ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯ ಜಾಗೃತಿಗೆ ಬೃಹತ್ ಮಾನವ ಸರಪಳಿ

Last Updated 7 ಫೆಬ್ರುವರಿ 2018, 9:56 IST
ಅಕ್ಷರ ಗಾತ್ರ

ಚಾಮರಾಜನಗರ: ಶೌಚಾಲಯ ನಿರ್ಮಾಣ ಮತ್ತು ಬಳಕೆ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸಲು ಆಶಾ ಕಾರ್ಯಕರ್ತೆಯರು ಮಂಗಳವಾರ ಬೃಹತ್‌ ಮಾನವ ಸರಪಳಿ ರಚಿಸಿ ಗಮನ ಸೆಳೆದರು.

ನಗರದ ವಾಲ್ಮೀಕಿ ಭವನದ ಮುಂಭಾಗದಿಂದ ಜಾಗೃತಿ ಜಾಥಾ ಆರಂಭಿಸಿದ ಜಿಲ್ಲೆಯ ವಿವಿಧೆಡೆಯ 300ಹೆಚ್ಚು ಕಾರ್ಯಕರ್ತೆಯರು ಡಾ. ಬಿ.ಆರ್. ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ವೃತ್ತಾಕಾರದಲ್ಲಿ ನಿಂತು ಕೈಕೈ ಜೋಡಿಸಿ ಸರಪಳಿ ನಿರ್ಮಿಸಿದರು. ‘ಶೌಚಾಲಯ ಬಳಸಿ, ಆರೋಗ್ಯ ರಕ್ಷಿಸಿ’ ಮುಂತಾದ ಘೋಷಣೆಗಳನ್ನು ಕೂಗಿದರು.

ಮೆರವಣಿಗೆಗೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ಶೌಚಾಲಯಗಳನ್ನು ನಿರ್ಮಿಸಿಕೊಂಡು ಬಳಕೆ ಮಾಡುವುದು ಪ್ರತಿ ನಾಗರಿಕನ ಜವಾಬ್ದಾರಿ. ನಮ್ಮ ಗ್ರಾಮವನ್ನು ಸ್ವಚ್ಛವಾಗಿ ಇರಿಸಿಕೊಳ್ಳುವ ಹೊಣೆ ನಮ್ಮ ಮೇಲೆಯೇ ಇರುತ್ತದೆ ಎಂದರು.

ಬಯಲು ಮಲ ವಿಸರ್ಜನೆ ಪದ್ಧತಿಗೆ ಸಂಪೂರ್ಣ ನಿಷೇಧ ಹೇರಬೇಕು. ಈ ಸಂಬಂಧ ಜನರಲ್ಲಿ ಅರಿವು ಮೂಡಿಸ ಬೇಕು. ಪ್ರತಿ ಗ್ರಾಮವೂ ಸ್ವಚ್ಛವಾಗಲು ಜನರು ಸಹಕರಿಸಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಚ್. ಪ್ರಸಾದ್‌ ಮಾತನಾಡಿ, ಆರೋಗ್ಯಪೂರ್ಣ ಪರಿಸರ ನಿರ್ಮಾಣಕ್ಕೆ ನೈರ್ಮಲ್ಯ ಕಾಪಾಡುವುದು ಬಹು ಅಗತ್ಯವಾಗಿದೆ. ಇದಕ್ಕಾಗಿ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಬೇಕು. ಶೌಚಾಲಯ ನಿರ್ಮಾಣದ ಗುರಿ ಮೊದಲ ಹೆಜ್ಜೆ. ನಂತರ ಅದರ ಬಳಕೆಯನ್ನು ಉತ್ತೇಜಿಸಬೇಕು ಎಂದು ಹೇಳಿದರು.

ಬಳಿಕ, ವಾಲ್ಮೀಕಿ ಭವನದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆಯಿಂದ ಶೌಚಾಲಯ ಬಳಕೆ, ಆರೋಗ್ಯ ಕಾಳಜಿಯ ಕುರಿತು ಕಾರ್ಯಕರ್ತೆಯರಿಗೆ ವಿಶೇಷ ಕಾರ್ಯಾಗಾರ ನಡೆಯಿತು.

ಜನರಲ್ಲಿ ಜಾಗೃತಿ ಮೂಡಿಸುವುದು, ಶೌಚಾಲಯದ ಉಪಯೋಗಗಳ ಕುರಿತು ತಿಳಿವಳಿಕೆ ನೀಡುವುದು ಮತ್ತು ಗ್ರಾಮಗಳ ಸ್ವಚ್ಛತೆಯ ಪರಿಸ್ಥಿತಿಯ ಕುರಿತು ವರದಿ ಸಲ್ಲಿಸುವುದರ ಕುರಿತು ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲೆಯನ್ನು ಸಂಪೂರ್ಣ ಬಯಲು ಶೌಚ ಮುಕ್ತವನ್ನಾಗಿಸಿ, ಶುಚಿತ್ವ ಹಾಗೂ ಆರೋಗ್ಯಯುತ ಪರಿಸರ ನಿರ್ಮಾಣ ಮಾಡುವುದಾಗಿ ಕಾರ್ಯಕರ್ತೆಯರು ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಮಾರ್ಚ್‌ನಲ್ಲಿ ಘೋಷಣೆ ಖಚಿತ: ಜಿಲ್ಲೆಯನ್ನು ಮಾರ್ಚ್‌ 8ರ ವೇಳೆಗೆ ಬಯಲು ಶೌಚ ಮುಕ್ತಗೊಳಿಸಿ, ಘೋಷಣೆ ಹೊರಡಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‌ಕುಮಾರ್ ತಿಳಿಸಿದರು.

ಶೇ 90ರಷ್ಟು ಶೌಚಾಲಯ ನಿರ್ಮಾಣ ಕೆಲಸ ಪೂರ್ಣಗೊಂಡಿದೆ. ಆದರೆ, ಅದರ ಬಳಕೆ ಕುರಿತು ಜನರಲ್ಲಿ ತಿಳಿವಳಿಕೆ ಮೂಡಿಸುವುದೇ ಬಹುದೊಡ್ಡ ಸಮಸ್ಯೆ. ಇದಕ್ಕಾಗಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿಗೆ ಕಾರ್ಯಾಗಾರ ಏರ್ಪಡಿಸಿ ಮಾಹಿತಿ ನೀಡಿ ಅವರ ಮೂಲಕ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ಗ್ರಾಮಗಳಿಗೆ ನಿತ್ಯ ಭೇಟಿ ನೀಡಿ ಅಲ್ಲಿ ಶೌಚಾಲಯ ಬಳಕೆ ಹೇಗೆ ನಡೆಯುತ್ತಿದೆ ಎಂಬುದರ ಬಗ್ಗೆ ವರದಿ ನೀಡುತ್ತಾರೆ. ಇದರಿಂದ ಯಾವ ಭಾಗದಲ್ಲಿ ಹೆಚ್ಚು ಸಮಸ್ಯೆ ಇದೆ ಎಂಬುದನ್ನು ಅರಿತು ಅಲ್ಲಿ ಗಮನ ಹರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಾಡಂಚಿನ ಪ್ರದೇಶದ ಸುಮಾರು 150 ಹಾಡಿಗಳ ಮುಖಂಡರನ್ನು ಕರೆಸಿ ಸಭೆ ನಡೆಸಿ ಶೌಚಾಲಯ ನಿರ್ಮಾಣ ಮತ್ತು ಬಳಕೆಯ ಮಹತ್ವದ ಕುರಿತು ಚರ್ಚಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಪ್ರಯತ್ನ ಬಹುತೇಕ ಯಶಸ್ವಿಯಾಗಿದೆ ಎಂದು ಹೇಳಿದರು. ಜಾಥಾದಲ್ಲಿ ಆರ್‌ಸಿಎಚ್‌ ಅಧಿಕಾರಿ ಡಾ. ವಿಶ್ವೇಶ್ವರಯ್ಯ, ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಂ. ಚಲುವಯ್ಯ, ಇತರರು ಭಾಗವಹಿಸಿದ್ದರು.

* *

ಶೌಚಾಲಯ ನಿರ್ಮಾಣ ಗುರಿ ಪೂರೈಸಿದರೂ ಅದನ್ನು ಬಳಸುವಂತೆ ಜನರಲ್ಲಿ ಅರಿವು ಮೂಡಿಸುವುದು ಸುಲಭವಲ್ಲ. ಅದಕ್ಕೆ ಸಮಯ ತಗಲುತ್ತದೆ
ಡಾ.ಕೆ. ಹರೀಶ್‌ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT