ಶುಕ್ರವಾರ, ನವೆಂಬರ್ 15, 2019
23 °C
ಕುಮಟಾ ತಾಲ್ಲೂಕಿನ ಹೆಗಡೆ ಗ್ರಾಮದ ಶಾಲೆಗೆ ನೂರರ ಕಿರೀಟ

ಕಾರವಾರ: ಶತಮಾನದ ಹೆಜ್ಜೆ ದಾಟಿದ ಹೆಣ್ಣುಮಕ್ಕಳ ಶಾಲೆ

Published:
Updated:
Prajavani

ಕಾರವಾರ: ಧರ್ಮದ ಹೆಸರಿನಲ್ಲಿ, ಸಹಗಮನಕ್ಕೆ ಹೆಣ್ಣನ್ನು ಬೆಂಕಿಗೆ ದೂಡುತ್ತಿದ್ದ ಕಾಲಘಟ್ಟವದು. ಆ ದಿನದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ಸಿಗಲೇಬೇಕು ಎಂದು ಪಣತೊಟ್ಟು, ಅವರ ಕಲಿಕೆಗಾಗಿಯೇ ಪ್ರತ್ಯೇಕ ಶಾಲೆ ನಿರ್ಮಿಸಲಾಯಿತು. ಅದು ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆಯಾಗಿ ಶತಮಾನದ ಸಂಭ್ರಮವನ್ನು ಕಂಡಿದೆ.

ಕುಮಟಾ ತಾಲ್ಲೂಕಿನ ಹೆಗಡೆ ಗ್ರಾಮದ, ಅಘನಾಶಿನಿ ತಟದಲ್ಲಿರುವ ಶಾಲೆ ಇದು. ತಾಲ್ಲೂಕು ವ್ಯಾಪ್ತಿಯಲ್ಲಿ ಉಳಿದುಕೊಂಡಿರುವ ಏಕೈಕ ಹೆಣ್ಣುಮಕ್ಕಳ ಶಾಲೆ ಎಂಬ ಹೆಗ್ಗಳಿಕೆ ಹೊಂದಿದೆ. 1918ರಲ್ಲಿ ಶಾಂತಿಕಾಂಬಾ ದೇವಸ್ಥಾನದ ಎದುರಿನ ಧರ್ಮಶಾಲೆಯಲ್ಲಿ ಇದನ್ನು ನಿರ್ಮಿಸಲಾಯಿತು. ರಾಘವೇಂದ್ರ ಶಾನಭಾಗ, ಗಣೇಶ ಹೆಗಡೆ ಮುಂದಾಳತ್ವದಲ್ಲಿ ಶಾಲೆ ರಚನೆಗೊಂಡಿತ್ತು.

ಈಗ ಮಂಗಲಾ ಹೆಬ್ಬಾರ ಪ್ರಭಾರ ಮುಖ್ಯಶಿಕ್ಷಕಿಯಾಗಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸಿಂಹಪಾಲು ಈ ಶಾಲೆಯ ಮಕ್ಕಳದ್ದು. 2016-17ರಲ್ಲಿ ಅಥ್ಲೆಟಿಕ್ಸ್ ವಿಭಾಗದಲ್ಲಿ ರಾಜ್ಯಮಟ್ಟಕ್ಕೆ ಪ್ರವೇಶ ಪಡೆದಿದ್ದರು. 2012-13ರಲ್ಲಿ ಆಶುಭಾಷಣ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಪ್ರವೇಶಿಸಿದ್ದರು. ಈ ವರ್ಷ ನಡೆದ ಪ್ರತಿಭಾ ಕಾರಂಜಿಯಲ್ಲಿ ವೈಯಕ್ತಿಕ 9 ಮತ್ತು ಸಾಮೂಹಿಕ 4 ವಿಭಾಗದಲ್ಲಿ ತಾಲ್ಲೂಕು ಮಟ್ಟಕ್ಕೆ ಪ್ರವೇಶ ಪಡೆದಿದೆ. ಜೊತೆಗೆ ಈ ಶಾಲೆಯ ಶಿಕ್ಷಕ ಶ್ರೀಧರ್ ಗೌಡ ಅವರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.

ಇಲ್ಲಿ ಪಾಠದ ಜೊತೆ ಕಲೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಮಕ್ಕಳು ಗುರುತಿಸಿಕೊಳ್ಳುತ್ತಿದ್ದಾರೆ. 2015-16ರಲ್ಲಿ ಆಯೋಜಿಸಿದ್ದ ವಿಜ್ಞಾನ ಮೇಳವು ಪ್ರತಿಭೆಗಳಿಗೆ ವೇದಿಕೆಯಾಗಿತ್ತು. ಹಾಗೆಯೇ ಪ್ರತಿ ಗುರುವಾರ ‘ಇಂಗ್ಲಿಷ್ ಡೇ’ ಆಚರಣೆ ಮಾಡುತ್ತಾರೆ. ಪ್ರಾರ್ಥನೆ ಸಂದರ್ಭದಲ್ಲಿ ‘ದಿನಕ್ಕೊಂದು ಪುಸ್ತಕ’ ಹೆಸರಿನಲ್ಲಿ ಪುಸ್ತಕದ ಪರಿಚಯ ಮಾಡಿಕೊಡಲಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಶಾಲೆಯ ಶಿಕ್ಷಕರೂ ಆಗಿರುವ ಡಾ.ಶ್ರೀಧರ್ ಗೌಡ ಅವರು, ‘ಸಾಹಿತ್ಯ ಮಾಲೆ’ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದ್ದಾರೆ. ಇದು ಮಕ್ಕಳ ಜ್ಞಾನ ಬೆಳವಣಿಗೆಗೆ ಸಹಕಾರಿಯಾಗಿದೆ.

ಪ್ರತಿ ವರ್ಷ ಮಕ್ಕಳ ಶೈಕ್ಷಣಿಕ ಪ್ರವಾಸ ಮತ್ತು ವಾರ್ಷಿಕ ಸ್ನೇಹ ಸಮ್ಮೇಳನ ಹಮ್ಮಿಕೊಳ್ಳುತ್ತಾರೆ. ಚಿಂತನ ವಿಜ್ಞಾನ ಪರೀಕ್ಷೆ ಮತ್ತು ಚಿಂತನ ಗಣಿತ ಪರೀಕ್ಷೆಗಳನ್ನು ವರ್ಷಂಪ್ರತಿ ಆಯೋಜಿಸುತ್ತಾರೆ. ಮಕ್ಕಳನ್ನು ಪ್ರೋತ್ಸಾಹಿಸುವ ಸಲುವಾಗಿ, ಶೈಕ್ಷಣಿಕ ಮತ್ತು ಕ್ರೀಡಾ ಚಟುವಟಿಕೆಗಳು ನಡೆಯುತ್ತವೆ. ಕಲಿಕೆಯನ್ನು ಸುಗಮಗೊಳಿಸಲು ‘ಸ್ಮಾರ್ಟ್ ಕ್ಲಾಸ್’ ಪ್ರಾರಂಭಿಸಲಾಗಿದೆ. ವರ್ಷದಿಂದ ವರ್ಷಕ್ಕೆ ಮಕ್ಕಳ ಕೈಬರಹದ ಹಸ್ತಪತ್ರಿಕೆ ಸುಂದರವಾಗಿ ಹೊರಹೊಮ್ಮುತ್ತಿದೆ. ಮಕ್ಕಳ ಪ್ರೋತ್ಸಾಹ ಧನಕ್ಕಾಗಿ ₹3.70ಲಕ್ಷ  ಠೇವಣಿ ಇಡಲಾಗಿದೆ.

ಕಲಿಕೆಯ ಗುಣಮಟ್ಟದಲ್ಲಿ ಖಾಸಗಿ ಶಾಲೆಗಳಿಗೇನೂ ಕಡಿಮೆ ಇಲ್ಲ. ಇಲ್ಲಿನ ನುರಿತ ಶಿಕ್ಷಕರ ಮಾರ್ಗದರ್ಶನದಿಂದ ಮಕ್ಕಳು ಸವ್ಯಸಾಚಿಯಾಗಿ ಮಾರ್ಪಡುತ್ತಿದ್ದಾರೆ. 

ಶತಮಾನೋತ್ಸವ ಸಂಭ್ರಮ
ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ರಾಜ್ಯ, ದೇಶ–ವಿದೇಶಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ. ನೂರಾರು ಪ್ರತಿಭಾನ್ವಿತರನ್ನು ಸಮಾಜಕ್ಕೆ ನೀಡಿರುವ ಈ ಶಾಲೆ, ಕಳೆದ ವರ್ಷ ನೂರು ವರ್ಷವನ್ನು ಪೂರೈಸಿದೆ. ನಾಲ್ಕು ದಿನ ಹಗಲು–ರಾತ್ರಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಸಂಯೋಜಿಸಿ ತಾಲ್ಲೂಕಿನ ಪ್ರಶಂಸೆಗೆ ಪಾತ್ರವಾಗಿತ್ತು. ಭಾರತದ ಮೊದಲ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರ ಪ್ರಸಾದ್, ಪಂಡಿತ್ ಜವಾಹರಲಾಲ್ ನೆಹರೂ, ಲಾಲ್ ಬಹಾದ್ದೂರ್ ಶಾಸ್ತ್ರೀ ಅವರನ್ನು ಉಪಚರಿಸಿದ ಹೆಮ್ಮೆಯೂ ಈ ಶಾಲೆಗಿದೆ.

ಪ್ರತಿಕ್ರಿಯಿಸಿ (+)