ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವರ್ಷವೂ ಬಾಡಿಗೆ ಕಟ್ಟಡವೇ ಗತಿ !

ಆಮೆಗತಿಯಲ್ಲಿ ಹೆಣ್ಣು ಮಕ್ಕಳ ಸರ್ಕಾರಿ ಮೆಟ್ರಿಕ್ ನಂತರದ ವಸತಿ ನಿಲಯ ಕಾಮಗಾರಿ
Last Updated 5 ಜೂನ್ 2019, 19:45 IST
ಅಕ್ಷರ ಗಾತ್ರ

ಶಿರಸಿ: ಎಸ್ಸೆಸ್ಸೆಲ್ಸಿ ಪೂರೈಸಿ ಕಾಲೇಜು ಮೆಟ್ಟಿಲು ಹತ್ತಿದ ಹೆಣ್ಣು ಮಕ್ಕಳ ಆಧುನಿಕ ವಸತಿ ನಿಲಯದಲ್ಲಿ ಉಳಿಯಬೇಕೆಂಬ ಕನಸು ಸದ್ಯಕ್ಕೆ ಈಡೇರುವ ಲಕ್ಷಣಗಳು ಕಾಣುತ್ತಿಲ್ಲ. ನಗರದಲ್ಲಿ ನಿರ್ಮಾಣವಾಗುತ್ತಿರುವ ಹೆಣ್ಣು ಮಕ್ಕಳ ಸರ್ಕಾರಿ ಮೆಟ್ರಿಕ್ ನಂತರದ ವಸತಿ ನಿಲಯ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ.

ಶಿರಸಿ–ಯಲ್ಲಾಪುರ ರಸ್ತೆಯಲ್ಲಿ ರೋಟರಿ ಆಸ್ಪತ್ರೆ ಎದುರು ಇರುವ ಹೆಣ್ಣು ಮಕ್ಕಳ ಸರ್ಕಾರಿ ಮೆಟ್ರಿಕ್ ಪೂರ್ವ ವಸತಿ ನಿಲಯದ ಕಾಂಪೌಂಡ್ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಹೊಸ ವಸತಿ ನಿಲಯದ ₹ 3.2 ಕೋಟಿ ವೆಚ್ಚದ ಕಾಮಗಾರಿಗೆ ಕಳೆದ ವರ್ಷ ಜುಲೈನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆ ಗುದ್ದಲಿಪೂಜೆ ನೆರವೇರಿಸಿದ್ದರು. ಗುತ್ತಿಗೆ ಪಡೆದಿರುವ ಮುಂಬೈನ ವೆಕ್ಟರ್‌ ಕಂಪನಿಯು ಆಗಸ್ಟ್‌ನಲ್ಲಿ ಕೆಲಸ ಆರಂಭಿಸಿದ್ದರೂ, ಕಟ್ಟಡ ತಳಪಾಯದ ಹಂತದಲ್ಲಿಯೇ ಇದೆ.

ಕಾಮಗಾರಿಯ ಸ್ಥಳದಲ್ಲಿ ಕಂಬ ಎಬ್ಬಿಸಲು ತೆಗೆದಿರುವ ಗುಂಡಿಗಳು, ಕೆಲವು ಕಡೆ ಕಬ್ಬಿಣದ ಬಾರ್‌ಗಳನ್ನು ಕಟ್ಟಿರುವುದು ಕಾಣುತ್ತದೆ. ಪಕ್ಕದಲ್ಲಿ ಕಟ್ಟಡ ಸಾಮಗ್ರಿಗಳ ರಾಶಿ ಬಿದ್ದುಕೊಂಡಿದೆ. ‘ವೆಕ್ಟರ್‌ ಕಂಪನಿಯು ಸ್ಥಳೀಯವಾಗಿ ಉಪಗುತ್ತಿಗೆ ನೀಡಿದ್ದು, ಇದೇ ಕಾರಣಕ್ಕೆ ಕಾಮಗಾರಿ ವಿಳಂಬವಾಗಿದೆ. ಯೋಜನೆಯಂತೆ ಕೆಲಸ ನಡೆದಿದ್ದರೆ ಇಷ್ಟರೊಳಗೆ ಪಿಲ್ಲರ್ ಪೂರ್ಣಗೊಂಡು, ಬರುವ ಡಿಸೆಂಬರ್ ಹೊತ್ತಿಗೆ ವಿದ್ಯಾರ್ಥಿನಿಯಲ್ಲಿ ಅಲ್ಲಿ ಉಳಿಯುಬಹುದಿತ್ತು’ ಎಂಬುದು ಮಕ್ಕಳ ಪಾಲಕರ ಆಕ್ಷೇಪ.

ವಸತಿ ನಿಲಯದಲ್ಲಿ ಏನೇನು ವ್ಯವಸ್ಥೆ

ಸದ್ಯ ಮೆಟ್ರಿಕ್ ನಂತರದ ಹೆಣ್ಣು ಮಕ್ಕಳ ವಸತಿ ನಿಲಯವು ಕೆಎಚ್‌ಬಿ ಕಾಲೊನಿಯ ಬಾಡಿಗೆ ಕಟ್ಟಡದಲ್ಲಿದೆ. ಎಸ್ಸೆಸ್ಸೆಲ್ಸಿ ನಂತರದ ಶಿಕ್ಷಣ ಪಡೆಯುತ್ತಿರುವ 100 ವಿದ್ಯಾರ್ಥಿನಿಯರಿಗೆ ಇಲ್ಲಿ ವಸತಿಗೆ ಅವಕಾಶ ಕಲ್ಪಿಸಲಾಗಿದೆ. ಹೊಸ ವಸತಿ ನಿಲಯದಲ್ಲಿ ಪರಿಶಿಷ್ಟ, ಜಾತಿ, ಪರಿಶಿಷ್ಟ ಪಂಗಡ ಹಾಗೂ ಒಬಿಸಿ ಮಕ್ಕಳಿಗೆ ಪ್ರವೇಶ ನೀಡಲಾಗುತ್ತದೆ.

‘ಆಧುನಿಕ ಮಾದರಿಯ ವಸತಿ ನಿಲಯದಲ್ಲಿ ಎಲ್ಲ ಸೌಲಭ್ಯಗಳೂ ಇರಲಿವೆ. ಮಂಚ, ಹಾಸಿಗೆ, ತಲೆದಿಂಬು ಎಲ್ಲವನ್ನೂ ಗುತ್ತಿಗೆದಾರರು ಪೂರೈಕೆ ಮಾಡಿದ ಮೇಲೆಯೇ ಬಾಡಿಗೆ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತದೆ’ ಎಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಪುರುಷೋತ್ತಮ ತಿಳಿಸಿದರು.

‘ಜಿಲ್ಲೆಯಲ್ಲಿ ಒಟ್ಟು ಆರು ಕಡೆಗಳಲ್ಲಿ ವಸತಿ ನಿಲಯ ನಿರ್ಮಾಣವಾಗುತ್ತಿದೆ. ಹಳಿಯಾಳದಲ್ಲಿ ಮೆಟ್ರಿಕ್ ಪೂರ್ವ, ಶಿರಸಿ, ಕುಮಟಾ, ಕಾರವಾರಗಳಲ್ಲಿ ಮೆಟ್ರಿಕ್ ನಂತರ ವಿದ್ಯಾರ್ಥಿನಿಯರ ವಸತಿ ನಿಲಯದ ಸ್ವಂತ ಕಟ್ಟಡ ಸಿದ್ಧವಾಗುತ್ತಿದೆ. ಕಾಮಗಾರಿ ನಿಧಾನವಾಗುತ್ತಿರುವುದರ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿತ್ತು. ಗುತ್ತಿಗೆ ಅದೇ ಕಂಪನಿಯ ಬಳಿ ಇದ್ದರೂ, ನಿರ್ವಹಣಾ ತಂಡ ಬದಲಾಗಿರುವುದರಿಂದ ಕಾಮಗಾರಿಗೆ ತುಸು ಚುರುಕು ದೊರೆತಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮುಂದಿನ ಶೈಕ್ಷಣಿಕ ವರ್ಷದ ಒಳಗಾಗಿ ಹೆಣ್ಣು ಮಕ್ಕಳ ವಸತಿ ನಿಲಯದ ನೆಲ ಹಾಗೂ ಮೊದಲ ಮಹಡಿಯ ಕಟ್ಟಡ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಪುರುಷೋತ್ತಮ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT