ಬುಧವಾರ, ನವೆಂಬರ್ 20, 2019
20 °C
ಬೆಂಬಲಿಗರ ಸಭೆಯಲ್ಲಿ ಶಿವರಾಮ ಹೆಬ್ಬಾರ್ ಹೇಳಿಕೆ

ಉಪಚುನಾವಣೆಯಲ್ಲಿ ಸ್ಪರ್ಧಿಸುವುದು ನಿಶ್ಚಿತ: ಶಿವರಾಮ ಹೆಬ್ಬಾರ್

Published:
Updated:
Prajavani

ಶಿರಸಿ: ‘ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಗೊಂಡ ನಂತರದಲ್ಲಿ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಚುನಾವಣೆಯಲ್ಲಿ ಸ್ಪರ್ಧಿಸುವುದು ನಿಶ್ಚಿತ’ ಎಂದು ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಶಿವರಾಮ ಹೆಬ್ಬಾರ್ ಹೇಳಿದರು.

ತಾಲ್ಲೂಕಿನ ಬನವಾಸಿಯಲ್ಲಿ ಸೋಮವಾರ ಆಯೋಜಿಸಿದ್ದ ಬೆಂಬಲಿಗರ ಸಭೆಯ ಪೂರ್ವ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ಅನರ್ಹಗೊಂಡಿರುವ ಎಲ್ಲ ಶಾಸಕರು ಒಟ್ಟಾಗಿದ್ದೇವೆ. ಕೋರ್ಟ್ ತೀರ್ಪು ಬಂದ ಮೇಲೆ ಒಟ್ಟಾಗಿಯೇ ರಾಜಕೀಯ ತೀರ್ಮಾನ ಕೈಗೊಳ್ಳುತ್ತೇವೆ’ ಎಂದರು.

‘ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದವರು ಈ ಹಿಂದೆ ಎಸ್.ಬಂಗಾರಪ್ಪ ಜೊತೆಗೆಯಲ್ಲಿ ಪಕ್ಷಾಂತರಗೊಂಡಿದ್ದರು. ಆಗ ಅವರಿಗೆ ನಾಚಿಕೆ ಇಲ್ಲವಾಗಿತ್ತೇ ? ಈಗ ನನ್ನ ನೈತಿಕತೆಯ ಬಗ್ಗೆ ಮಾತನಾಡುತ್ತಾರೆ. ಜಿಲ್ಲೆಯ ಯಾವುದೇ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆ ನಡೆದರೂ ಭೀಮಣ್ಣ ನಾಯ್ಕ ಅಭ್ಯರ್ಥಿಯಾಗುತ್ತಾರೆ’ ಎಂದು ಟೀಕಿಸಿದರು.

‘ಚುನಾವಣೆಯಲ್ಲಿ ಜಾತಿ ವಿಷಯ ಕೇಳಿ ಬರುತ್ತಿರುವುದು ನೋವಿನ ವಿಷಯ. ನಿರ್ದಿಷ್ಟ ಜಾತಿಯ ನಾಯಕನಾಗುವ ಬದಲು ಅದನ್ನು ಮೀರಿದ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ನಾನು ಎಂದೂ ಜಾತಿ ರಾಜಕಾರಣ ಮಾಡಿಲ್ಲ’ ಎಂದು ಸಮಜಾಯಿಷಿ ನೀಡಿದರು.

ದಾಸನಕೊಪ್ಪ ಹಾಗೂ ಬನವಾಸಿಯಲ್ಲಿ ಹೆಬ್ಬಾರ್ ಬೆಂಬಲಿಗರ ಸಭೆ ನಡೆಯಿತು. ವಿವಿಧ ಗ್ರಾಮ ಪಂಚಾಯ್ತಿಗಳ ಸದಸ್ಯರು, ಜಿಲ್ಲಾ ಪಂಚಾಯ್ತಿ ಸದಸ್ಯೆ ರೂಪಾ ನಾಯ್ಕ, ತಾಲ್ಲೂಕು ಪಂಚಾಯ್ತಿ ಸದಸ್ಯ ಸುರೇಶ ನಾಯ್ಕ ನಾಯ್ಕ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)