ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮವಸ್ತ್ರ ವಿವಾದದ ಹಿಂದೆ ಹಿಡನ್ ಅಜೆಂಡಾ: ಸಿ.ಟಿ.ರವಿ

Last Updated 6 ಫೆಬ್ರುವರಿ 2022, 11:43 IST
ಅಕ್ಷರ ಗಾತ್ರ

ನಿವಳಿ (ಕಾರವಾರ): ‘ಶಾಲಾ ಕಾಲೇಜುಗಳಿಗೆ ಇಷ್ಟು ಸಮಯ ಸಮವಸ್ತ್ರ ಧರಿಸಿ ಹೋಗುತ್ತಿರಲಿಲ್ವಾ? ಈಗ ವಿರೋಧ ವ್ಯಕ್ತಪಡಿಸುವುದರ ಹಿಂದೆ ದೀರ್ಘಾವಧಿಯ, ಪ್ರತ್ಯೇಕತೆಯ ಹಿಡನ್ ಅಜೆಂಡಾ ಇದೆ. ತುಕ್ಡೇ ಗ್ಯಾಂಗ್‌ನವರೆಲ್ಲ ಕಾಂಗ್ರೆಸ್‌ಗೆ ಸೇರಿಕೊಂಡಿದ್ದಾರೆ. ಅವರ ದುರುದ್ದೇಶಗಳನ್ನು ಅನುಷ್ಠಾನಗೊಳಿಸಲು ಶಾಲೆಗಳನ್ನೂ ಬಳಸಿಕೊಳ್ಳುತ್ತಿದ್ದಾರೆ’ ಎಂದು ಬಿ.ಜೆ.ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ದೂರಿದರು.

ತಾಲ್ಲೂಕಿನ ದೇವಳಮಕ್ಕಿ ಗ್ರಾಮದ ನಿವಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಮತೀಯವಾದವನ್ನು ಎಬ್ಬಿಸಿ ದೇಶವನ್ನು ಮತ್ತಷ್ಟು ವಿಭಜಿಸುವ ಸಂಚಿನ ಬೀಜವನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಅವಕಾಶ ಕೊಡುವುದಿಲ್ಲ. ಶಾಲೆಗಳಲ್ಲಿ ಮತೀಯವಾದ, ಪ್ರತ್ಯೇಕತಾವಾದವನ್ನು ಬೆಳೆಸುವುದು ಸಮಾಜದ, ಶೈಕ್ಷಣಿಕ ದೃಷ್ಟಿಯಿಂದ ಒಳ್ಳೆಯದಲ್ಲ. ಇದನ್ನು ಕಾಂಗ್ರೆಸ್ ಬಿಡಬೇಕು. ಇದೇ ರೀತಿಯ ಓಲೈಕೆಯಿಂದ ದೇಶ ತುಂಡಾಯಿತು. ಅದಕ್ಕೆ ಜಿನ್ನಾ ಎಷ್ಟು ಕಾರಣವೋ ಕಾಂಗ್ರೆಸ್ ಅಷ್ಟೇ ಕಾರಣ’ ಎಂದು ಹೇಳಿದರು.

‘ನೆಲದ ಸಂಸ್ಕೃತಿ ಮತ್ತು ಮತೀಯವಾದಕ್ಕೂ ವ್ಯತ್ಯಾಸವಿದೆ. ಸಿದ್ದರಾಮಯ್ಯನವರಂಥ ಹಿರಿಯ ನಾಯಕರು ಜಿನ್ನಾ ಭೂತ ಬಂದ ಹಾಗೆ ಯಾಕೆ ಆಡ್ತಾರೆ? ಮತೀಯ ವೋಟ್ ಬ್ಯಾಂಕ್ ಕ್ರೋಡೀಕರಿಸುವುದೇ ಅದರ ಹಿಂದಿರುವ ಏಕೈಕ ದುರುದ್ದೇಶವಾಗಿದೆ. ಮತೀಯವಾದದ ಭೂತ ಹೊಕ್ಕಂತೆ ಆಡಿದ್ರೆ ಮತಗಳು ಸಿಗುತ್ತವೆ ಎಂಬ ದುರಾಸೆಗೆ ನೀವು ತಾಲಿಬಾನ್ ವಾದವನ್ನು ಕಾಲೇಜಿಗೂ ತಂದಿದ್ದೀರಿ’ ಎಂದು ಹರಿಹಾಯ್ದರು.

‘2014ರಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಸುತ್ತೋಲೆ ಕಳುಹಿಸಲಾಗಿತ್ತು. 1983ರ ಶಿಕ್ಷಣ ಕಾಯ್ದೆ, ಹಲವು ನ್ಯಾಯಾಲಯಗಳ ಆದೇಶಗಳನ್ನು ಉಲ್ಲೇಖಿಸಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಇರಬೇಕು ಸೂಚಿಸಲಾಗಿತ್ತು. ಅದು ಗೊತ್ತಿದ್ದರೂ ಹೊಸದಾಗಿ ವಿವಾದ ಸೃಷ್ಟಿಸುತ್ತಿರುವ ಹಿನ್ನೆಲೆ ಏನು’ ಎಂದು ಪ್ರಶ್ನಿಸಿದರು.

‘ಫ್ರಾನ್ಸ್, ನೆದರ್ಲೆಂಡ್, ಬೆಲ್ಜಿಯಂ, ಚೀನಾ ಮುಂತಾದ 11 ದೇಶಗಳು ಏನು ಮಾಡಿವೆ ಎಂದು ಯೋಚಿಸಬೇಕಲ್ಲ. ಚೀನಾ ಬುರ್ಖಾ ಮಾತ್ರವಲ್ಲ ಮದರಸಾಗಳನ್ನೂ ನಿಷೇಧಿಸಿದೆ. ದೇಶಕ್ಕೆ ಅಪಾಯಕಾರಿ ಎಂದಾದರೆ ಮದರಸಾಗಳನ್ನೂ ನಿಷೇಧಿಸಬೇಕಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT