ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಗೆ ಗುಂಡೇಟು: ಪತಿಯ ಬಂಧನ

ಪತ್ನಿಗೆ ಜೇನು ಹುಳ ಕಚ್ಚಿದ್ದಾಗಿ ದಾರಿ ತಪ್ಪಿಸಲು ಯತ್ನಿಸಿದ್ದ ಆರೋಪಿ
Last Updated 7 ಡಿಸೆಂಬರ್ 2020, 12:36 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ಕದ್ರಾ ಬಳಿಯ ಗೋಯೆರ್ ಅರಣ್ಯ ಭಾಗದಲ್ಲಿ ಪತ್ನಿಯ ಮೇಲೆ ಗುಂಡಿನ ದಾಳಿ ಮಾಡಿದ್ದ ಪತಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಸ್ಥಳೀಯ ನಿವಾಸಿ ರಮೇಶ ದೇಸಾಯಿ ಬಂಧಿತರು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಬಗ್ಗೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾಹಿತಿ ನೀಡಿದರು.

‘ಡಿ.4ರಂದು ಕಟ್ಟಿಗೆ ತರಲೆಂದು ಕಾಡಿಗೆ ಹೋಗಿದ್ದ ಪತ್ನಿ ರಸಿಕಾ ಅವರ ಮೇಲೆ ರಮೇಶ ಗುಂಡು ಹಾರಿಸಿ ಎಡಭುಜಕ್ಕೆ ಗಾಯಗೊಳಿಸಿದ್ದರು. ಈ ಬಗ್ಗೆ ಅನುಮಾನ ಬರಬಾರದು ಎಂದು ಸ್ವತಃ ರಮೇಶ ಅವರೇ ಕದ್ರಾ ಠಾಣೆಗೆ ದೂರು ನೀಡಿದ್ದರು. ಅಲ್ಲದೇ ರಸಿಕಾ ಕೂಡ ಅಪರಿಚಿತರು ಗುಂಡಿನ ದಾಳಿ ಮಾಡಿದ್ದಾಗಿ ಹೇಳಿದ್ದರು. ಹಾಗಾಗಿ ಆರಂಭದಲ್ಲಿ ಇದನ್ನು ಕಾಡುಗಳ್ಳರ ಕೃತ್ಯ ಎಂದು ಭಾವಿಸಲಾಗಿತ್ತು. ಆದರೆ, ಈ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿತ್ತು’ ಎಂದು ತಿಳಿಸಿದರು.

‘ಗಾಯಗೊಂಡಿದ್ದ ಪತ್ನಿಯ ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದುಕೊಂಡು ಬಂದು, ಜೇನುನೊಣ ಕಚ್ಚಿದೆ ಎಂದು ಸುಳ್ಳು ಹೇಳಿದ್ದರು. ಆದರೆ, ವೈದ್ಯರು ಪರಿಶೀಲಿಸಿದಾಗ ಬಂದೂಕಿನ ಗುಂಡಿನ ಚೂರುಗಳು ಪತ್ತೆಯಾಗಿದ್ದವು. ಈ ಕುರಿತು ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ರಸಿಕಾ ಅವರನ್ನು ವಿಚಾರಿಸಿದಾಗ ನಿಜಾಂಶ ಬಾಯಿಬಿಟ್ಟರು’ ಎಂದು ತಿಳಿಸಿದರು.

‘ದಂಪತಿಯ ನಡುವೆ ಕೆಲವು ದಿನಗಳ ಹಿಂದೆ ಜಗಳ ನಡೆದಿತ್ತು. ಇದೇ ಕಾರಣಕ್ಕೆ ಆರೋಪಿಯು ಕೃತ್ಯ ಎಸಗಿದ್ದೇ ಅಥವಾ ಬೇರೆ ಕಾರಣಗಳಿವೆಯೇ ಎಂದು ಮಾಹಿತಿ ಕಲೆ ಹಾಕಲಾಗುತ್ತಿದೆ. ಅಲ್ಲದೇ ಆರೋಪಿಯು ಬಳಸಿದ ಬಂದೂಕಿಗೆ ಪರವಾನಗಿ ಇತ್ತೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ’ ಎಂದೂ ಅವರು ಹೇಳಿದರು.

ಡಿ.ವೈ.ಎಸ್.ಪಿ ಅರವಿಂದ ಕಲಗುಜ್ಜಿ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ನಿತ್ಯಾನಂದ, ರಾಜಶೇಖರ ಸಾಗನೂರ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಕದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT