ಧಾರಾಕಾರ ಮಳೆಗೆ ನಲುಗಿದ ಅಂಕೋಲಾ

7
ಕೃಷಿ ಭೂಮಿ, ಸೇತುವೆಗಳು ಜಲಾವೃತ: ಸಂತ್ರಸ್ತರು ಗಂಜಿಕೇಂದ್ರಕ್ಕೆ ಸ್ಥಳಾಂತರ

ಧಾರಾಕಾರ ಮಳೆಗೆ ನಲುಗಿದ ಅಂಕೋಲಾ

Published:
Updated:
Deccan Herald

ಅಂಕೋಲಾ: ನಾಲ್ಕು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಆಶ್ಲೇಷಾ ಮಳೆಗೆ ಅಂಕೋಲಾ ತಾಲ್ಲೂಕು ನಲುಗಿದೆ. ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ಕೃಷಿಕರು ನಷ್ಟದ ಆತಂಕದಲ್ಲಿದ್ದಾರೆ.

ತಾಲ್ಲೂಕಿನ ಅನೇಕ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ರಸ್ತೆಗಳು, ಹೊಲಗಳು ಜಲಾವೃತವಾಗಿವೆ. ಅಗ್ರಗೋಣ, ಸಗಡಗೇರಿ, ಮೊಗಟಾ, ವಾಸರಕುದ್ರಿಗೆ, ಶಟಗೇರಿ, ಅಗಸೂರು, ಸುಂಕಸಾಳ ಸಮಸ್ಯೆ ಹೆಚ್ಚಿದೆ.

ಮೊಗಟಾ ಗ್ರಾಮ ಪಂಚಾಯ್ತಿಯ ಆಂದ್ಲೆ– ಮೊಗಟಾ ಕೂಡು ರಸ್ತೆಯಲ್ಲಿ ನೀರು ತುಂಬಿದ್ದು ಸಂಚಾರ ಸ್ಥಗಿತಗೊಂಡಿದೆ. ವಾಸರಕುದ್ರಿಗೆ ಗ್ರಾಮ ಪಂಚಾಯ್ತಿಯಿಂದ ಮೇಲಿನ ಕೊಡ್ಸಣಿ ಹತ್ತಿರದ ಸೇತುವೆ, ಕುದ್ರಗೆ ಮತ್ತು ಮಾವಿನಗದ್ದೆ ಸೇತುವೆಯಲ್ಲೂ ಸಂಚಾರ ಸಾಧ್ಯವಾಗುತ್ತಿಲ್ಲ.

ಸಗಡಗೇರಿ ಗ್ರಾಮದ ಕಾಮಗೆ, ಸಗಡಗೇರಿ, ಉಳುವರೆ, ಬೊಳುಕುಂಟೆ, ಅಗ್ರಗೋಣ ಗ್ರಾಮದ ಜೂಗ, ಕೂರ್ವೆ, ಕರ್ಕಿತುರಿ, ಶೇಡಿಕಟ್ಟಾ ಗ್ರಾಮಗಳಲ್ಲಿ ಜನರನ್ನು ಗಂಜಿಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಅಗ್ರಗೋಣ ಪಂಚಾಯ್ತಿಯ ಜೂಗ, ಶೇಡಿಕಟ್ಟಾ, ಜೂಗಾ ಅಂಗನವಾಡಿ ಕೇಂದ್ರಗಳಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಗಾಂವಕರ ನೆರೆಹಾವಳಿ ಪೀಡಿತ ಪ್ರದೇಶವಾದ ಕೂರ್ವೆ ನಡುಗಡ್ಡೆಗೆ ಮಂಗಳವಾರ ಬೆಳಿಗ್ಗೆ ಭೇಟಿ ನೀಡಿದ್ದರು. ಅವರು ಅಲ್ಲಿರುವಾಗಲೇ ಗಂಗಾವಳಿ ನದಿಯ ನೀರು ಉಕ್ಕೇರುತ್ತಿತ್ತು. ಆದರೂ ಅಲ್ಲಿಯ ಜನರ ಚಿಂತಾಜನಕ ಪರಿಸ್ಥಿತಿಯನ್ನು ತಿಳಿದು, ಜನರನ್ನು ಗಂಜಿಕೇಂದ್ರಕ್ಕೆ ಸ್ಥಳಾಂತರಿಸುವವರೆಗೆ ನಡುಗಡ್ಡೆಯಲ್ಲೇ ಉಳಿದರು.

ಶಾಸಕಿ ರೂಪಾಲಿ ನಾಯ್ಕ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಗಾಂವಕರ, ಸಹಾಯಕ ಆಯುಕ್ತೆ ಲಕ್ಷ್ಮೀಪ್ರಿಯಾ, ತಹಶೀಲ್ದಾರ ವಿವೇಕ ಶೇಣ್ವಿ, ಸಿಪಿಐ ಪ್ರಮೋದ ಕುಮಾರ, ಪಿಎಸ್‍ಐ ಶ್ರೀಧರ, ಜಿಲ್ಲಾ ಪಂಚಾಯ್ತಿ ಸದಸ್ಯ ಜಗದೀಶ ನಾಯಕ, ಮುಖಂಡರಾದ ಮಂಜುಳಾ ವೇರ್ಣೆಕರ, ಶ್ರೀಕಾಂತ ದುರ್ಗೇಕರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !