ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗುಳೆ’ ಹೋದರವರನ್ನು ಅರಸುತ್ತಾ!

ಶಹಾಪುರ:ಬಿಜೆಪಿ, ಕಾಂಗ್ರೆಸ್ ಜೆಡಿಎಸ್ ಪಕ್ಷದ ನಾಯಕರಿಂದ ಸೆಳೆಯುವ ಯತ್ನ
Last Updated 7 ಮೇ 2018, 14:12 IST
ಅಕ್ಷರ ಗಾತ್ರ

ಶಹಾಪುರ: ಮತಕ್ಷೇತ್ರದ ವ್ಯಾಪ್ತಿಯಲ್ಲಿ ತುತ್ತಿನ ಚೀಲ ತುಂಬಿಸಿಕೊಳ್ಳಲು ಗುಳೆ ಹೋದ ಕುಟುಂಬದ ಸದಸ್ಯರಿಗೆ ರಾಜಕೀಯ ಪಕ್ಷಗಳು ಮತದಾನದಂದು ಮರಳಿ ಗ್ರಾಮಕ್ಕೆ ಇಲ್ಲವೆ ತಾಂಡಾಕ್ಕೆ ಕರೆಯಿಸಿ ಓಟು ಗಿಟ್ಟಿಸುವ ಯತ್ನದಲ್ಲಿ ಮಗ್ನರಾಗಿದ್ದಾರೆ.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗ ಮುಖಂಡರು ಪ್ರತ್ಯೇಕವಾಗಿ ಭೇಟಿಯಾಗಿ ಮನವಿ ಮಾಡಿದ್ದು ಯಾವ ಅಭ್ಯರ್ಥಿಯ ಕಡೆ ವಾಲುತ್ತಾರೆ ಕಾದು ನೋಡಬೇಕಾಗಿದೆ. ಶಹಾಪುರ ಮತಕ್ಷೇತ್ರದಲ್ಲಿ ಸುಮಾರು 5,000 ಕ್ಕೂ ಅಧಿಕ ಮತದಾರರು ಗುಳೆ ಹೋಗಿದ್ದಾರೆ ಎಂದು ಅಂದಾಜಿಸಲಾಗಿದೆ ಎಂದು ಬಿಜೆಪಿಯ ಮುಖಂಡರೊಬ್ಬರು ತಿಳಿಸಿದರು.

ತಾಲ್ಲೂಕಿನಲ್ಲಿ ಹೆಚ್ಚಾಗಿ ಗೋಗಿ ತಾಂಡಾ, ಚಂದಾಪುರ, ಚಾಮನಾಳ, ಹಾರಣಗೇರಾ, ನಾಗನಟಗಿ, ಉಕ್ಕಿನಾಳ ತಾಂಡಾದ ನಿವಾಸಿಗಳು ದೂರದ ಪೂನಾ, ಗೋವಾ, ಮುಂಬೈ ಹಾಗೂ ಇನ್ನಿತರ ಕಡೆ ಹಲವು ವರ್ಷದಿಂದ ಗುಳೆ ಹೋಗಿದ್ದಾರೆ. ವರ್ಷಕ್ಕೆ ಒಮ್ಮೆ ಅಂದರೆ ದೀಪಾವಳಿಯ ಸಂದರ್ಭದಲ್ಲಿ ಮಾತ್ರ ತಾಂಡಾಕ್ಕೆ ಬಂದು ಮತ್ತೆ ಮರಳಿ ವಲಸೆ ಹೋಗುವುದು ಸಾಮಾನ್ಯ. ಆಯಾ ತಾಂಡಾದಲ್ಲಿ ಗುಳೆ ಹೋದವರ ಕುಟುಂಬದ ಸದಸ್ಯರ ಪಟ್ಟಿ ಸಿದ್ಧಗೊಂಡಿದೆ. ಲಂಬಾಣಿ ಸಮುದಾಯದವರು ನೆಲೆಕಂಡಿರುವ ಸ್ಥಳಕ್ಕೆ ಖುದ್ದಾಗಿ ಭೇಟಿಯಾಗಿ ಪ್ರಚಾರವನ್ನು ಮಾಡುವುದರ ಜತೆಯಲ್ಲಿ ಮತದಾನ ದಿನದಂದು ಆಗಮಿಸುವಂತೆ ಮನವಿ ಮಾಡಿದಾಗ ಸ್ವಂತ ಖರ್ಚಿನಲ್ಲಿ ತಾಂಡಾಕ್ಕೆ ಆಗಮಿಸಿ ಮತದಾನ ಮಾಡುವುದಾಗಿ ಭರವಸೆಯನ್ನು ನೀಡಿದ್ದಾರೆ ಎಂದು ಲಂಬಾಣಿ ಸಮುದಾಯದ ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರು ತಿಳಿಸಿದರು.

ಆಯಾ ತಾಂಡಾದಲ್ಲಿರುವ ಮತದಾರ ಪಟ್ಟಿಯನ್ನು ತೆಗೆದುಕೊಂಡು ಪರಿಶೀಲಿಸಿ ಮತದಾನ ಪಟ್ಟಿಯಲ್ಲಿ ಹೆಸರು ಇರುವುದನ್ನು ಖಾತರಿ ಪಡಿಸಿಕೊಂಡಿದ್ದೇವೆ. ಮೇ 11 ರಂದು ನೇರವಾಗಿ ಗುಳೆ ಹೋದ ಸ್ಥಳಕ್ಕೆ ಬಸ್ಸನ್ನು ಕಳುಹಿಸಿ ಮರು ದಿನ ಅಂದರೆ ಮೇ12ರಂದು ಬೆಳಿಗ್ಗೆ ಸಮಯದಲ್ಲಿ ತಾಂಡಾಕ್ಕೆ ಬಸ್ಸು ಆಗಮಿಸುತ್ತದೆ. ಮತದಾನ ಮಾಡಲು ಅಗತ್ಯವಾದ ದಾಖಲೆಗಳನ್ನು ಸಂಗ್ರಹಿಸಿಕೊಳ್ಳುವಂತೆ ಸೂಚಿಸಿದ್ದೇವೆ. ಪ್ರತಿ ವ್ಯಕ್ತಿಗೆ ಭಕ್ಷಿಸು ನೀಡುತ್ತೇವೆ ಎಂಬ ಅಲಿಖಿತ ಒಪ್ಪಂದವನ್ನು ಮಾಡಿಕೊಂಡಿದ್ದೇವೆ ಎನ್ನುತ್ತಾರೆ ಜೆಡಿಎಸ್ ರಾಜಕೀಯ ಪಕ್ಷದ ಮುಖಂಡರೊಬ್ಬರು.

ಅದರಂತೆ ಕಾಲುವೆ ನೀರು ವಂಚಿತ ಗ್ರಾಮದ ಹಳ್ಳಿಯ ನಿವಾಸಿಗರು ಬೆಂಗಳೂರು, ಮಂಗಳೂರು ಮುಂತಾದ ಕಡೆ ತೆರಳಿದ್ದಾರೆ. ವಲಸೆ ಹೋಗಿರುವ ಹಳ್ಳಿಯ ಮತದಾರರು ನೇರವಾಗಿ ಬಸ್ಸಿಗೆ ಕುಳಿತುಕೊಂಡು ಬರುವಂತೆ ಕುಟುಂಬದ ಹಿರಿಯ ಸದಸ್ಯರಿಂದ ಇಲ್ಲವೆ ಗ್ರಾಮದ ಮುಖಂಡರಿಂದ ಮೊಬೈಲ್ ಮೂಲಕ ಸಂದೇಶವನ್ನು ರವಾನಿಸಿದ್ದಾರೆ. ಒಲ್ಲದ ಮನಸ್ಸಿನಿಂದ ಗುಳೆ ಹೋದವರು ಆಗಿಸುವ ಚಿಂತನೆ ನಡೆಸಿದ್ದಾರೆ.
**
ಸ್ವಾಮಿ ಕಾರ್ಯ ಹಾಗೂ ಸ್ವಂತ ಕಾರ್ಯವಾಗುವುದರಿಂದ ಮತದಾನ ದಿನದಂದು ತಾಂಡಕ್ಕೆ ಆಗಮಿಸಿ ಓಟು ಹಾಕ್ತೀನಿ. ಇದೆಲ್ಲವನ್ನು ಬಾಯಿ ಬಿಟ್ಟು ಹೇಳಲಾಗುವುದಿಲ್ಲ. ಎಲ್ಲವೂ ವ್ಯವಸ್ಥೆ ಇದೆ
– ನವಲ್ಯಾ ರಾಠೋಡ, ಗುಳೆ ಹೋದ ವ್ಯಕ್ತಿ

ಟಿ.ನಾಗೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT