ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕೋಲಾ: ದುರಸ್ತಿಗೆ ಕಾಯುತ್ತಿದೆ ಹೊಸಕಂಬಿ ಸೇತುವೆ

ದೊಡ್ಡ ಹೊಂಡಗಳಿಂದಾಗಿ ವಾಹನ ಸವಾರರಿಗೆ ಆತಂಕ: ಸರಿಪಡಿಸಲು ಆಗ್ರಹ
Last Updated 2 ಜುಲೈ 2021, 19:30 IST
ಅಕ್ಷರ ಗಾತ್ರ

ಅಂಕೋಲಾ: ತಾಲ್ಲೂಕಿನ ಹೊಸಕಂಬಿ ಸೇತುವೆಯ ಮೇಲೆ ಬೃಹತ್ ಗಾತ್ರದ ಹೊಂಡಗಳಾಗಿವೆ. ಇಲ್ಲಿ ಸಂಚರಿಸುವ ವಾಹನ ಸವಾರರು ಆತಂಕದಲ್ಲೇ ಸಾಗುವಂತಾಗಿದೆ.

ತಾಲ್ಲೂಕಿನ ಹೆಬ್ಬುಳ‍– ಮಾದನಗೇರಿಯ ರಾಜ್ಯ ಹೆದ್ದಾರಿಗೆ ಗಂಗಾವಳಿ ನದಿ ಮೇಲಿನ ಹೊಸಕಂಬಿ ಸೇತುವೆ ಕೊಂಡಿಯಾಗಿದೆ. ಇದು 1983ರಲ್ಲಿ ನಿರ್ಮಾಣವಾಗಿದ್ದು, ತಾಲ್ಲೂಕಿನ ಉದ್ದದ ಮತ್ತು ಹಳೆಯ ಸೇತುವೆಯಾಗಿದೆ. ಹುಬ್ಬಳ್ಳಿ ಮೂಲಕ ಗೋಕರ್ಣ, ಮಂಗಳೂರು, ಉಡುಪಿಗೆ ತೆರಳುವ ಪ್ರವಾಸಿಗರು ಇದೇ ಮಾರ್ಗದ ಮೂಲಕ ಸಾಗುತ್ತಾರೆ. ಇದೀಗ ಸೇತುವೆಯ ಮೇಲೆ ಬೃಹತ್ ಹೊಂಡಗಳಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಸರಿಪಡಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಸೇತುವೆಯಿಂದ 200 ಮೀಟರ್ ದೂರದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲು ₹ 3 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಇದೇ ಕಾಮಗಾರಿಯ ಮುಂದುವರಿದ ಭಾಗವಾಗಿ, ಸೇತುವೆ ಮೇಲಿನ ಹೊಂಡಗಳನ್ನು ಸರಿಪಡಿಸುವಂತೆ ಗುತ್ತಿಗೆದಾರರಿಗೆ ಆದೇಶ ನೀಡಲಾಗಿತ್ತು. ಕಾಂಕ್ರೀಟ್ ರಸ್ತೆಯ ಅಪೂರ್ಣ ಕಾಮಗಾರಿಯಿಂದಾಗಿ ಸೇತುವೆ ಸಮೀಪದಲ್ಲಿಯೇ ಕೇಂದ್ರ ಆಯುಷ್ಯ ಇಲಾಖೆ ಸಚಿವರಾಗಿದ್ದ ಶ್ರೀಪಾದ ನಾಯ್ಕ್ ಅವರ ಕಾರು ಅಪಘಾತಕ್ಕೀಡಾಗಿತ್ತು. ಅವರ ಪತ್ನಿ ಮತ್ತು ಸಹಾಯಕರೊಬ್ಬರು ಮೃತಪಟ್ಟಿದ್ದರು. ನಂತರ ರಸ್ತೆಯ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಆದರೆ, ಸೇತುವೆಯ ಹೊಂಡಗಳು ಹಾಗೇ ಉಳಿದಿವೆ.

‘ಮಳೆಗಾಲದ ನಂತರ ಕಾಮಗಾರಿ’: ‘ದ್ವಿಚಕ್ರ ವಾಹನ ಸವಾರರು ಭಯದಿಂದಲೇ ಸೇತುವೆ ಮೇಲೆ ಸಂಚರಿಸುವಂತಾಗಿದೆ. ವಾಹನಗಳ ಚಕ್ರ ಸ್ಫೋಟಗೊಂಡರೆ ಹಳ್ಳಕ್ಕೆ ಬೀಳುವ ಸಾಧ್ಯತೆಗಳಿವೆ. ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಮಳೆಗಾಲ ಆರಂಭವಾಗಿದ್ದು, ಶೀಘ್ರವಾಗಿ ದುರಸ್ತಿ ಮಾಡಬೇಕು’ ಎಂದು ಬಿಜೆಪಿ ಮಂಡಲ ಉಪಾಧ್ಯಕ್ಷ ರಾಮಚಂದ್ರ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸಾರ್ವಜನಿಕರ ಸಮಸ್ಯೆ ಅರಿವಿಗೆ ಬಂದಿದೆ. ಗುರುವಾರ ಸ್ಥಳ ಪರಿಶೀಲನೆ ನಡೆಸಲಾಗಿದೆ. ಒಂದು ವಾರದೊಳಗೆ ಹೊಂಡಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಮಳೆಗಾಲದ ನಂತರ ಶಾಶ್ವತ ಕಾಮಗಾರಿ ಕೈಗೊಳ್ಳಲಾಗುವುದು’ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಮು ಅರ್ಗೇಕರ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT