ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಕ್ಕೆ ತಡಕಾಡಿದ ಯುವ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ಬಸವನಗೌಡ ಬಾದರ್ಲಿ!

ಯುವ ಕಾಂಗ್ರೆಸ್ ಘಟಕದಿಂದ ಯುವ ಜನರೊಂದಿಗೆ ಮುಖಾಮುಖಿ
Last Updated 10 ಜನವರಿ 2019, 13:34 IST
ಅಕ್ಷರ ಗಾತ್ರ

ಶಿರಸಿ: ದೇಶದ ಆರ್ಥಿಕ, ಸಾಮಾಜಿಕ ಸ್ಥಿತಿಗತಿ, ಪ್ರಸ್ತುತ ಸಮಸ್ಯೆ ಕುರಿತು ಚರ್ಚಿಸಲು ಯುವ ಕಾಂಗ್ರೆಸ್ ಘಟಕ ಇಲ್ಲಿ ಗುರುವಾರ ಆಯೋಜಿಸಿದ್ದ ಮುಖಾಮುಖಿ ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ಬಸವನಗೌಡ ಬಾದರ್ಲಿ ಅವರು ಸಭಿಕರ ಪ್ರಶ್ನೆಗಳಿಗೆ ಉತ್ತರಿಸಲು ತಡಕಾಡುವಂತಾಯಿತು.

‘ಇದೊಂದು ಪಕ್ಷಾತೀತ ಕಾರ್ಯಕ್ರಮ’ ಎನ್ನುತ್ತ ಮಾತಿಗಾರಂಭಿಸಿದ, ಬಸವನಗೌಡ ಅವರು, ಬಿಜೆಪಿ ವಿರುದ್ಧ ಮಾತಿಗಾರಂಭಿಸಿದರು. ಸಂವಾದದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಎದ್ದು ನಿಂತು, ‘ಸಾಕಷ್ಟು ಯುವ ಜನರು ಶಿಕ್ಷಣ ಪಡೆಯುತ್ತಿದ್ದಾರೆ. ಭವಿಷ್ಯದಲ್ಲಿ ಉದ್ಯೋಗ ಸೃಷ್ಟಿಯಾಗಬೇಕು. ಈ ಹಿನ್ನೆಲೆಯಲ್ಲಿ ನಿರುದ್ಯೋಗ ಸಮಸ್ಯೆ ಹೇಗೆ ನಿವಾರಿಸುತ್ತೀರಿ’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಸವನಗೌಡ, ‘ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿತ್ತು. ಈವರೆಗೆ ಸುಮಾರು ಒಂಬತ್ತು ಕೋಟಿಯಷ್ಟು ಉದ್ಯೋಗ ಸೃಷ್ಟಿಯಾಗಬೇಕಾಗಿತ್ತು. ಆದರೆ, ಈವರೆಗೆ ಹೇಳಿದ ಭರವಸೆ ಈಡೇರಿಲ್ಲ. ಒಂದೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೇರಿದರೆ ನಿಶ್ಚಿತವಾಗಿ ನಿರುದ್ಯೋಗ ದೂರ ಮಾಡುತ್ತದೆ’ ಎಂದರು. ಮರು ಪ್ರಶ್ನಿಸಿದ ವಿದ್ಯಾರ್ಥಿಗಳು, ‘ದೇಶದ ಎಲ್ಲ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಇದನ್ನು ಯಾವ ರೀತಿ ನಿಯಂತ್ರಿಸುತ್ತೀರಿ? ಮೇಲ್ವರ್ಗದ ಬಡವರಿಗೆ ಸಿಗದ ಮೀಸಲಾತಿಯನ್ನು ಹೇಗೆ ಕೊಡಿಸುತ್ತೀರಿ? 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ದೇಶಕ್ಕೆ ಏನು ಮಾಡಿದೆ’ ಎಂದರು.

ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಸಂದೀಪ ವಾಲ್ಮೀಕಿ ಮಾತನಾಡಿ, ‘ದೇಶದ ಜಾತ್ಯತೀತ ನಿಲುವಿಗೆ ಧಕ್ಕೆಯಾಗುತ್ತಿದೆ. ಯುವ ಪೀಳಿಗೆ ಎಚ್ಚರಿಕೆ ವಹಿಸಬೇಕು. ಧರ್ಮ, ದೇವಾಲಯಗಳ ಮಾತು ಹೆಚ್ಚಿದೆ. ಕೃಷಿಕರ ಏಳ್ಗೆಯ ಬಗ್ಗೆ ಯೋಚನೆ ಇಲ್ಲದಾಗಿದೆ’ ಎಂದರು.

ಪಕ್ಷದ ಪ್ರಮುಖರಾದ ಮಾಲತೇಶ ಗೌಡ, ದ್ಯಾಮಣ್ಣ ದೊಡ್ಮನಿ, ಬಸವರಾಜ ದೊಡ್ಮನಿ, ಪ್ರದೀಪ ಶೆಟ್ಟಿ, ವಸಂತ ನಾಯ್ಕ ಇದ್ದರು. ಯೂತ್ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ ಶೆಟ್ಟಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT