ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನವಾಸಿ ನೆಲದಲ್ಲಿ ಇಸ್ರೇಲ್ ಮಾದರಿ ಕೃಷಿ

ವರದಾ ನದಿ ತಟದ ರೈತರಿಗೆ ಆಪ್ತವಾಗುತ್ತಿರುವ ಕಲ್ಲಂಗಡಿ
Last Updated 6 ಮಾರ್ಚ್ 2022, 16:42 IST
ಅಕ್ಷರ ಗಾತ್ರ

ಶಿರಸಿ: ಕರಾವಳಿಯ ಭಾಗದಲ್ಲಿ ಹೆಚ್ಚು ಬೆಳೆಯಲಾಗುವ ಕಲ್ಲಂಗಡಿ ಈಗ ತಾಲ್ಲೂಕಿನ ಬನವಾಸಿ ಭಾಗದಲ್ಲೂ ತನ್ನ ಪ್ರದೇಶ ವಿಸ್ತರಿಸಿಕೊಳ್ಳುತ್ತಿದೆ. ಕಡಿಮೆ ನೀರಿನಲ್ಲಿ ಬೆಳೆ ತೆಗೆಯುವ ಇಸ್ರೇಲ್ ಮಾದರಿ ಕೃಷಿ ಹೆಚ್ಚು ಜನಪ್ರೀಯವಾಗುತ್ತಿದೆ.

ಬನವಾಸಿ, ಭಾಶಿ, ತಿಗಣೆ, ಕಡಗೋಡ ಭಾಗದ ಜನರ ಪಾಲಿನ ಜೀವನದಿ ವರದಾ ಕಲ್ಲಂಗಡಿ ಬೆಳೆಗಾರರ ಕೈಹಿಡಿಯುತ್ತಿದೆ. ಕಳೆದ ಎರಡು, ಮೂರು ವರ್ಷಗಳಿಂದ ಬೇಸಿಗೆ ಅವಧಿಯಲ್ಲೂ ನೀರು ಹರಿಯುತ್ತಿರುವುದರಿಂದ ರೈತರು ಕಲ್ಲಂಗಡಿ ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ.

ನೀರು ಕಡಿಮೆ ಇದ್ದರೂ ಬಳ್ಳಿ ಹಸಿರಾಗಿಸಲು ಇಸ್ರೇಲ್ ಮಾದರಿ ಕೃಷಿ ಅನುಸರಿಸಲಾಗುತ್ತಿದೆ. ಕಲ್ಲಂಗಡಿ ಬೀಜ ಬಿತ್ತನೆ ಮಾಡಿದ ಸಾಲುಗಳ ನಡುವೆ ಅಂತರ ಕಾಯ್ದುಕೊಳ್ಳುತ್ತಾರೆ. ಬೀಜ ಬಿತ್ತನೆಯಾದ ಮಣ್ಣಿನ ದಿಬ್ಬದ ಮೇಲೆ ತೆಳುವಾದ ಪ್ಲಾಸ್ಟಿಕ್ ಹೊದಿಕೆ (ಮಲ್ಚಿಂಗ್) ಅಳವಡಿಸುತ್ತಾರೆ. ಇದರಿಂದ ಸ್ವಲ್ಪ ನೀರು ಸಿಕ್ಕರೂ ಇಡೀ ದಿನ ತೇವಾಂಶ ಕಾಯ್ದಿಟ್ಟುಕೊಳ್ಳಬಹುದಾಗಿದೆ. ಬಳ್ಳಿಗಳನ್ನು ರೋಗದಿಂದ ದೂರ ಮಾಡಲು ಅಗತ್ಯ ಔಷಧಗಳನ್ನು ದಿಬ್ಬಕ್ಕೆ ಅಳವಡಿಸಲಾದ ಹನಿನೀರಾವರಿ ಪೈಪ್‌ಗಳ ಮೂಲಕ ನೀಡಲಾಗುತ್ತದೆ.

‘ಮಲ್ಚಿಂಗ್ ಮಾಡಿಸಲು ಪ್ರತಿ ಎಕರೆಗೆ ₹6,400 ಸಹಾಯಧನ ಮತ್ತು ಕಲ್ಲಂಗಡಿ ಬೆಳೆಯಲು ಎಕರೆಗೆ ₹8 ಸಾವಿರ ಪ್ರೋತ್ಸಾಹಧನ ಒದಗಿಸುತ್ತಿದ್ದೇವೆ. ಹೀಗಾಗಿ ಹೆಚ್ಚಿನ ರೈತರು ಆಸಕ್ತಿ ವಹಿಸಿದ್ದಾರೆ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಗಣೇಶ್ ಹೆಗಡೆ.

‘ನೀರಿನ ಕೊರತೆಯಿಂದ ಬೇಸಿಗೆಯಲ್ಲಿ ಬನವಾಸಿ ಭಾಗದ ರೈತರಲ್ಲಿ ಕೃಷಿ ಮಾಡುವವರ ಸಂಖ್ಯೆ ಇಳಿಕೆಯಾಗಿತ್ತು. ಈಗ ನದಿಯಲ್ಲೂ ನೀರು ಇದೆ. ಕೆಲವು ನೀರಾವರಿ ಯೋಜನೆಗಳಿಂದಲೂ ನೀರು ಸಿಗುತ್ತಿರುವ ಕಾರಣ ಮಳೆಗಾಲದಲ್ಲಿ ಭತ್ತ, ಶುಂಠಿ ಬೆಳೆಯುತ್ತೇವೆ. ಬೇಸಿಗೆಯಲ್ಲಿ ಕಲ್ಲಂಗಡಿ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದೇವೆ’ ಎನ್ನುತ್ತಾರೆ ರೈತ ಶ್ರೀಧರ ಬಂಡೇರ.

‘ಕೋವಿಡ್ ಕಾರಣಕ್ಕೆ ಕಳೆದ ಎರಡು ವರ್ಷ ಉತ್ತಮ ದರ ಸಿಕ್ಕಿರಲಿಲ್ಲ. ಈ ಬಾರಿ ಕೆ.ಜಿಗೆ ಸರಾಸರಿ ₹12 ರಿಂದ ₹14 ದರವಿದೆ. ಪ್ರತಿ ಎಕರೆಗೆ ₹60 ಸಾವಿರ ಖರ್ಚು ಮಾಡಿದ್ದರೂ 20 ಟನ್ ಬೆಳೆಯಬಹುದು. ಇದರಿಂದ ₹2 ಲಕ್ಷದವರೆಗೆ ಆದಾಯ ಗಳಿಸಬಹುದು’ ಎಂಬುದು ಅವರ ಅಭಿಪ್ರಾಯ.

ಶಿರಸಿ ಜಾತ್ರೆಯಿಂದ ಅನುಕೂಲ:

‘ಎಕರೆಗೆ ₹50 ಸಾವಿರದಿಂದ ₹60 ಸಾವಿರ ಖರ್ಚು ಮಾಡಿ ಬೆಳೆಯುವ ಕಲ್ಲಂಗಡಿಗೆ ಕೆ.ಜಿಗೆ ಕನಿಷ್ಠ ₹10 ದರ ಲಭಿಸಿದರೆ ಲಾಭದಾಯಕ. ಆದರೆ ಕಳೆದ ಎರಡು ವರ್ಷದಿಂದ ಕೋವಿಡ್ ಕಾರಣಕ್ಕೆ ದರ ಕುಸಿದು ನಷ್ಟ ಉಂಟಾಗಿತ್ತು. ಕೆಲವು ಖರೀದಿದಾರರು ರೈತರಿಗೆ ಹಣ ನೀಡದೆ ವಂಚಿಸಿದ್ದರು. ಈ ಬಾರಿ ಅಂತಹ ಸ್ಥಿತಿ ಬಾರದು ಎಂಬ ನಂಬಿಕೆ ಇದೆ. ಶಿರಸಿ ಜಾತ್ರೆ ವೇಳೆಗೆ ಫಸಲು ಕೊಯ್ಲಿಗೆ ಬರಲಿದ್ದು, ಇಲ್ಲಿಯೇ ದೊಡ್ಡ ಮಾರುಕಟ್ಟೆ ಲಭಿಸಲಿದೆ. ಹೀಗಾಗಿ ಉತ್ತಮ ದರವೂ ಸಿಗುವ ವಿಶ್ವಾಸವಿದೆ’ ಎಂಬುದು ರೈತರಾದ ರಾಘವೇಂದ್ರ ಚೆನ್ನಯ್ಯ, ನಾಗರಾಜ ಕಲ್ಯಾಣಕರ ಅಭಿಪ್ರಾಯ.

-------

ನಾಲ್ಕು ವರ್ಷಗಳ ಹಿಂದೆ ಕೆಲವು ಪ್ರಗತಿಪರ ಕೃಷಿಕರು ಇಸ್ರೇಲ್ ಮಾದರಿ ಕೃಷಿ ಪದ್ಧತಿ ಮೂಲಕ ಕಲ್ಲಂಗಡಿ ಬೆಳೆಯಲು ಆರಂಭಿಸಿದ್ದರು. ಈಗ ಸಾಮಾನ್ಯ ರೈತರೂ ಆಸಕ್ತಿ ವಹಿಸಿದ್ದಾರೆ.

ಗಣೇಶ್ ಹೆಗಡೆ

ಸಹಾಯಕ ನಿರ್ದೇಶಕ, ತೋಟಗಾರಿಕಾ ಇಲಾಖೆ

----------

ಬನವಾಸಿ ಭಾಗದಲ್ಲಿ ಬೇರೆಯವರ ಜಮೀನು ಹೊಂದಿಲ್ಲದಿದ್ದರೂ ಬೇರೆಯವರ ಜಮೀನು ಗೇಣಿ ಪಡೆದು ಕಲ್ಲಂಗಡಿ ಕೃಷಿ ಮಾಡುವವರ ಸಂಖ್ಯೆ ಹೆಚ್ಚಿದೆ. ಅಂತಹವರಿಗೂ ಸರ್ಕಾರ ಅಗತ್ಯ ನೆರವು ಒದಗಿಸಬೇಕು.

-ಶ್ರೀಧರ ಬಂಡೇರ,ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT