ಹಸಿವು ಮುಕ್ತ ಭಾರತ ಕನಸು ಸಾಕಾರವಾಗಿಲ್ಲ: ಮಟ್ಟಾರು ರತ್ನಾಕರ ಹೆಗ್ಡೆ

7
ಉಡುಪಿ ಹೆಲ್ಪ್‌ ಲೈನ್‌ ಲೋರ್ಕಾಪಣೆ ಕಾರ್ಯಕ್ರಮ

ಹಸಿವು ಮುಕ್ತ ಭಾರತ ಕನಸು ಸಾಕಾರವಾಗಿಲ್ಲ: ಮಟ್ಟಾರು ರತ್ನಾಕರ ಹೆಗ್ಡೆ

Published:
Updated:

ಉಡುಪಿ: ಭಾರತದಲ್ಲಿ ಪ್ರತಿವರ್ಷ ತಯಾರಿಸುವ ಆಹಾರದಲ್ಲಿ ಶೇಕಡಾ 50ರಷ್ಟು ಬೇಯಿಸಿದ ಪದಾರ್ಥಗಳು ವ್ಯರ್ಥವಾಗುತ್ತಿವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ್‌ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದರು.

ಉಡುಪಿ ಲಯನ್ಸ್‌ ಕ್ಲಬ್‌ ಸಹಯೋಗದಲ್ಲಿ ಗುರುವಾರ ಬ್ರಹ್ಮಗಿರಿಯಲ್ಲಿ ಆಯೋಜಿಸಿದ್ದ ಉಡುಪಿ ಹೆಲ್ಪ್‌ ಲೈನ್‌ ಲೋರ್ಕಾಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಸಿವು ಮುಕ್ತ ಭಾರತ ನಿರ್ಮಾಣದ ಕನಸು ಇನ್ನೂ ಸಾಕಾರವಾಗಿಲ್ಲ. ತಿನ್ನುವ ಅನ್ನವನ್ನು ವ್ಯರ್ಥ ಮಾಡಬೇಡಿ. ನಿತ್ಯ ನೂರಾರು ಜನರು ಆಹಾರ ಸಿಗದೆ ಸಾವನ್ನಪ್ಪುತ್ತಿದ್ದಾರೆ. ಹಸಿದವರ ಆಕ್ರಂದನ ಮುಗಿಲುಮುಟ್ಟುತ್ತಿದೆ. ಹೊಟ್ಟೆ ಬಿರಿಯುವಂತೆ ತಿಂದವರು, ಹೆಚ್ಚಿನ ಪ್ರಮಾಣದ ಆಹಾರ ಪದಾರ್ಥಗಳನ್ನು ಬಿಸಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಆಹಾರವನ್ನು ವ್ಯರ್ಥಗೊಳಿಸುವುದು ಸರಿಯಲ್ಲ. ಈ ಬಗ್ಗೆ ಪ್ರಜ್ಞಾವಂತ ಸಮಾಜ ಗಂಭೀರವಾದ ಚಿಂತನೆ ನಡೆಸಬೇಕಿದೆ. ಪೋಲಾಗುವ ಆಹಾರ ಹಸಿದವರ ಹೊಟ್ಟೆ ಸೇರುವಂತಾಗಬೇಕು. ಸಂಘ ಸಂಸ್ಥೆಗಳು ಈ ಬಗ್ಗೆ ಕಾರ್ಯ ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.

ಶುಭ ಸಮಾರಂಭಗಳಲ್ಲಿ ಉಳಿಯುವ ಆಹಾರವನ್ನು ಚೆಲ್ಲಬಾರದು. ಉಡುಪಿ ಹೆಲ್ಪ್‌ ಲೈನ್‌ ಸಂಸ್ಥೆಗೆ ಕರೆ ಮಾಡಿದರೆ, ತಕ್ಷಣವೇ ಸ್ಥಳಕ್ಕೆ ಆಗಮಿಸಿ ಉಳಿದ ಆಹಾರವನ್ನು ಸಂಗ್ರಹಿಸಿ, ನಿರ್ಗತಿಕರು ವಾಸವಾಗಿರುವ ಪ್ರದೇಶಗಳಿಗೆ ತೆರಳಿ ಹಂಚಲಿದ್ದಾರೆ. ಈ ಕಾರ್ಯ ನಿಜಕ್ಕೂ ಅಭಿನಂದನಾರ್ಹ ಎಂದರು.

ಕರಾವಳಿಯಲ್ಲಿ ಸಾಮಾನ್ಯವಾಗಿ ಸಭೆ ಸಮಾರಂಭಗಳು ಮುಗಿಯುವುದು ಸಂಜೆಯ ಹೊತ್ತಿಗೆ. ಬೆಳಿಗ್ಗೆ ಮಾಡಿದ ಆಹಾರ ಕೆಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಈ ನಿಟ್ಟಿನಲ್ಲಿ ಸಂಸ್ಥೆಯವರು ಜಾಗೃತೆ ವಹಿಸುವುದು ಉತ್ತಮ ಎಂದು ಸಲಹೆ ನೀಡಿದರು.

ಜೀವನದಲ್ಲಿ ಧನ್ಮಾತಕ ಆಲೋಚನೆ ರೂಢಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಮನೆಯಲ್ಲಿ ಆಹಾರ ಪದಾರ್ಥಗಳು ಹಾಳಾಗದಂತೆ ಎಚ್ಚರವಹಿಸಬೇಕು. ಹೀಗೆ, ಮಾಡುವುದರಿಂದ ವೈಯಕ್ತಿಕ ಲಾಭ ಮಾತ್ರವಲ್ಲ; ದೇಶಕ್ಕೆ ಒಳಿತು ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ಸಂಸ್ಥೆಯ ಗೌರವಾಧ್ಯಕ್ಷ ಅಮೃತ್‌ ಶೆಣೈ ಮಾತನಾಡಿ, ‘ಮನೆಯಲ್ಲಿ ಶುಭ ಸಮಾರಂಭಗಳು ನಡೆದರೆ ನೂರಾರು ಮಂದಿಗೆ ಹಬ್ಬದೂಟವನ್ನೇ ಬಡಿಸುತ್ತೀರಿ. ಉಳಿದ ಆಹಾರವನ್ನು ಏನು ಮಾಡಬೇಕೆಂದು ತಿಳಿಯದೆ ಚೆಲ್ಲಲು ಮುಂದಾಗುತ್ತಿರಿ. ಮುಂದೆ ಅಂತಹ ಕೆಲಸ ಮಾಡಬೇಡಿ. ಕರೆ ಮಾಡಿದರೆ, ನೀವಿರುವ ಸ್ಥಳಕ್ಕೇ ಬಂದು ಉಳಿದಿರುವ ಆಹಾರವನ್ನು ಸಂಗ್ರಹಿಸಿ ಹಸಿದವರಿಗೆ ನೀಡುತ್ತೇವೆ ಎಂದರು.

ಉಡುಪಿ ಹೆಲ್ಪ್‌ಲೈನ್ ಸಂಸ್ಥೆ ಎರಡು ತಿಂಗಳಿನಿಂದ ಜಿಲ್ಲೆಯಲ್ಲಿ ಸುಮಾರು 2,000 ಜನರಿಗೆ ಆಹಾರ ವಿತರಿಸಿದೆ. ಸಂಸ್ಥೆಗೆ ಆಹಾರ ಸಾಗಾಟಕ್ಕೆ ವಾಹನ ಹಾಗೂ ಶೇಖರಣೆಗೆ ಕೊಠಡಿಯ ಅವಶ್ಯಕತೆ ಇದೆ ಎಂದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜನಾರ್ದನ ತೋನ್ಸೆ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್‌ ಶೆಟ್ಟಿ, ಲಯನ್ಸ್‌ ಕ್ಲಬ್ ಅಧ್ಯಕ್ಷ ಮನೋಜ್‌ ಪ್ರಭು, ಬಡಗಬೆಟ್ಟು ಕ್ರೆಡಿಟ್‌ ಕೋ–ಆಪರೇಟಿವ್‌ ಸೊಸೈಟಿ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಅಧ್ಯಕ್ಷ ಮಹೇಶ್‌ ಪೂಜಾರಿ ಹೊಡೆ ಉಪಸ್ಥಿತರಿದ್ದರು.

ಸಂಸ್ಥೆ ಮಾಧ್ಯಮ ವಕ್ತಾರ ಸ್ಟೀವನ್‌ ಕುಲಾಸೊ ಕಾರ್ಯಕ್ರಮ ನಿರ್ವಹಿಸಿದರು, ಸಾಮಾಜಿಕ ಜಾಲತಾಣ ಮುಖ್ಯಸ್ಥ ಖಲೀಲ್‌ ಕೇರಾಡಿ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !