ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ತೋಟಗಾರಿಕಾ ಬೆಳೆ ಸಂರಕ್ಷಣೆಗೆ ಸಲಹೆ

ಹಾರ್ಟಿ ಕ್ಲಿನಿಕ್‌ನಿಂದ ಮಾಹಿತಿ
Last Updated 10 ಜುಲೈ 2020, 14:53 IST
ಅಕ್ಷರ ಗಾತ್ರ

ಶಿರಸಿ: ಜಿಲ್ಲೆಯ ಕರಾವಳಿ, ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಈ ಮಳೆಯಿಂದ ಬೆಳೆಗೆ ರೋಗ ಬರಲು ಪೂರಕ ಹವಾಮಾನ ಸೃಷ್ಟಿಯಾಗಿದೆ. ರೈತರು ಅಗತ್ಯ ಸಂರಕ್ಷಣಾ ಕ್ರಮ ಕೈಗೊಳ್ಳಬೇಕು ಎಂದು ತೋಟಗಾರಿಕಾ ಇಲಾಖೆಯ ಹಾರ್ಟಿ ಕ್ಲಿನಿಕ್ ಸಲಹೆ ಮಾಡಿದೆ.

ಈ ವರ್ಷ ಬೇಸಿಗೆಯಲ್ಲಿ ಹದವಾಗಿ ಮಳೆಯಾಗಿದ್ದರಿಂದ, ಮಳೆಗಾಲದಲ್ಲಿ ಬರುವ ರೋಗಾಣುಗಳು ಬೇಗ ಕ್ರಿಯಾಶೀಲವಾಗುವ ಸಾಧ್ಯತೆಯಿದೆ. ಈಗ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ಅಡಿಕೆ, ಕಾಳುಮೆಣಸು, ಶುಂಠಿ ಮುಂತಾದ ಬೆಳೆಗಳ ಕೊಳೆರೋಗಕ್ಕೆ ಪೂರಕ ವಾತಾವರಣ ಉಂಟಾಗಿದ್ದು, ರೋಗ ಉಲ್ಭಣವಾಗಬಹುದು. ಕಾಳುಮೆಣಸಿನ ಎಲೆ ಕೊಳೆಯುವ ರೋಗವು ಈಗಾಗಲೇ ಹಲವು ಕಡೆ ಪ್ರಾರಂಭವಾಗಿದೆ. ಅಡಿಕೆ ಬೇರುಹುಳ ನಿಯಂತ್ರಿಸಲು ಇದು ಸಕಾಲವಾಗಿದೆ. ಮಳೆಗಾಲದಲ್ಲಿ ಬೆಳೆಗಳ ಸಂರಕ್ಷಣೆಯ ದೃಷ್ಟಿಯಿಂದ ಅವಶ್ಯಕ ಕ್ರಮಗಳನ್ನು ಕೈಗೊಳ್ಳುವುದು ಮಹತ್ವದ್ದಾಗಿದೆ. ರೋಗ-ಕೀಟಗಳ ಮುಂಜಾಗ್ರತಾ ನಿಯಂತ್ರಣ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹಾರ್ಟಿ ಕ್ಲಿನಿಕ್ ವಿಷಯ ತಜ್ಞ ವಿ.ಎಂ.ಹೆಗಡೆ ಹೇಳಿದ್ದಾರೆ.

ರಕ್ಷಣಾ ತಂತ್ರಗಳು:ಅಡಿಕೆ ಕೊಳೆ ರೋಗ ಮತ್ತು ಕೋಕೊಕಾಯಿ ಕೊಳೆ ರೋಗ ನಿಯಂತ್ರಣಕ್ಕೆ ಮುಂಜಾಗ್ರತೆಯಾಗಿ ಶೇ 1ರ ಬೋರ್ಡೊ ದ್ರಾವಣವನ್ನು ಸಿಂಪಡಿಸಬೇಕು. ಎಲೆಚುಕ್ಕೆ ಸಮಸ್ಯೆ ಇರುವ ಅಡಿಕೆ ಮರದ ಎಲೆಗಳಿಗೂ ಬೋರ್ಡೊ ದ್ರಾವಣವನ್ನು ಸಿಂಪಡಿಸಬೇಕು. ಅಡಿಕೆಯಲ್ಲಿ ಬೇರು ಹುಳ ನಿಯಂತ್ರಣಕ್ಕೆ ಕ್ಲೋರೋಫೈರಿಫಾಸ್ ಕೀಟನಾಶಕವನ್ನು 4 ಮಿಲಿ ಲೀಟರ್, ಪ್ರತಿ ಲೀಟರ್ ನೀರಿಗೆ ಬೆರೆಸಿದ ದ್ರಾವಣವನ್ನು ಪ್ರತಿ ಮರದ ಬುಡದ ಸುತ್ತಲೂ ಮೂರು ಲೀಟರ್ ದ್ರಾವಣ ಹಾಕಬೇಕು ಅಥವಾ ಜೈವಿಕ ಬೇರು ಹುಳನಾಶಕ(ಸೋಲ್ಜರ್)ವನ್ನು 5 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿದ ದ್ರಾವಣವನ್ನು ಪ್ರತಿ ಮರದ ಬುಡದ ಸುತ್ತಲೂ ಒಂದು ಲೀಟರ್ ದ್ರಾವಣ ಹಾಕಬೇಕು.

ಕಾಳುಮೆಣಸಿನ ಬಳ್ಳಿಯ ಸೊರಗು ರೋಗ- ಬಳ್ಳಿಯ ಎಲೆ, ಚಿಗುರು ಕೊಳೆ ನಿಯಂತ್ರಣಕ್ಕೆ ಮುಂಜಾಗ್ರತೆಯಾಗಿ ಶೇ1ರ ಬೋರ್ಡೊ ದ್ರಾವಣವನ್ನು ಸಿಂಪಡಿಸಬೇಕು, ಬುಡಕೊಳೆ ನಿಯಂತ್ರಣಕ್ಕಾಗಿ ಕಾಪರ್ ಆಕ್ಸಿಕ್ಲೋರೈಡ್ ಶೀಲೀಂದ್ರ ನಾಶಕವನ್ನು 5 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ, ಗಿಡದ ಬುಡಕ್ಕೆ ಹಾಕಬೇಕು. ರೋಗ ಪ್ರಾರಂಭವಾಗಿದ್ದಲ್ಲಿ ರೋಗಪೀಡಿತ ಬಳ್ಳಿಗಳಿಗೆ ಮಾತ್ರ ಮೆಟಾಲಾಕ್ಸಿಲ್ ಎಂ.ಜಡ್. 2ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿದ ದ್ರಾವಣ ಸಿಂಪಡಿಸಬೇಕು. ನಂತರ ಶೇ1ರ ಬೋರ್ಡೊ ದ್ರಾವಣವನ್ನು ಸಿಂಪಡಿಸಬೇಕು.
ಕಾಳುಮೆಣಸಿನ ನೆಲದ ಮೇಲೆ ಹಬ್ಬಿರುವ ಕುಡಿಗಳನ್ನು ಬಳ್ಳಿಯ ಬುಡದಿಂದ ಒಂದು ಗಣ್ಣು ಬಿಟ್ಟು ಕತ್ತರಿಸಿ, ಆ ಭಾಗಕ್ಕೆ ಬೋರ್ಡೊ ಪೇಸ್ಟ್‌ ಹಚ್ಚಬೇಕು ಮತ್ತು ಕತ್ತರಿಸಿ ತೆಗೆದ ಕುಡಿ ಮತ್ತು ಎಲೆಗಳನ್ನು ತೋಟದಿಂದ ಹೊರ ಹಾಕಬೇಕು.

ಶುಂಠಿಯ ಗಡ್ಡೆ ಕೊಳೆ ನಿಯಂತ್ರಣಕ್ಕಾಗಿ ಕಾಪರ್ ಆಕ್ಸಿಕ್ಲೋರೈಡ್ ಶೀಲೀಂದ್ರ ನಾಶಕವನ್ನು 3 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಗಿಡದ ಬುಡಕ್ಕೆ ಹಾಕಬೇಕು. ರೋಗ ಪ್ರಾರಂಭವಾಗಿದ್ದಲ್ಲಿ ಮೆಟಾಲಾಕ್ಸಿಲ್ ಎಂ.ಜಡ್. 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿದ ದ್ರಾವಣ ಹಾಕಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT