ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ್ಲಿಕಲ್ಲಿನ ಮೇಲೆ ಆತಂಕದ ಸವಾರಿ

ಜೊಯಿಡಾದಲ್ಲಿ ಒಂಬತ್ತು ತಿಂಗಳಾದರೂ ಪೂರ್ಣಗೊಳ್ಳದ ರಸ್ತೆ ಕಾಮಗಾರಿ
Last Updated 14 ಡಿಸೆಂಬರ್ 2018, 12:51 IST
ಅಕ್ಷರ ಗಾತ್ರ

ಕಾರವಾರ: ಜೊಯಿಡಾದ ಬಸ್ ನಿಲ್ದಾಣದಿಂದ ತಾಲ್ಲೂಕು ಕ್ರೀಡಾಂಗಣದತ್ತ ಸಾಗುವ ರಸ್ತೆಯ ಡಾಂಬರೀಕರಣಕ್ಕೆ ಚಾಲನೆ ನೀಡಿ ಒಂಬತ್ತು ತಿಂಗಳಾದರೂಕಾಮಗಾರಿ ಪೂರ್ಣಗೊಂಡಿಲ್ಲ.ಸುಮಾರುಒಂದು ಕಿ.ಮೀ ಉದ್ದವಿರುವ ರಸ್ತೆ ಮೇಲ್ದರ್ಜೆಗೇರಲು ವಿಳಂಬವಾಗಿರುವುದಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ರಸ್ತೆಯಲ್ಲಿ ಜನರು ನಡೆದುಕೊಂಡು ಹೋಗಲೂ ಪರದಾಡುವಂತಾಗಿದೆ. ಒಂದಷ್ಟು ಕಡೆ ಬಾಕ್ಸ್ ಚರಂಡಿ ನಿರ್ಮಾಣ ಮತ್ತು ಜಲ್ಲಿಕಲ್ಲು ಹಾಕಿದ್ದು ಬಿಟ್ಟರೆ ಕಾಮಗಾರಿಯಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಇದರಿಂದ ವಾಹನ ಸಂಚಾರಕ್ಕೆ ಬಹಳ ತೊಂದರೆಯಾಗುತ್ತಿದೆ ಎಂದುಕಾಳಿ ಬ್ರಿಗೇಡ್‌ನ ಮುಖ್ಯ ಸಂಚಾಲಕ ರವಿ ರೇಡ್ಕರ್ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ವಿಧಾನಸಭೆ ಚುನಾವಣೆಗೂ ಮೊದಲೇ ಈ ಕಾಮಗಾರಿಗೆ ಚಾಲನೆ ನೀಡಿದ್ದರು. ಆಗ ಜಲ್ಲಿಕಲ್ಲು ಅಳವಡಿಸಿ ಬಿಡಲಾಗಿತ್ತು. ಈಗ ಮತ್ತೆ ಅದೇ ಕಾಮಗಾರಿ ಮಾಡಲಾಗುತ್ತಿದೆ. ಕೆಡಿಪಿ ಸಭೆಗೆ ಸಚಿವರು ಬರುತ್ತಾರೆ ಎಂದು ಒಂದಷ್ಟು ಕೆಲಸ ಮಾಡಲಾಗಿತ್ತು. ಆದರೆ, ಬಳಿಕ ಮುಂದುವರಿಯಲಿಲ್ಲ ಎಂದು ಅವರು ಹೇಳಿದರು.

ಪ್ರಮುಖ ರಸ್ತೆ:ಜೊಯಿಡಾದ ಬಸ್ ನಿಲ್ದಾಣದ ರಸ್ತೆಯಿಂದ ಆರಂಭವಾಗುವ ಈ ರಸ್ತೆಯಲ್ಲಿ ನಿತ್ಯವೂ ನೂರಾರು ವಾಹನಗಳು ಓಡಾಡುತ್ತವೆ. ದುರ್ಗಾದೇವಿ ದೇವಸ್ಥಾನ, ಸರ್ಕಾರಿಆಸ್ಪತ್ರೆ, ಪದವಿ ಕಾಲೇಜು, ಪೊಲೀಸ್ ಠಾಣೆ,ಬಾಲಕಮತ್ತುಬಾಲಕಿಯರ ವಸತಿ ನಿಲಯ, ಶ್ರೀರಾಮ ಪ್ರೌಢಶಾಲೆ, ಪ್ರಾಥಮಿಕ ಶಾಲೆಗಳು ಈ ರಸ್ತೆಯ ಅಂಚಿನಲ್ಲಿವೆ.

ಇದೇ ರಸ್ತೆಯಲ್ಲಿರುವ ನಿರ್ಮಾಣಹಂತದಲ್ಲಿರುವ 100 ಹಾಸಿಗೆಯ ಆಸ್ಪತ್ರೆಯ ಉದ್ಘಾಟನೆಯೂ ಶೀಘ್ರವೇ ನೆರವೇರಲಿದೆ. ಹೊಸದಾಗಿ ನಿರ್ಮಾಣವಾಗಿರುವ ಜಾನಪದ ವಿಶ್ವವಿದ್ಯಾಲಯ, ತಾಲ್ಲೂಕುಕ್ರೀಡಾಂಗಣಕ್ಕೂ ಇದೇ ರಸ್ತೆಯಲ್ಲಿ ಸಾಗಬೇಕು.

ಈ ಎಲ್ಲ ಪ್ರಮುಖ ಕಚೇರಿಗಳು, ಸ್ಥಳಗಳನ್ನು ಸಂಪರ್ಕಿಸುವ ರಸ್ತೆಯನ್ನು ಡಾಂಬರೀಕರಣ ಮಾಡಲು ಇಷ್ಟೊಂದು ಸಮಯ ಬೇಕೇ ಎನ್ನುವ ಪ್ರಶ್ನೆ ಸ್ಥಳೀಯ ಮುಖಂಡ ಗಿರೀಶ್ ಅವರದ್ದು.

ಮಾರ್ಚ್‌ನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮೊದಲು ಚರಂಡಿ ಕಾಮಗಾರಿ ನಡೆಸಿದರು. ಇನ್ನೇನು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು ಎಂದುಕೊಳ್ಳುವಷ್ಟರಲ್ಲಿ ನಿಲ್ಲಿಸಿದರು. ಜಲ್ಲಿಕಲ್ಲು ಕಡಿ ಹಾಕಿ ಬಿಟ್ಟಿರುವ ಕಾರಣ ದ್ವಿಚಕ್ರ ವಾಹನಗಳ ಸವಾರರು ಆತಂಕದಲ್ಲೇ ಅದರ ಮೇಲೆ ಸಾಗಬೇಕಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

‘15 ದಿನದಲ್ಲಿ ಪೂರ್ಣ’:‘₹ 1.20 ಕೋಟಿ ವೆಚ್ಚದ ಈ ಕಾಮಗಾರಿ ಮುಂದುವರಿಸಲು ಮಳೆ ಅಡ್ಡಿಯಾಯಿತು. ನಡುವೆ ಚುನಾವಣಾ ನೀತಿ ಸಂಹಿತೆಯೂ ಜಾರಿಯಾಗಿ ವಿಳಂಬವಾಯಿತು’ ಎನ್ನುತ್ತಾರೆಲೋಕೋಪಯೋಗಿ ಇಲಾಖೆಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉದಯ ಛಬ್ಬಿ.

ಇನ್ನು 15 ದಿನಗಳ ಒಳಗೆ ಕಾಮಗಾರಿ ಮುಕ್ತಾಯಗೊಳಿಸಲಾಗುವುದು ಎಂದೂ ಅವರು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT