ಸೋಮವಾರ, ಜನವರಿ 24, 2022
29 °C
ಬನವಾಸಿ ಹೋಬಳಿಯ ಸಾವಿರ ಹೆಕ್ಟೇರ್ ಅಡಿಕೆ ಬೆಳೆ ನಾಶ

ಶಿರಸಿ | ಹಿಡಿ ಮುಂಡಿಗೆ ರೋಗ; ರೈತ ಹೈರಾಣ

ಗಣಪತಿ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ತಾಲ್ಲೂಕಿನ ಪೂರ್ವಭಾಗ ಬನವಾಸಿಯ ರೈತರು ಆಸಕ್ತಿಯಿಂದ ಬೆಳೆದಿದ್ದ ಅಡಿಕೆ ಬೆಳೆಗೆ ಹಿಡಿಮುಂಡಿಗೆ ರೋಗ ಆವರಿಸಿಕೊಳ್ಳುತ್ತಿದ್ದು ಇದು ರೈತರನ್ನು ಹೈರಾಣಾಗಿಸಿದೆ.

ಅನಾನಸ್, ಶುಂಠಿ, ಭತ್ತ ಬೆಳೆಗೆ ಹೆಸರುವಾಸಿಯಾಗಿದ್ದ ಬನವಾಸಿ ಹೋಬಳಿಯ ಹಲವು ರೈತರು ಎರಡು ದಶಕಗಳಿಂದ ಅಡಿಕೆ ಬೆಳೆಯತ್ತ ಆಕರ್ಷಿತರಾಗಿದ್ದಾರೆ. ಪರಿಣಾಮ ಗದ್ದೆಗಳು ಹಂತ ಹಂತವಾಗಿ ಅಡಿಕೆ ತೋಟಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಹೀಗೆ ತಲೆ ಎತ್ತಿದ ಅಡಿಕೆ ಗಿಡಗಳು ಒಂದೂವರೆ ದಶಕದ ಆಯಸ್ಸು ಮುಗಿಸಿ ಸಾಯುತ್ತಿವೆ!

ಎತ್ತರಕ್ಕೆ ಬೆಳೆದ ಮರ ಫಸಲು ನೀಡಲು ಆರಂಭಿಸಿದ ನಾಲ್ಕೈದು ವರ್ಷಕ್ಕೆ ಸಂಪೂರ್ಣ ಸೊರಗುತ್ತಿದೆ. ಒಂದೆರಡು ವರ್ಷಗಳ ಬಳಿಕ ಅದು ಒಣಗಿ ಸಾಯುತ್ತಿದೆ. ಲಕ್ಷಾಂತರ ಮೊತ್ತ ವ್ಯಯಿಸಿ ತೋಟ ನಿರ್ಮಿಸಿದ ರೈತರು ಇದರಿಂದ ಕಂಗಾಲಾಗುತ್ತಿದ್ದಾರೆ.

ಕಂಡ್ರಾಜಿ, ಅಂಡಗಿ, ಕಲಕರಡಿ, ಬೆಂಗಳೆ, ಮಧುರವಳ್ಳಿ, ಗುಡ್ನಾಪುರ ಸೇರಿದಂತೆ ಹಲವೆಡೆ ಈ ಸಮಸ್ಯೆ ಕಂಡುಬರುತ್ತಿದೆ. ಉತ್ತಮವಾಗಿ ಬೆಳವಣಿಗೆ ಕಂಡಿದ್ದ ಅಡಿಕೆ ಮರ ಏಕಾಏಕಿ ಸೊರಗಿ ಸಾವನ್ನಪ್ಪುತ್ತಿರುವುದು ‘ಹಿಡಿಮುಂಡಿಗೆ’ ಕಾರಣಕ್ಕೆ ಎಂಬುದು ಈ ಭಾಗದ ರೈತರ ಅನಿಸಿಕೆ.

‘ಹೆಚ್ಚು ಆದಾಯ, ಸುಲಭ ನಿರ್ವಹಣೆ ಕಾರಣಕ್ಕೆ ಅನಾನಸ್, ಶುಂಠಿ ಬೆಳೆಗಳನ್ನು ಬಿಟ್ಟು ಅಡಿಕೆ ಬೆಳೆಯಲು ಬನವಾಸಿ ಭಾಗದ ರೈತರು ಮುಂದಾಗಿದ್ದರು. ಆರಂಭದಲ್ಲಿ ಆದಾಯ ಕಡಿಮೆ ಇದ್ದರೂ ಐದಾರು ವರ್ಷದ ಬಳಿಕ ಉತ್ತಮ ಗಳಿಕೆ ಕಂಡಿದ್ದೇವೆ. ನಿರ್ವಹಣೆಯಲ್ಲಿ ಲೋಪವಾಗಿಲ್ಲದಿದ್ದರೂ ಪ್ರತಿ ತೊಟದಲ್ಲಿ ಹತ್ತಿಪ್ಪತ್ತು ಮರಗಳು ಸಾಯಲಾರಂಭಿಸಿದವು. ಈ ಪ್ರಮಾಣ ಈ ಭಾಗದ ಬಹುತೇಕ ಗ್ರಾಮಗಳಲ್ಲಿ ಈಚಿನ ವರ್ಷಗಳಲ್ಲಿ ಹೆಚ್ಚಿತ್ತು’ ಎನ್ನುತ್ತಾರೆ ಕಲಕರಡಿ ಗ್ರಾಮದ ರೈತ ಸಂತೋಷ ನಾಯ್ಕ.

‘ತೋಟಗಾರಿಕಾ ತಜ್ಞರ ಸಲಹೆ ಪಾಲಿಸಿದ್ದರೂ ರೋಗ ಹತೋಟಿಗೆ ತರಲು ಆಗುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಅಡಿಕೆ ಮರಗಳು ಸಾಯುವ ಪ್ರಮಾಣ ಹೆಚ್ಚುತ್ತಲೇ ಇದೆ’ ಎಂದು ಬೇಸರ ತೋಡಿಕೊಂಡರು.

‘ಬನವಾಸಿ ಭಾಗದಲ್ಲಿ ಗದ್ದೆ ಭೂಮಿಯಲ್ಲಿ ತೋಟ ಮಾಡಿರುವ ಕಾರಣ ಹಲವು ವರ್ಷಗಳ ನಂತರ ಮರಗಳು ಸಾಯುವ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದು ಹಿಡಿಮುಂಡಿಗೆ ರೋಗದ ಮಾದರಿಯೇ ಹೊರತು ಅದೇ ರೋಗ ಎಂಬುದು ಖಚಿತವಲ್ಲ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಗಣೇಶ್ ಹೆಗಡೆ.

‘ಗದ್ದೆ ಜಾಗದಲ್ಲಿ ಆರು ಅಡಿಗಿಂತ ಹೆಚ್ಚು ಆಳಕ್ಕೆ ಗಟ್ಟಿ ಪದರ ಲಭಿಸುತ್ತದೆ. ಅಡಿಕೆ ಮರದ ಬೇರುಗಳು ಆಳಕ್ಕೆ ಇಳಿಯಲಾಗದೆ ಸಮಸ್ಯೆ ಉಂಟಾಗುತ್ತದೆ. ಸತ್ತ ಮರದ ಪಕ್ಕ ಹೊಸದಾಗಿ ಗಿಡ ನೆಟ್ಟು ಬೆಳೆಸಿದರೆ ತೋಟ ಉಳಿಸಿಕೊಳ್ಳಬಹುದು’ ಎಂದು ಸಲಹೆ ನೀಡಿದರು.

ಬಸಿಗಾಲುವೆಯಿಂದ ಪರಿಹಾರ: ‘ಅಡಿಕೆ ಮರಗಳ ಬೇರುಗಳ ಪೋಷಕಾಂಶ ನಿರ್ವಹಣೆ, ಉಸಿರಾಟಕ್ಕೆ ಅನುಕೂಲವಿದ್ದರೆ ಮರಗಳು ಉತ್ತಮ ಬೆಳವಣಿಗೆ ಕಾಣುತ್ತವೆ. ಇದಕ್ಕೆ ಅಂತರ್ಗತ (ಬಸಿಗಾಲುವೆ) ಕಾಲುವೆ ನಿರ್ಮಿಸುವುದು ಸೂಕ್ತ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು.

‘ನರೇಗಾ ಯೋಜನೆ ಅಡಿ ಪ್ರತಿ ಎಕರೆಗೆ ₹1.5 ಲಕ್ಷ ಅನುದಾನ ನೀಡಲಾಗುತ್ತಿದೆ. ಬನವಾಸಿ ಭಾಗದಲ್ಲಿ ರೈತರು ಎದುರಿಸುತ್ತಿರುವ ಹಿಡಿಮುಂಡಿಗೆ ರೋಗದ ಮಾದರಿಯ ಸಮಸ್ಯೆ ನಿಯಂತ್ರಣಕ್ಕೆ ಇಂತಹ ಕಾಲುವೆ ಪರಿಹಾರ ಒದಗಿಸಲಿದೆ. ತಾಲ್ಲೂಕಿನ ಪಶ್ಚಿಮ ಭಾಗದ ಹತ್ತಕ್ಕೂ ಹೆಚ್ಚು ರೈತರು ಈ ಯೋಜನೆಯ ಲಾಭ ಪಡೆದಿದ್ದು, ಪೂರ್ವಭಾಗದ ರೈತರೂ ಇದರ ಪ್ರಯೋಜನ ಪಡೆಯಬಹುದು’ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಗಣೇಶ್ ಹೆಗಡೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು