ಮಂಗಳವಾರ, ಸೆಪ್ಟೆಂಬರ್ 21, 2021
20 °C
ಹೊಂಡಗಳ ರಾಶಿ ತುಂಬಿದ ರಸ್ತೆಯಲ್ಲಿ ಹೆಚ್ಚುತ್ತಿರುವ ವಾಹನ ಓಡಾಟ

ಶಿರಸಿ: ಸಂಕಟ ತರುವ ಹೆದ್ದಾರಿ ಸಂಚಾರ

ಗಣಪತಿ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಭೂಕುಸಿತದ ಪರಿಣಾಮ ಯಲ್ಲಾಪುರ, ಜೋಯಿಡಾ ಭಾಗದ ರಸ್ತೆಗಳ ಸಂಚಾರ ಸ್ಥಗಿತಗೊಂಡಿದ್ದು, ಕಾಮಗಾರಿ ಪ್ರಗತಿಯಲ್ಲಿರುವ ಶಿರಸಿ–ಕುಮಟಾ ರಸ್ತೆಯ ಮೇಲೆ ಹೆಚ್ಚಿನ ಸಂಚಾರದ ಒತ್ತಡ ಬೀಳುತ್ತಿದೆ.

ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ (ಎನ್.ಎಚ್.–766ಇ) ಮೇಲ್ದರ್ಜೆಗೇರಿದ  ಕಾಮಗಾರಿ ಕುಂಟುತ್ತ ಸಾಗಿದೆ. ಅಬ್ಬರದ ಮಳೆಗೆ ರಸ್ತೆಯ ತುಂಬೆಲ್ಲ ಹೊಂಡಗಳ ಸೃಷ್ಟಿಯಾಗಿದೆ.‌ ಕರಾವಳಿ ಸಂಪರ್ಕಿಸಲು ಹುಬ್ಬಳ್ಳಿ, ಘಟ್ಟದ ಮೇಲಿನ ಇತರ ತಾಲ್ಲೂಕಿಗೆ ಸದ್ಯ ಇದೊಂದೆ ಮಾರ್ಗವಾಗಿದೆ.

ಅರೆಬರೆ ಕೆಲಸ ನಡೆದಿರುವ ಈ ಮಾರ್ಗದಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರ ಕಷ್ಟವಾಗುತ್ತಿದೆ. ೆರಡು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ಶಿರಸಿಮಕ್ಕಿ, ಹಾರುಗಾರ ಬಳಿ ನೀರು ತುಂಬಿಕೊಂಡಿದ್ದವು. ರಸ್ತೆಯಲ್ಲಿ ಅಲ್ಲಲ್ಲಿ ವಾಹನಗಳು ಹೂತುಬೀಳುವ ಆತಂಕವಿದೆ. ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಕೆಲಸ ಆರಂಭಿಸಲಾಗಿದ್ದು ಮಳೆಯ ಕಾರಣ ಸ್ಥಗಿತಗೊಳಿಸಲಾಗಿದೆ. ಒಂದು ಪಕ್ಕ ಜಲ್ಲಿ ಹಾಸಿಡಲಾಗಿದ್ದು ಅಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಇನ್ನೊಂದು ಪಕ್ಕದ ರಸ್ತೆಯ ಕೆಸರು ಗದ್ದೆಯಂತಾಗಿದೆ.

ಹೆಗಡೆಕಟ್ಟಾ ಕ್ರಾಸ್‍ನಿಂದ ಹಾರುಗಾರ ವರೆಗೆ ಸುಮಾರು ಐದು ಕಿ.ಮೀ. ಉದ್ದದಷ್ಟು ರಸ್ತೆಯಲ್ಲಿ ಸಾವಿರಾರು ಹೊಂಡಗಳಿದ್ದು ಮಳೆನೀರು ತುಂಬಿಕೊಂಡಿದೆ. ರಸ್ತೆ ಹುಡುಕಿ ಸಾಗಬೇಕಾದ ಸವಾಲು ಸವಾರರ ಮುಂದಿದೆ.

‘ಮೂರು ವರ್ಷಗಳಿಂದಲೂ ಹೊಸ ರಸ್ತೆ ನಿರ್ಮಾಣದ ಚರ್ಚೆ ನಡೆಯುತ್ತಿತ್ತು. ರಸ್ತೆ ನಿರ್ಮಾಣಕ್ಕೆ ಎದುರಾಗಿದ್ದ ಅಡ್ಡಿ ಆತಂಕಗಳ ನಡುವೆ ಕೆಲಸ ಆರಂಭಗೊಂಡಿದ್ದು ಆಶಾದಾಯಕ ಬೆಳವಣಿಗೆಯಾಗಿದೆ. ಆದರೆ, ಜನರಿಗೆ ತೊಂದರೆಯಾಗುವಂತೆ ಮಳೆಗಾಲಕ್ಕೆ ಕೆಲ ದಿನ ಮೊದಲು ಅರೆಬರೆ ಕೆಲಸ ಮಾಡಿಟ್ಟಿದ್ದು ತೊಂದರೆಯಾಗಿದೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಪ್ರವೀಣ ಗೌಡರ್ ತೆಪ್ಪಾರ.

‘ಜನರ ಸಂಕಟ ಜನಪ್ರತಿನಿಧಿಗಳಿಗೆ ಅರ್ಥವಾಗುತ್ತಿಲ್ಲ. ರಸ್ತೆ ಕೆಲಸ ತ್ವರಿತವಾಗಿ ಮುಗಿಸಲು ಇಚ್ಛಾಶಕ್ತಿ ಪ್ರದರ್ಶಿಸುವುದನ್ನು ಬಿಟ್ಟು ಅನಗತ್ಯ ಕಾಲಹರಣ ಮಾಡಲಾಗಿದೆ. ಮೇಲ್ದರ್ಜೆಗೇರಿದ ರಸ್ತೆಯನ್ನು ಸಂಚಾರಕ್ಕೆ ಯೋಗ್ಯವಲ್ಲದಂತೆ ಮಾಡಿಟ್ಟಿದ್ದು ತಪ್ಪು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಹದಿನೈದಕ್ಕೂ ಕಾರ್ಮಿಕರು ಲಭ್ಯವಿದ್ದಾರೆ. ಮಳೆ ವಿಪರೀತವಿದ್ದ ಕಾರಣ ಅವರಿಗೆ ಕೆಲಸ ಮಾಡಲಾಗುತ್ತಿಲ್ಲ. ಮಳೆ ಪ್ರಮಾಣ ಕಡಿಮೆಯಾದ ತಕ್ಷಣ ಕಾಮಗಾರಿ ಆರಂಭಿಸುತ್ತೇವೆ’ ಎಂದು ಆರ್.ಎನ್.ಎಸ್.ಇನ್‍ಫ್ರಾಸ್ಟ್ರಕ್ಚರ್ ಸಂಸ್ಥೆಯ ಹೈವೆ ಎಂಜಿನಿಯರ್ ಗೋವಿಂದ ಭಟ್ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.