ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ನಿಯಂತ್ರಣ ಕರಡು ನನೆಗುದಿಗೆ: ನಗರ ಸೌಂದರ್ಯಕ್ಕೂ ಧಕ್ಕೆ

ಜಿಲ್ಲಾ ಕೇಂದ್ರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ
Last Updated 21 ಆಗಸ್ಟ್ 2021, 16:27 IST
ಅಕ್ಷರ ಗಾತ್ರ

ಕಾರವಾರ: ನಗರದಲ್ಲಿ ಸಂಚಾರ ದಟ್ಟಣೆ ನಿಭಾಯಿಸುವುದು ಮತ್ತು ವಾಹನಗಳ ನಿಲುಗಡೆಗೆ ಸಂಬಂಧಿಸಿದಂತೆ ಈ ಹಿಂದೆ ಸಿದ್ಧಪಡಿಸಲಾಗಿದ್ದ ಕರಡು ಪ್ರಸ್ತಾವವು ಇನ್ನೂ ಜಾರಿಯಾಗಿಲ್ಲ. ಕಳೆದ ವರ್ಷ ಜುಲೈನಲ್ಲಿ ಸಾರ್ವಜನಿಕರಿಂದ ಆಕ್ಷೇಪಣೆ, ಸಲಹೆಗಳನ್ನು ಆಹ್ವಾನಿಸಿ, ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಲಾದ ನೀಲನಕ್ಷೆಗೆ ರಸ್ತೆ ಸುರಕ್ಷತಾ ಸಮಿತಿಯಿಂದ ಒಪ್ಪಿಗೆ ಸಿಗಬೇಕಿದೆ.

ನಗರ ಕೇಂದ್ರದಲ್ಲಿ ವಿಶಾಲವಾದ ರಸ್ತೆಗಳಿದ್ದರೂ ವಾಹನಗಳ ಅಡ್ಡಾದಿಡ್ಡಿ ನಿಲುಗಡೆಯಿಂದಾಗಿ ಸಂಚಾರ ದಟ್ಟಣೆ ಸಾಮಾನ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ವಾಹನಗಳ ಸಂಖ್ಯೆಯೂ ಏರಿಕೆ ಕಾಣುತ್ತಿದ್ದು, ಮುಖ್ಯರಸ್ತೆಗಳ ಅಡ್ಡರಸ್ತೆಗಳಲ್ಲಿ ವಾಹನಗಳ ಸಾಲು ಕಂಡುಬರುತ್ತಿದೆ. ಇದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಅದರಲ್ಲೂ ವಾರಾಂತ್ಯದ ದಿನಗಳಲ್ಲಿ, ವಿಶೇಷ ಸಂದರ್ಭಗಳಲ್ಲಿ ಈ ಸಮಸ್ಯೆ ಹೆಚ್ಚಾಗಿರುತ್ತದೆ.

ಈ ನಿಟ್ಟಿನಲ್ಲಿ ಸ್ಪಷ್ಟವಾದ ನಿಯಮ ಜಾರಿ ಮಾಡಲು ನಿರ್ಧರಿಸಲಾಗಿತ್ತು. ಕಳೆದ ವರ್ಷ ಜುಲೈನಲ್ಲಿ, ನಗರಸಭೆಯ ಪ್ರಭಾರ ಆಯುಕ್ತರಾಗಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಅಂದಿನ ಉಪ ವಿಭಾಗಾಧಿಕಾರಿ) ಎಂ.ಪ್ರಿಯಾಂಗಾ ನೇತೃತ್ವದಲ್ಲಿ ನೀಲನಕ್ಷೆ ಸಿದ್ಧಪಡಿಸಲಾಗಿತ್ತು. ಯಾವ ರಸ್ತೆಯಲ್ಲಿ ಯಾವ ಮಾದರಿಯ ವಾಹನಗಳನ್ನು ನಿಲುಗಡೆ ಮಾಡಬೇಕು, ಯಾವ ದಿನ ಯಾವ ಬದಿಯಲ್ಲಿ ನಿಲುಗಡೆ ಮಾಡಬೇಕು ಹಾಗೂ ಯಾವ ರಸ್ತೆಗಳಲ್ಲಿ ಏಕಮುಖ ಸಂಚಾರವನ್ನು ಜಾರಿ ಮಾಡಬೇಕು ಎಂದು ಪ್ರಸ್ತಾವ ಸಲ್ಲಿಸಲಾಗಿತ್ತು.

ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಸುಮಾರು 780 ನಾಲ್ಕು ಚಕ್ರಗಳ ವಾಹನಗಳು ಹಾಗೂ 2,550 ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ ಸಿಗುವಂತೆ ಯೋಜನೆ ರೂಪಿಸಲಾಗಿತ್ತು.

ಎಲ್ಲೆಲ್ಲಿ ಬದಲಾವಣೆ ಪ್ರಸ್ತಾವ?: ಗ್ರೀನ್‌ಸ್ಟ್ರೀಟ್‌ನಲ್ಲಿ ಗಣಪತಿ ದೇವಸ್ಥಾನದಿಂದ ಉಡುಪಿ ಶ್ರೀಕೃಷ್ಣ ವಿಲಾಸ ಹೋಟೆಲ್‌ವರೆಗೆ ಸರಕು ಸಾಗಣೆಯ ವಾಹನಗಳಿಗೆ ಏಕಮುಖ ಸಂಚಾರಕ್ಕೆ ಅವಕಾಶವಿದೆ. ಅದನ್ನು ಅದೇರೀತಿಯಲ್ಲೇ ಮುಂದುವರಿಸಲು ತೀರ್ಮಾನಿಸಲಾಗಿತ್ತು. ಉಳಿದಂತೆ, ವಿವಿಧ ರಸ್ತೆಗಳಲ್ಲಿ ದಿನ ಬಿಟ್ಟು ದಿನ ವಾಹನಗಳ ನಿಲುಗಡೆ ಮಾಡಲು ನಿರ್ಧರಿಸಲಾಗಿತ್ತು.

ಬ್ರಾಹ್ಮಣಗಲ್ಲಿ, ಮಾರುತಿಗಲ್ಲಿ, ಕುಟಿನ್ಹೊ ರಸ್ತೆ, ರಾಧಾಕೃಷ್ಣರಸ್ತೆ (ಬಸ್ ನಿಲ್ದಾಣ ರಸ್ತೆಯಿಂದ ಕೋಡಿಬಾಗ ಮುಖ್ಯರಸ್ತೆಯವರೆಗೆ), ಸವಿತಾ ಹೋಟೆಲ್ ಹಿಂಭಾಗದ ರಸ್ತೆ, ಜನತಾ ಬಝಾರ್‌ನಿಂದ ಕಾರವಾರ– ಕೋಡಿಬಾಗ ರಸ್ತೆಯ ತನಕ ಈ ರೀತಿ ಮಾಡಲು ಯೋಜನೆ ರೂಪಿಸಲಾಗಿತ್ತು.

ಕಾರವಾರ– ಇಳಕಲ್ ರಸ್ತೆ (ಸುಭಾಸ ವೃತ್ತದಿಂದ ಜನತಾ ಬಝಾರ್‌ವರೆಗೆ ಹಾಗೂ ಜನತಾ ಬಝಾರ್‌ನಿಂದ ಗ್ರೀನ್‌ಸ್ಟ್ರೀಟ್), ಹೈಚರ್ಚ್ ರಸ್ತೆ (ದೋಭಿಘಾಟ್‌ನಿಂದ ಕಾರವಾರ ಇಳಕಲ್ ರಸ್ತೆ), ಹೂವಿನ ಚೌಕ ರಸ್ತೆ (ಉಪ್ಪಿನ ದೇವಸ್ಥಾನದಿಂದ ಮುರಳೀಧರ ಮಠ ಕ್ರಾಸ್), ಕಮಲಾಕರ ರಸ್ತೆ (ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಿಂದ ಎಂ.ಜಿ.ರಸ್ತೆ), ಸಿವಿಲ್ ನ್ಯಾಯಾಲಯದ ರಸ್ತೆ (ಗ್ರೀನ್‌ಸ್ಟ್ರೀಟ್‌ನಿಂದ ಕಾರವಾರ ಕೋಡಿಬಾಗ ರಸ್ತೆ), ಪಿಕಳೆ ರಸ್ತೆ (ರಾಷ್ಟ್ರೀಯ ಹೆದ್ದಾರಿಯಿಂದ ಎಂ.ಜಿ.ರಸ್ತೆ), ಗ್ರೀನ್‌ಸ್ಟ್ರೀಟ್ (ನಗರ ಪೊಲೀಸ್ ಠಾಣೆಯಿಂದ ಹೊಸ ಮೀನು ಮಾರುಕಟ್ಟೆ) ಪ್ರದೇಶಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲು ವರದಿಯಲ್ಲಿ ಸಲಹೆ ನೀಡಲಾಗಿತ್ತು.

ಗಾಂಧಿ ಮಾರುಕಟ್ಟೆಯ ಒಳಗಿನ ರಸ್ತೆ ಮತ್ತು ಧೋಬಿಘಾಟ್‌ ರಸ್ತೆಯ ಹೈಚರ್ಚ್‌ನಿಂದ ಕಾರವಾರ ಕೋಡಿಭಾಗ ರಸ್ತೆಯವರೆಗೆ ಮಾತ್ರ ಸರಕು ಸಾಮಗ್ರಿ ತುಂಬಿಸುವುದು ಹಾಗೂ ಇಳಿಸುವುದು ಮಾಡಬಹುದು ಎಂದೂ ಹೇಳಲಾಗಿತ್ತು.

‘ಶೀಘ್ರವೇ ಸಭೆ ಕರೆದು ನಿರ್ಧಾರ’:‘ಕಾರವಾರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ಸಂಬಂಧ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಸಭೆಯನ್ನು ಶೀಘ್ರವೇ ಕರೆಯಲಾಗುವುದು. ನಗರಸಭೆಯಿಂದ ಈ ಹಿಂದೆ ಸಲ್ಲಿಕೆಯಾಗಿದ್ದ ಪ್ರಸ್ತಾವವನ್ನು ಪರಿಶೀಲಿಸಲಾಗುವುದು. ಸಮಿತಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೂಡ ಇದ್ದಾರೆ. ಅವರೊಂದಿಗೂ ಚರ್ಚಿಸಿ ನಗರದ ಸಂಚಾರ ಸಮಸ್ಯೆಯನ್ನು ಬಗೆಹರಿಸಲಾಗುವುದು’ ಎಂದು ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT