ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹವಾಲು ಹೇಳಿಕೊಂಡ ಹೆಸ್ಕಾಂ ಗ್ರಾಹಕರು

ವಿದ್ಯುಚ್ಛಕ್ತಿ ಲೋಕಪಾಲ ಎಸ್.ಎಸ್.ಪಟ್ಟಣಶೆಟ್ಟಿ ಅಧ್ಯಕ್ಷತೆಯಲ್ಲಿ ಗ್ರಾಹಕರ ಕುಂದುಕೊರತೆ ನಿವಾರಣಾ ಸಭೆ
Last Updated 15 ಮಾರ್ಚ್ 2019, 11:20 IST
ಅಕ್ಷರ ಗಾತ್ರ

ಶಿರಸಿ: ಶಿರಸಿ, ಸಿದ್ದಾಪುರ ತಾಲ್ಲೂಕುಗಳಿಗೆ ಅಗತ್ಯವಿರುವ ಗ್ರಿಡ್‌ಗಳನ್ನು ಮಂಜೂರುಗೊಳಿಸಿ, ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ವಿದ್ಯುಚ್ಛಕ್ತಿ ಬಳಕೆದಾರರು ಒತ್ತಾಯಿಸಿದರು.

ಶುಕ್ರವಾರ ಇಲ್ಲಿ ವಿದ್ಯುಚ್ಛಕ್ತಿ ಲೋಕಪಾಲ ಎಸ್.ಎಸ್.ಪಟ್ಟಣಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಗ್ರಾಹಕರ ಕುಂದುಕೊರತೆ ನಿವಾರಣಾ ಸಭೆಯಲ್ಲಿ ಗ್ರಾಹಕರು ವಿವಿಧ ಬೇಡಿಕೆಗಳನ್ನು ಇಟ್ಟರು.

ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಜಿ.ಜಿ.ಹೆಗಡೆ ಕಡೆಕೋಡಿ ಮಾತನಾಡಿ, ‘ಉತ್ತರ ಕನ್ನಡ ಜಿಲ್ಲೆಗೆ ನಿಯಮಿತ ವಿದ್ಯುತ್ ಕಡಿತದಿಂದ ವಿನಾಯಿತಿ ಇದೆ. ಆದರೆ, ಪ್ರತಿದಿನವೂ ವಿದ್ಯುತ್ ಕಡಿತವಾಗುವ ಸಮಸ್ಯೆ ನಿಂತಿಲ್ಲ. ರೈತರಿಗೆ ಏಳು ತಾಸು ನಿರಂತರ ವಿದ್ಯುತ್ ಪೂರೈಸಬೇಕು. ತಾಲ್ಲೂಕಿನ ಗ್ರಾಮೀಣ ಭಾಗದ ರೈತರಿಗೆ ಮೂರು ತಾಸು ಸಹ ನಿರಂತರ ವಿದ್ಯುತ್ ಸಿಗುತ್ತಿಲ್ಲ. ಗ್ರಾಹಕ ಕುಂದುಕೊರತೆ ನಿವಾರಣಾ ಸಮಿತಿಗೆ ರಾಜಕಿಯೇತರ ವ್ಯಕ್ತಿಗಳ ನೇಮಕವಾಗಬೇಕು ಎಂಬ ನಿಯಮವಿದ್ದರೂ, ರಾಜಕೀಯ ವ್ಯಕ್ತಿಗಳನ್ನು ನೇಮಿಸುತ್ತಿರುವುದು ಬೇಸರ ಮೂಡಿಸಿದೆ’ ಎಂದರು.

ವಕೀಲ ಗಣಪತಿ ಬಿಸಲಕೊಪ್ಪ ಮಾತನಾಡಿ, ‘ಎಸಳೆ ಗ್ರಿಡ್‌ ಮೇಲೆ ಆಗುತ್ತಿರುವ ಒತ್ತಡದಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದೆ. ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಸೂಚಿಸಿ 2016ರಲ್ಲಿ ಪ್ರಸ್ತಾವ ಸಿದ್ಧಪಡಿಸಲಾಗಿತ್ತು. ಈ ಪ್ರಸ್ತಾವ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ತಲುಪಿದೆ. ಆದರೆ, ಮಂಜೂರು ಆಗಿಲ್ಲ’ ಎಂದರು. ‘ಮುಂಗಡ ವಿದ್ಯುತ್ ಬಿಲ್ ಪಾವತಿಸಿದವರಿಗೆ ರಿಯಾಯಿತಿ ನೀಡಬೇಕು’ ಎಂದು ಡಾ.ರವಿಕಿರಣ ಪಟವರ್ಧನ ಒತ್ತಾಯಿಸಿದರು.

ಗ್ರಾಹಕರ ಅಹವಾಲು ಆಲಿಸಿದ ಎಸ್.ಎಸ್.ಪಟ್ಟಣಶೆಟ್ಟಿ ಅವರು, ‘ಮಲೆನಾಡಿನ ಭಾಗದಲ್ಲಿ ವಿದ್ಯುತ್ ಪೂರೈಕೆ ಸಂಬಂಧ ಹಲವಾರು ಸಮಸ್ಯೆಗಳಿವೆ. ದಾಖಲೆ ಸಹಿತ ಅರ್ಜಿ ಸಲ್ಲಿಸಿದರೆ, ಎರಡು ತಿಂಗಳ ಒಳಗೆ ಕ್ರಮಕೈಗೊಳ್ಳಲಾಗುವುದು. ಗ್ರಾಹಕರ ಕುಂದುಕೊರತೆ ಸಭೆಯನ್ನು ವ್ಯವಸ್ಥಿತವಾಗಿ ನಡೆಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

ವಿದ್ಯುತ್ ಗ್ರಾಹಕರ ಕುಂದುಕೊರತೆ ನಿವಾರಿಸಲು ರಚಿಸಲಾದ ವಿದ್ಯುತ್ ನಿಯಂತ್ರಣ ಆಯೋಗದ ಬಗ್ಗೆ ಗ್ರಾಹಕರು ಅರಿತುಕೊಳ್ಳಬೇಕು. ಗ್ರಾಹಕರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ 2004ರಲ್ಲಿ ಗ್ರಾಹಕರ ಕುಂದುಕೊರತೆಗಳ ನಿವಾರಣಾ ವೇದಿಕೆ ಹಾಗೂ ವಿದ್ಯುಚ್ಛಕ್ತಿ ಲೋಕಪಾಲ ಅಸ್ತಿತ್ವಕ್ಕೆ ಬಂದಿದೆ. ಆದರೆ ಗ್ರಾಹಕರಿಗೆ ಇದರ ಬಗ್ಗೆ ಮಾಹಿತಿ ಕೊರತೆಯಿದೆ. ಇದರ ಸದುಪಯೋಗ ಗ್ರಾಹಕರು ಪಡೆಯಬೇಕು ಎಂದರು.

ವಿದ್ಯುತ್ ಗ್ರಾಹಕರ ಕುಂದುಕೊರತೆಗಳ ನಿವಾರಣಾ ಸಮಿತಿ ಜಿಲ್ಲಾ ಘಟಕದ ಸದಸ್ಯ ಸಿ.ಎಫ್.ಈರೇಶ, ಹುಬ್ಬಳ್ಳಿ ವಲಯದ ಎಂಜಿನಿಯರ್ ಮನೋಹರ ಬೇವಿನಮರದ್ , ಹೆಸ್ಕಾಂ ವೃತ್ತದ ಅಧೀಕ್ಷಕ ಎಂಜಿನಿಯರ್ ಒ.ಎಸ್.ಶಶಿಧರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT