ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾವರ: ಕಾಡು, ನದಿಯಂಚಿನ ಗ್ರಾಮ ಜನಕಡ್ಕಲ್

ಹೊನ್ನಾವರ ತಾಲ್ಲೂಕಿನ ಚಿಕ್ಕನಕೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶ
Last Updated 26 ಜುಲೈ 2022, 19:30 IST
ಅಕ್ಷರ ಗಾತ್ರ

ಹೊನ್ನಾವರ: ಚಿಕ್ಕನಕೋಡವು ಗುಡ್ಡಗಾಡುಗಳನ್ನು ಹೊಂದಿರುವ ಗ್ರಾಮ. ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ಇದರ ನಡುವೆ ‘ನೆರೆ ನದಿ’ ಎಂದೇ ಕುಖ್ಯಾತಿ ಪಡೆದಿರುವ ಗುಂಡಬಾಳಾ ನದಿ ಹರಿಯುತ್ತದೆ. ನದಿ ಹಾಗೂ ಕಾಡು ಇವೆರಡರ ಸಾಂಗತ್ಯವನ್ನೂ ಹೊಂದಿರುವ ಗ್ರಾಮಸ್ಥರು, ಆಧುನಿಕ ಸೌಲಭ್ಯಗಳನ್ನು ಹೊಂದಿದ್ದಾರೆ. ಜೊತೆಗೆ ಹಲವು ಕೊರತೆಗಳನ್ನೂ ಅನುಭವಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನಕಡ್ಕಲ್ ಕುಗ್ರಾಮಗಳ ಪಟ್ಟಿಯಲ್ಲಿರುವ ಗ್ರಾಮಗಳಲ್ಲೊಂದು.

ಜನಕಡ್ಕಲ್ ಗ್ರಾಮದಲ್ಲಿ ಮೂಲ ನಿವಾಸಿಗಳಿಗಿಂತ ಹೊರಗಿನಿಂದ ಬಂದು ನೆಲೆಸಿದವರೇ ಬಹುಸಂಖ್ಯಾತರು. ಕೆಲವರು ಮಾಲ್ಕಿ ಜಮೀನು ಖರೀದಿಸಿ ಅಲ್ಲಿ ನೆಲೆಸಿದ್ದಾರೆ. ಅದರ ಸುತ್ತ ಹತ್ತಾರು ಎಕರೆಗಳಷ್ಟು ಅತಿಕ್ರಮಿಸಿದವರೂ ಇದ್ದಾರೆ. ಗ್ರಾಮದ ಹಲವೆಡೆ ಜನ ಕಾಡು ಕಡಿದು ಅಡಿಕೆ ತೋಟ ಮಾಡಿಕೊಂಡಿದ್ದಾರೆ. ತಾವು ಅತಿಕ್ರಮಿಸಿರುವ ಅರಣ್ಯ ಜಾಗ ತಮಗೆ ಮಂಜೂರಾಗುವುದು ಯಾವಾಗ ಎಂಬ ಯಕ್ಷ ಪ್ರಶ್ನೆ ಇವರನ್ನು ಕಾಡುತ್ತಿದೆ.

‘ಇಡಗುಂಜಿಯಿಂದ ಇಲ್ಲಿಗೆ ಬಂದಿರುವ ನಾವು, ತೋಟ ಮಾಡಿಕೊಂಡಿದ್ದೇವೆ. ನಾವು ಮೂವರು ಸಹೋದರರು ಸೇರಿ 6 ಎಕರೆ ಜಮೀನು ಮಂಜೂರಿಗೆ ಅರ್ಜಿ ಸಲ್ಲಿಸಿದ್ದೇವೆ. ಜಮೀನಿನಿನ ಪಟ್ಟಾ ನಮಗೆ ಸಿಕ್ಕಿಲ್ಲ’ ಎಂದು ಲಕ್ಷ್ಮಣ ನಾಯ್ಕ ಹೇಳಿದರು.

ಭೌಗೋಳಿಕವಾಗಿ ಸಾಕಷ್ಟು ವಿಸ್ತೀರ್ಣವಾಗಿರುವ ಚಿಕ್ಕನಕೋಡ ಗ್ರಾಮದಲ್ಲಿ 7,500 ಜನಸಂಖ್ಯೆಯಿದೆ. ನದಿಯ ಇಕ್ಕೆಲಗಳಲ್ಲಿರುವ ಜನಕಡ್ಕಲ್ ಹಾಗೂ ಹಿರೇಬೈಲ್ ಗ್ರಾಮಸ್ಥರು, ತಮ್ಮ ಕೆಲಸಗಳಿಗೆ ಗುಂಡಿಬೈಲ್‌ನಲ್ಲಿರುವ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಬರಬೇಕೆಂದರೆ ಬಹು ದೂರ ದಾರಿ ಸವೆಸಬೇಕಿದೆ.

ಹಿರೇಬೈಲ್‍ನಲ್ಲಿ ಆಯುಷ್ ಇಲಾಖೆಯ ಆಯುರ್ವೇದ ಡಿಸ್ಪೆನ್ಸರಿಯೊಂದಿದೆ. ರಾತ್ರಿ ವೇಳೆ ತೀವ್ರ ಅನಾರೋಗ್ಯ ಕಾಡಿದರೆ ಮಾತ್ರ ಇಲ್ಲಿನ ಜನರ ಸಂಕಷ್ಟ ಹೇಳತೀರದು. ಮೊಬೈಲ್ ನೆಟ್‌ವರ್ಕ್ ಕೂಡ ಸರಿಯಾಗಿ ಇಲ್ಲದ ಕಾರಣ ಕಾಯಿಲೆ ಪೀಡಿತರಿಗೆ ತುರ್ತು ಚಿಕಿತ್ಸೆ ಕೊಡಿಸುವುದು ತೀರ ದುಸ್ತರವಾಗಿದೆ.

‘ಅಮೃತ ಗ್ರಾಮ ಪಂಚಾಯಿತಿಯೆಂದು ಚಿಕ್ಕನಕೋಡವನ್ನು ಆಯ್ಕೆ ಮಾಡಲಾಗಿದೆ. ಇದರಡಿಯಲ್ಲಿ ₹ 25 ಲಕ್ಷ ಅನುದಾನ ನಿರೀಕ್ಷಿಸಲಾಗಿದೆ. ಪಂಚಾಯಿತಿ ವ್ಯಾಪ್ತಿಯ ಎಲ್ಲ ಐದು ಗ್ರಾಮಗಳನ್ನು ಗಣನೆಗೆ ತೆಗೆದುಕೊಂಡು ಕ್ರಿಯಾಯೋಜನೆ ರೂಪಿಸಲಾಗುತ್ತದೆ’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಾಬುರಾಯ ನಾಯ್ಕ ಪ್ರತಿಕ್ರಿಯಿಸಿದರು.

ಸೇತುವೆಗೆ ಬೇಕು ಅನುದಾನ:

ಕುಗ್ರಾಮವಾದರೂ ಇಲ್ಲಿ ಡಾಂಬರು, ಕಾಂಕ್ರೀಟ್‍ನಿಂದ ನಿರ್ಮಾಣ ಮಾಡಿದ ರಸ್ತೆ ಸಂಪರ್ಕ ಉತ್ತಮವಾಗಿದೆ. ಆದರೆ, ಸೇತುವೆಯ ಸಮಸ್ಯೆಯಿದೆ.

‘ರಸ್ತೆ ನಿರ್ಮಾಣಕ್ಕೆ ಧಾರಾಳಿಯಾಗಿ ಹಣ ನೀಡಿರುವ ಶಾಸಕರು, ಇಲ್ಲಿಗೆ ಅತ್ಯಗತ್ಯವಾದ ದೊಡ್ಡ ಸೇತುವೆ ನಿರ್ಮಾಣಕ್ಕೆ ಗಮನ ಹರಿಸಿಲ್ಲ’ ಎಂದು ಗ್ರಾಮದ ವೆಂಕಟೇಶ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು.

ಮಾರ್ಗರೆಟ್ ಆಳ್ವಾ ಸಂಸದರಾಗಿದ್ದ ಕಾಲದಲ್ಲಿ ಗುಂಡಬಾಳ ನದಿಗೆ ಅಡ್ಡಲಾಗಿ ಮೂರು ಕಾಲುಸಂಕಗಳ ನಿರ್ಮಾಣವಾಗಿತ್ತು. ಮಳೆಗಾಲದಲ್ಲಿ ಇವುಗಳಲ್ಲೇ ದ್ವಿಚಕ್ರ ವಾಹನ ಸವಾರರು ಹೆಣಗಾಡುತ್ತ ಸಾಗಬೇಕಿದೆ.

ಬೇಸಿಗೆಯಲ್ಲಿ ನದಿಯಲ್ಲಿ ನೀರು ಒಣಗುವುದರಿಂದ ದೊಡ್ಡ ವಾಹನಗಳಿಗೆ ಅದೇ ರಸ್ತೆಯಾಗುತ್ತದೆ. ಆದರೆ ಮಳೆಗಾಲದಲ್ಲಿ ಮಾತ್ರ ಜನರಿಗೆ ಸಾಮಾನು ಸರಂಜಾಮುಗಳನ್ನು ಸಾಗಿಸಬೇಕೆಂದರೆ ಹತ್ತಾರು ಕಿಲೋಮೀಟರ್ ದೂರ ಸುತ್ತಿ ಬಳಸಿ ಸಾಗಬೇಕಿರುವುದು ಅನಿವಾರ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT