ಗುರುವಾರ , ಸೆಪ್ಟೆಂಬರ್ 19, 2019
21 °C
ಕಲಗದ್ದೆಯಲ್ಲಿ ಜೇನು ಹಬ್ಬ ಆಚರಣೆ

ಮನುಕುಲ ರಕ್ಷಣೆಯಲ್ಲಿ ಜೇನಿನ ಪಾತ್ರ ಮಹತ್ವದ್ದು: ಆರ್.ಪಿ.ಹೆಗಡೆ ಗೋರ್ನಮನೆ

Published:
Updated:
Prajavani

ಶಿರಸಿ: ‘ಮನುಕುಲದ ರಕ್ಷಣೆಯಲ್ಲಿ ಜೇನು ಹುಳುಗಳ ಪಾತ್ರ ಮಹತ್ವದ್ದಾಗಿರುವುದರಿಂದ ಅವುಗಳ ಸಂರಕ್ಷಣೆ ನಮ್ಮ ಆದ್ಯತೆಯಾಗಬೇಕು’ ಎಂದು ಜೇನು ಕೃಷಿಕ ಆರ್.ಪಿ.ಹೆಗಡೆ ಗೋರ್ನಮನೆ ಹೇಳಿದರು.

ತಾಲ್ಲೂಕಿನ ಅಂಬಳಿಕೆ ಕಲಗದ್ದೆಯ ರಾಘವೇಂದ್ರ ಹೆಗಡೆ ಅವರ ಮನೆಯಲ್ಲಿ ಶನಿವಾರ ಆಯೋಜಿಸಿದ್ದ ಜೇನು ಹಬ್ಬದಲ್ಲಿ ಅವರು ಮಾತನಾಡಿದರು. ಜೇನು ಸಾಕಾಣಿಕೆಗೆ ಶಾಪವಾಗಿರುವ ಥೈಸ್ಯಾಕ್ ಬ್ರೊಡ್ ಕಾಡಿನ ಕೆಲವು ಜೇನುಗೂಡುಗಳಲ್ಲಿ ಕಂಡುಬಂದಿದೆ. ಈ ರೋಗದ ಲಕ್ಷಣವನ್ನು ತಿಳಿದು, ನಿಯಂತ್ರಣ ಕ್ರಮದ ಬಗ್ಗೆ ಎಚ್ಚರಿಕೆವಹಿಸಬೇಕಾಗಿದೆ ಎಂದರು.

ಜೇನು ಕುಟುಂಬದಲ್ಲಿರುವ ರಾಣಿ, ಕೆಲಸಗಾರ ನೊಣಗಳು ಮತ್ತು ಗಂಡು ನೊಣಗಳ ಮಹತ್ವ ಮತ್ತು ಅವುಗಳ ಕಾರ್ಯವೈಖರಿಯ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಲಾಯಿತು. ತಾಜಾ ಜೇನು ತುಪ್ಪವನ್ನು ಸವಿದ ನಂತರ ಜೇನು ಹುಳುಗಳ ವಿಸ್ಮಯ ಲೋಕದ ಕುರಿತು ಸಂವಾದ ನಡೆಯಿತು. ಜೇನುತುಪ್ಪದ ಬಣ್ಣ, ಅವುಗಳ ದೀರ್ಘ ಬಾಳಿಕೆಯ ಬಗ್ಗೆ ಸೇರಿದ್ದ ಜನರು ತಿಳಿದುಕೊಂಡರು.

ಕೃಷಿ ಬೆಳೆಗಳಿಗೆ ರಾಸಾಯನಿಕ ಬಳಕೆಯಿಂದ ಜೇನು ಸಂತತಿಗೆ ಉಂಟಾಗಿರುವ ಗಂಡಾಂತರವನ್ನು ಯಲ್ಲಾಪುರದ ಕೃಷಿಕ ಜಾಜಿಮನೆ ತಿಮ್ಮಪ್ಪ ಹೆಗಡೆ ತಿಳಿಸಿದರು. ಬಯಲು ಸೀಮೆಗೆ ಸೀಮಿತವಾಗಿದ್ದ ಕೀಟನಾಶಕವನ್ನು ಈಗ ಅಡಿಕೆಗೆ ಬಳಕೆ ಮಾಡಲಾಗುತ್ತಿದೆ. ಅಡಿಕೆ ಮುಗುಡು ಉದುರುವುದನ್ನು ತಡೆಯಲು ಹೊಡೆಯುವ ಕೀಟನಾಶಕದಿಂದ ತೋಟದಲ್ಲಿದ್ದ ಜೇನು ಸಂತತಿ ನಾಶವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಕೃತಿ ಸಂಸ್ಥೆಯ ಪಾಂಡುರಂಗ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಬ್ಬದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ತನ್ಮಯ ಹೆಗಡೆ, ‘ನಾನು ಜೇನು ಸಾಕಣೆ ಮಾಡುತ್ತೇನೆ’ ಎಂದು ಉತ್ಸಾಹದಿಂದ ಹೇಳಿದನು. ನಾಗರಾಜ ಹೆಗಡೆ, ಶಶಿಮನೆ ದಿನೇಶ ಹೆಗಡೆ, ಸುಬ್ಬಣ್ಣ, ಸೀತಾರಾಮ ಹೆಗಡೆ, ವಿನ್ಯಾಸಕುಮಾರ್ ಭಾಗವಹಿಸಿದ್ದರು.

Post Comments (+)