ಮೇಲೆ ಮರ ಮುರಿದು ಬಿದ್ದು ಸುಮಾರು ₹25 ಸಾವಿರ ಹಾನಿ ಸಂಭವಿಸಿದೆ. ಸಮೀಪದ ಕೋಟಿತೀರ್ಥದ ಕೃಷ್ಣಾ ಉಪಾಧ್ಯಾಯ ಎನ್ನುವವರ ಮನೆಯ ಚಾವಣಿ ಹಾರಿ ಹೋಗಿ ಸುಮಾರು ₹30 ಸಾವಿರ ಹಾನಿಯಾಗಿದೆ.

‘ಊರಕೇರಿ ಗ್ರಾಮದ ಕಾಶಿನಾಥ ನಾಯ್ಕ ಎನ್ನುವವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಸುಮಾರು ₹35 ಸಾವಿರ, ಹೆಗಡೆ ಗ್ರಾಮದ ಶಂಕರಿ ಮುಕ್ರಿ ಎನ್ನುವವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಸುಮಾರು ₹25 ಸಾವಿರ ಹಾನಿ ಉಂಟಾಗಿದೆ: ಎಂದು ತಹಶೀಲ್ದಾರ್ ವಿವೇಕ ಶೇಣೈ ಮಾಹಿತಿ ನೀಡಿದ್ದಾರೆ.

ವಿವಿಧೆಡೆ ಆರು ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿದೆ. 63 ವಿದ್ಯುತ್ ಕಂಬಗಳು ಉರುಳಿ ಬಿದ್ದು, ₹11.72 ಲಕ್ಷ ಹಾನಿ ಸಂಭವಿಸಿದೆ ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೇಶ ಮಡಿವಾಳ ತಿಳಿಸಿದ್ದಾರೆ.

ಮುಂಡಗೋಡ ತಾಲ್ಲೂಕಿನಲ್ಲಿ ಸೋಮವಾರ ಸಂಜೆ ಸುರಿದ ಗಾಳಿ ಸಹಿತ ಮಳೆಗೆ ಹತ್ತಕ್ಕೂ ಹೆಚ್ಚು ಮನೆಗಳ ಚಾವಣಿ ಹಾರಿಹೋಗಿದೆ. 30ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಮುರಿದು ಬಿದ್ದು, ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿದೆ.

ಇಲ್ಲಿನ ದೇಶಪಾಂಡೆ ನಗರದ ಜ್ಞಾನಪ್ರಜ್ಞಾ ಅಂಧ ಮಕ್ಕಳ ವಸತಿ ಶಾಲೆಯ ಚಾವಣಿ ಹಾರಿ ಹೋಗಿದೆ. ಕೊಠಡಿಯಲ್ಲಿದ್ದ ವಸ್ತುಗಳ ಮೇಲೆ ತಗಡಿನ ಶೀಟ್‌ಗಳು ಬಿದ್ದು, ಹಾನಿಯಾಗಿವೆ.  ಶಿವಾಜಿ ಕೋ ಆಪ್‌ ಸೊಸೈಟಿಯ ಗೋಡೆಗೆ ಹಾನಿಯಾಗಿದೆ. ಗಾಂಧಿನಗರ ನಿವಾಸಿ ಮಂಜುನಾಥ ರೇವಣಕರ ಎಂಬುವರ ಮನೆಯ ಮೇಲೆ ಹಲಸಿನ ಮರ ಬಿದ್ದಿತು. ಮಾರಿಕಾಂಬಾ ನಗರದ ಬಳಿ ಮರವೊಂದು ರಸ್ತೆ ಮೇಲೆ ಬಿದ್ದಿದ್ದರಿಂದ ಸಂಚಾರಕ್ಕೆ ತೊಂದರೆಯಾಗಿತ್ತು. ‘ಶೌರ್ಯ’ ತಂಡದ ಸದಸ್ಯರು ಮರವನ್ನು ತೆರವುಗೊಳಿಸಿದರು.

ಗ್ರಾಮೀಣ ಭಾಗದಲ್ಲಿಕೆಲ ಮನೆಗಳ ಮೇಲಿನ ತಗಡಿನ ಶೀಟ್‌ಗಳು ಹತ್ತಾರು ಮೀಟರ್‌ ದೂರದವರೆಗೆ ಹಾರಿ ಹೋಗಿದ್ದರಿಂದ, ಗ್ರಾಮಸ್ಥರು ಆತಂಕಗೊಂಡಿದ್ದರು. ಇಂದೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಪ್ಪ ಗ್ರಾಮದಲ್ಲಿ ಜಕಣಾಚಾರಿ ಕಾಲದ್ದೆಂದು ಹೇಳಲಾಗಿರುವ ಈಶ್ವರ ದೇವಸ್ಥಾನದ ಮೇಲೆ ಮರವೊಂದು ಉರುಳಿಬಿದ್ದು, ನಂದಿ ವಿಗ್ರಹಕ್ಕೆ ಹಾನಿಯಾಗಿದೆ.

‘ತಾಲ್ಲೂಕಿನಲ್ಲಿ 24 ಗಂಟೆಗಳಲ್ಲಿ ಗಾಳಿ–ಮಳೆಗೆ ಚವಡಳ್ಳಿ, ತೇಗಿನಕೊಪ್ಪ, ಕಲಕೊಪ್ಪ ಹಾಗೂ ಪಟ್ಟಣದಲ್ಲಿ ಮನೆಗಳ ಚಾವಣಿ ಹಾನಿಯಾಗಿದ್ದರಿಂದ ಅಂದಾಜು ₹ 5 ಲಕ್ಷ ನಷ್ಟವಾಗಿದೆ. ಹಾನಿ ಕುರಿತು ಕಂದಾಯ ಇಲಾಖೆ ಸಿಬ್ಬಂದಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ’ ಎಂದು ತಹಶೀಲ್ದಾರ್‌ ಶ್ರೀಧರ ಮುಂದಲಮನಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.