ಶನಿವಾರ, ಜುಲೈ 31, 2021
22 °C

ಕಾರವಾರ: ಮುಂದುವರಿದ ಮಳೆ, ಕದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

waterlogged houses in Karawar

ಕಾರವಾರ: ಕರಾವಳಿಯಲ್ಲಿ ಭಾರಿ ಮಳೆ ಮುಂದುವರಿದಿದೆ. ಶುಕ್ರವಾರ ದಿನವಿಡೀ ಸುರಿದಿದ್ದ ವರ್ಷಧಾರೆಯು ರಾತ್ರಿ ಸ್ವಲ್ಪ ಬಿಡುವು ನೀಡಿತ್ತು. ಶನಿವಾರ ಮುಂಜಾನೆಯಿಂದಲೇ ಜೋರಾಗಿ ಮಳೆ ಬೀಳುತ್ತಿದೆ.

ತಾಲ್ಲೂಕಿನ ಕದ್ರಾ ಜಲಾಶಯಕ್ಕೆ ಒಳಹರಿವು ಏರಿಕೆಯಾಗಿದೆ. 34.50 ಮೀಟರ್ ಗರಿಷ್ಠ ಎತ್ತರದ ಜಲಾಶಯದಲ್ಲಿ ಶುಕ್ರವಾರ 30.15 ಮೀಟರ್ ನೀರು ಸಂಗ್ರಹವಾಗಿತ್ತು. ಕಳೆದ ವರ್ಷ ಪ್ರವಾಹದ ಸಂದರ್ಭದ ಅನುಭವದ ಮೇರೆಗೆ ಈ ವರ್ಷ ಜಲಾಶಯದಲ್ಲಿ ಗರಿಷ್ಠ 32.50 ಮೀಟರ್ ನಷ್ಟೇ ನೀರು ಸಂಗ್ರಹಿಸಲು ಜಿಲ್ಲಾಡಳಿತ ಮತ್ತು ಕೆಪಿಸಿಎಲ್ ಅಧಿಕಾರಿಗಳ ಜಂಟಿ ಸಮಿತಿ ನಿರ್ಧರಿಸಿದೆ. ಹಾಗಾಗಿ ಮಳೆ ಇದೇ ಪ್ರಮಾಣದಲ್ಲಿ ಮುಂದುವರಿದರೆ ಶೀಘ್ರವೇ ನಿಗದಿತ ಮಟ್ಟಕ್ಕೆ ನೀರು ತಲುಪುವ ಸಾಧ್ಯತೆಯಿದೆ.

ಇದನ್ನೂ ಓದಿ: 

ಕರ್ನಾಟಕದ ವಿದ್ಯುತ್ ನಿಗಮವು ಜಲಾಶಯದ ಕೆಳಗಿನ ಭಾಗದ ನಿವಾಸಿಗಳಿಗೆ ಮೊದಲ ಮುನ್ಸೂಚನೆ ನೀಡಿದ್ದು, ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಹೊರ ಬಿಡಲಾಗುವುದು ಎಂದು ತಿಳಿಸಿದೆ. ಕಾಳಿ ನದಿಯ ಇಕ್ಕೆಲಗಳಲ್ಲಿ ವಾಸಿಸುತ್ತಿರುವವರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚಿಸಿದೆ.

ಅಂಕೋಲಾ ತಾಲ್ಲೂಕಿನಲ್ಲಿ ಶುಕ್ರವಾರ ಸಂಜೆ ಭಾರಿ ಮಳೆಯಿಂದ ನದಿಬಾಗ ಪ್ರದೇಶದಲ್ಲಿ ಹಳ್ಳ ಉಕ್ಕಿ ಹರಿದು ಸುಮಾರು 40 ಮನೆಗಳು ಜಲಾವೃತವಾಗಿದ್ದವು. ಸ್ಥಳೀಯರು ಹಳ್ಳದ ಕೋಡಿ ಒಡೆದು ನೀರು ಸಮುದ್ರಕ್ಕೆ ಸೇರುವಂತೆ ಮಾಡಿದ ಬಳಿಕ ನಿವಾಸಿಗಳು ನಿಟ್ಟುಸಿರು ಬಿಟ್ಟರು.

ನದಿಬಾಗದ ಶಾಲೆಯಲ್ಲಿ ಪರಿಹಾರ ಕೇಂದ್ರ ತೆರೆಯಲಾಗಿದ್ದು, ಸುಮಾರು 80 ಜನರನ್ನು ಅಲ್ಲಿಗೆ ಸ್ಥಳಾಂತರಿಸಲಾಗಿತ್ತು. ತಾಲ್ಲೂಕು ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು