ಬುಧವಾರ, ನವೆಂಬರ್ 20, 2019
27 °C
ಹಲವು ವರ್ಷಗಳಿಂದ ವಾಸವಿರುವ ರೋಗಿಗಳು: ಹತ್ತಿರಕ್ಕೂ ಸುಳಿಯದ ಸಂಬಂಧಿಕರು

ಕಾರವಾರ: ‘ಅನಾಥ’ರಿಗೆ ಜಿಲ್ಲಾ ಆಸ್ಪತ್ರೆಯೇ ಆಧಾರ!

Published:
Updated:
Prajavani

ಕಾರವಾರ: ಈ ಮಂದಿಗೆ ಆಸ್ಪತ್ರೆಯೇ ನೆಲೆ. ಅಲ್ಲೇ ವಾಸ, ನಿದ್ದೆ, ಊಟ ಎಲ್ಲವೂ. ಆಸ್ಪತ್ರೆಯ ಸಿಬ್ಬಂದಿಯೇ ಬಂಧು ಬಳಗ. ಮಕ್ಕಳು, ಸಂಬಂಧಿಕರು ಯಾರೂ ಇತ್ತ ಸುಳಿಯದ ಕೊರಗಿನಲ್ಲೇ ಅವರು ದಿನಗಳೆಯುತ್ತಿದ್ದಾರೆ.

ನಗರದ ಜಿಲ್ಲಾ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿ ಎರಡು ಮೂರು ವರ್ಷಗಳಿಂದ ವಾಸವಿರುವ ನಾಲ್ವರ ದುಃಸ್ಥಿತಿಯಿದು. ಮಲ್ಲಾಪುರ, ವಿಜಯಪುರ, ದೂರದ ಉತ್ತರ ಪ್ರದೇಶದ ಇವರನ್ನು ಆಸ್ಪತ್ರೆಯ ಶುಶ್ರೂಷಕಿಯರು ಮಾನವೀಯ ನೆಲೆಯಲ್ಲಿ ಆರೈಕೆ ಮಾಡುತ್ತಿದ್ದಾರೆ. 

ಕೃಶಕಾಯದೊಂದಿಗೆ ಎರಡು ವರ್ಷಗಳಿಂದ ಆಸ್ಪತ್ರೆ ‍ಪಾಲಾಗಿರುವ ವಾಲಿಯಾ ಉತ್ತರಪ್ರದೇಶದವರು. ಅಸ್ಪಷ್ಟ ಧ್ವನಿಯಲ್ಲಿ ತನ್ನದು ದುಖಾವಾ ಎಂಬ ಗ್ರಾಮ, ತಂದೆಯ ಹೆಸರು ಗಿಬ್ಬಿಲಾಲ್, ತಾಯಿ ದೂಲಿ ಎಂದು ಹೇಳುತ್ತಾರೆ. ತನಗೆ ರಾಮದೇವ, ಭುವನ್ ಎಂಬ ಸಹೋದರರು ಮತ್ತು ಸೀತಾ ಎಂಬ ಸಹೋದರಿ ಇದ್ದಾಳೆ ಎಂದಷ್ಟೇ ನೆನಪಿಸಿಕೊಳ್ಳುತ್ತಾರೆ. ಆಸ್ಪತ್ರೆಗೆ ಯಾವಾಗ ಮತ್ತು ಯಾಕೆ ದಾಖಲಾದೆ ಎಂದು ಕೇಳಿದರೆ ಕೈ ಅಲ್ಲಾಡಿಸಿ, ತಿಳಿದಿಲ್ಲ ಎನ್ನುತ್ತಾರೆ.

ಶಿವರಾಜ್ (60), ಎರಡು ವರ್ಷಗಳಿಂದ ಆಸ್ಪತ್ರೆಯಲ್ಲಿ ಇರುವ ಹಿರಿಯರು. ಕೈಗಾ ಅಣುವಿದ್ಯುತ್ ಸ್ಥಾವರದಲ್ಲಿ ಗುತ್ತಿಗೆ ಆಧಾರದಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದರು. ಪಾರ್ಕಿನ್‌ಸನ್ ಕಾಯಿಲೆ ಕಾಣಿಸಿಕೊಂಡ ಕಾರಣ ಕೆಲಸದಿಂದ ದೂರ ಉಳಿಯಬೇಕಾಯಿತು. ಸ್ವಂತ ಮನೆಯೂ ಇಲ್ಲದೆ ಪತ್ನಿಯೊಂದಿಗೆ ಮಲ್ಲಾಪುರದ ಬಸ್ ನಿಲ್ದಾಣದಲ್ಲಿ ವಾಸವಿದ್ದರು. ಅವರನ್ನು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಆಸ್ಪತ್ರೆಗೆ ದಾಖಲಿಸಿದರು.

‘ಅನಾರೋಗ್ಯ ‍ಪೀಡಿತರಾದ ಅವರಿಗೆ ಮನೆ ನಿರ್ಮಿಸಿಕೊಡುವುದಾಗಿ ಹೇಳಿದ ಕೆಲವರು ಹಣ ಸಂಗ್ರಹಿಸಿ ಕೈಕೊಟ್ಟರು. ಆದರೆ, ಭರವಸೆ ಈಡೇರಿಸಲಿಲ್ಲ. ಇದೇವೇಳೆ ಅವರ ಪತ್ನಿಯೂ ದೂರವಾದರು’ ಎಂದು ಮಾಧವ ನಾಯಕ ವಿವರಿಸಿದರು.

ರಾಜು ಎಂಬುವವನ ಕತೆ ಇನ್ನೂ ಶೋಚನೀಯ. ಚಲಿಸುತ್ತಿದ್ದ ರೈಲಿನಿಂದ ಬಿದ್ದವನ ಕಾಲಿಗೆ ಗಂಭೀರವಾದ ಏಟಾಗಿದೆ. ಆತ ಎಲ್ಲಿಯವನು, ಕುಟುಂಬದವರು ಯಾರು ಎಂಬ ಮಾಹಿತಿಯಿಲ್ಲ. ಆತನೂ ಸ್ಪಷ್ಟವಾಗಿ ಹೇಳುತ್ತಿಲ್ಲ. ಸುಮಾರು ಎರಡೂವರೆ ವರ್ಷಗಳಿಂದ ಆಸ್ಪತ್ರೆಯಲ್ಲೇ ವಾಸವಿದ್ದಾರೆ.

ವಿಜಯಪುರದ ನಿಸರಮಟ್ಟಿಯ ಜಾನ್ (33) ಕೂಡ ಒಂದು ವರ್ಷದಿಂದ ಇಲ್ಲೇ ವಾಸ್ತವ್ಯ ಹೂಡಿದ್ದಾರೆ. ಚಿಕ್ಕ ವಯಸ್ಸಿಗೇ ಮದುವೆಯಾದ ತಮಗೆ 14 ವರ್ಷದ ಮಗಳು, ಆರು ವರ್ಷದ ಮಗನಿದ್ದಾನೆ ಎಂದು ಹೇಳುತ್ತಾರೆ. ಕಾರವಾರದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರಂತೆ. ಹುಷಾರಿಲ್ಲ ಎಂದು ಆಸ್ಪತ್ರೆಗೆ ಸೇರಿದ ಬಳಿಕ ಯಾರೂ ಹತ್ತಿರಕ್ಕೆ ಬರುತ್ತಿಲ್ಲ ಎಂದು ಕಣ್ಣೀರು ಸುರಿಸಿದರು.

ಮಾನವೀಯ ಸೇವೆ: ‘ಈ ಅನಾಥರಿಗೆ ಪ್ರತ್ಯೇಕ ವಾರ್ಡ್‌ನಲ್ಲಿ (ಐಸೋಲೇಷನ್) ವಾಸವಿರಲು ಅವಕಾಶ ಕೊಡಲಾಗಿದೆ. ಮಾನವೀಯತೆಯ ದೃಷ್ಟಿಯಿಂದ ಅವರನ್ನು ಹೊರಗೆ ಕಳುಹಿಸಲೂ ಆಗುವುದಿಲ್ಲ. ನಮ್ಮ ಸಿಬ್ಬಂದಿ ತುಂಬ ಶ್ರದ್ಧೆಯಿಂದ ಈ ರೋಗಿಗಳನ್ನು ಕಾಳಜಿ ಮಾಡುತ್ತಾರೆ’ ಎನ್ನುತ್ತಾರೆ ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತರಕರ್.

‘ಊಟ, ತಿಂಡಿ, ಟೂಥ್‌ಪೇಸ್ಟ್ ಮುಂತಾದವುಗಳಿಗೆ ಇತರ ರೋಗಿಗಳ ಸಂಬಂಧಿಕರನ್ನು ಅವಲಂಬಿಸುತ್ತಾರೆ. ಸಣ್ಣ ಪುಟ್ಟ ಖರ್ಚುಗಳಿಗೆ ಯಾರೋ ದಾನಿಗಳು ಬಂದು ಸಹಾಯ ಮಾಡುತ್ತಾರೆ’ ಎಂದು ತಿಳಿಸಿದರು.

‘ಕೆಲವರು ತಮ್ಮ ವೃದ್ಧ ತಂದೆ, ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿ ಸುಮ್ಮನಾಗುತ್ತಾರೆ. ಅವರು ಮೃತಪಟ್ಟ ಬಳಿಕ ಬಂದು ಶವ ತೆಗೆದುಕೊಂಡು ಹೋಗುತ್ತಾರೆ. ಜೊತೆಗೆ ಆಸ್ತಿ ದಾಖಲೆಗಾಗಿ ಮರಣ ಪ್ರಮಾಣಪತ್ರವನ್ನೂ ಕೇಳುತ್ತಾರೆ’ ಎಂದು ಬೇಸರಿಸಿದರು.

*
ಜಿಲ್ಲಾ ಆಸ್ಪತ್ರೆಯಲ್ಲಿರುವ ಅನಾಥರಿಗೆ ನಮ್ಮ ಸಂಘಟನೆಯಿಂದ ಪ್ರತಿ ವರ್ಷ ಕ್ಷೌರ ಮಾಡಿಸಿ ಹೊಸ ಬಟ್ಟೆ ನೀಡಲಾಗುತ್ತದೆ. ಈ ರೋಗಿಗಳ ಸಂಬಂಧಿಕರು ಇನ್ನಾದರೂ ಗಮನಹರಿಸಬೇಕು.
-ಮಾಧವ ನಾಯಕ, ಜನಶಕ್ತಿ ವೇದಿಕೆ ಅಧ್ಯಕ್ಷ

ಪ್ರತಿಕ್ರಿಯಿಸಿ (+)