ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲ್ಲಾಪುರ | ಅಂತರ್ಜಲ ಹೆಚ್ಚಿಸಿದ ‘ಬ್ರಹ್ಮೇತಿ’ ಕೆರೆ

ನಂದೊಳ್ಳಿ: ಗ್ರಾಮಸ್ಥರಿಂದ ಐತಿಹಾಸಿಕ ಜಲಮೂಲದ ಪುನರುಜ್ಜೀವನ
Last Updated 9 ಜೂನ್ 2020, 19:31 IST
ಅಕ್ಷರ ಗಾತ್ರ

ಯಲ್ಲಾಪುರ: ತಾಲ್ಲೂಕಿನನಂದೊಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾರಕುಂಕಿಯ ಪುರಾತನ ‘ಬ್ರಹ್ಮೇತಿ’ ಕೆರೆಯನ್ನು ಗ್ರಾಮಸ್ಥರೇ ಒಟ್ಟಾಗಿ ದುರಸ್ತಿ ಮಾಡಿದ್ದಾರೆ. ಅದರಲ್ಲಿ ಹೆಚ್ಚು ನೀರು ಇಂಗುವಂತೆ ಮಾಡಿ ಅಂತರ್ಜಲ ಕಾಪಾಡಲು ಮುಂದಾಗಿದ್ದಾರೆ.

ನಂದೊಳ್ಳಿ ಗ್ರಾಮದಅರಣ್ಯ ಸರ್ವೆ ನಂಬರ್ 108ರಲ್ಲಿರುವ ಈ ಕೆರೆಯು ಶತಮಾನಗಳಷ್ಟು ಹಳೆಯದಾಗಿದೆ. ನೂರಾರು ವರ್ಷಗಳ ಹಿಂದೆ ಸೋದೆಯನ್ನು ಆಳುತ್ತಿದ್ದ ನಂದ ಎನ್ನುವ ಅರಸ ನಿರ್ಮಿಸಿದ್ದ ಎಂದು ನಂಬಲಾಗಿದೆ. ಸುಮಾರು16 ಎಕರೆ ವಿಸ್ತೀರ್ಣದ ಈ ಕೆರೆಯು ನೂರಾರು ವರ್ಷಗಳಿಂದ ಹೂಳೆತ್ತದೇ ಮುಚ್ಚಿ ಹೋಗಿತ್ತು.

ವಿನಾಶದ ಅಂಚಿನಲ್ಲಿದ್ದ ಇದನ್ನು ಉಳಿಸಿಕೊಳ್ಳಬೇಕಾದರೆ ಹೂಳೆತ್ತುವುದು ಅನಿವಾರ್ಯವಾಗಿತ್ತು.ಈ ಬಗ್ಗೆ ಎಷ್ಟೇ ಮೊರೆ ಹೋದರೂ ಸರ್ಕಾರದಿಂದ ನಿರೀಕ್ಷಿತ ಅನುದಾನ ದೊರೆಯಲಿಲ್ಲ.ಕೊನೆಗೆಗ್ರಾಮಸ್ಥರೇ ಹೂಳೆತ್ತಲು ಮುಂದಾದರು. ನಾಲ್ಕು ವರ್ಷಗಳಿಂದ ದಾನಿಗಳ ನೆರವು ಪಡೆದು ಗ್ರಾಮಸ್ಥರೇ ಹೂಳೆತ್ತುವ ಕಾರ್ಯ ನಡೆಸುತ್ತಿದ್ದಾರೆ. ಆದರೂ 16ಎಕರೆ ವಿಸ್ತೀರ್ಣದ ಕೆರೆಯಲ್ಲಿ ಸುಮಾರು ಎರಡು ಎಕರೆಗಳಷ್ಟು ಮಾತ್ರ ಹೂಳೆತ್ತಲು ಸಾಧ್ಯವಾಗಿದೆ.

ಈ ವರ್ಷ ಹಣಕಾಸಿನ ತೊಂದರೆ ಹಾಗೂ ಮೇ ತಿಂಗಳಿನಲ್ಲಿ ಮಳೆ ಬಂದ ಕಾರಣ ಹೂಳೆತ್ತುವಸಾಧ್ಯವಾಗಲಿಲ್ಲ.

‘ಸರ್ಕಾರದ ಹೆಚ್ಚಿನ ಅನುದಾನ ದೊರೆತರೆಕೆರೆಯಿಂದ ಪ್ರವಾಸೋದ್ಯಮ ವನ್ನೂ ಬೆಳೆಸಬಹುದಾಗಿದೆ. ಕೋಟೆ ಗುಡ್ಡೆ ಎಂದೇ ಕರೆಯುವ ಈ ಪ್ರದೇಶದಲ್ಲಿ ಕೋಟೆಯ ಕುರುಹುಗಳಿವೆ.

ಸ್ವಲ್ಪ ದೂರದಲ್ಲಿ ಕುದುರೆ ಕೆರೆಯೆಂಬ ಸಣ್ಣ ಕೆರೆಯಿದೆ. ಕೆರೆಯ ಹೂಳು ತೆಗೆದು ಪುನರುಜ್ಜೀವನ ನಡೆಸುವ ಕಾರ್ಯವನ್ನು ನಾಲ್ಕು ವರ್ಷಗಳಿಂದ ಮಾಡುತ್ತಿದ್ದೇವೆ. ಹಿಂದಿನ ಕಾಮಗಾರಿಯ ಫಲವಾಗಿ ಸುತ್ತಮುತ್ತಲಿನ ಜಲಮೂಲಗಳಲ್ಲಿ ಅಂತರ್ಜಲ ಪ್ರಮಾಣ ಹೆಚ್ಚಿದೆ’ ಎನ್ನುತ್ತಾರೆ ಕಾರಕುಂಕಿಯ ಗ್ರಾಮಸ್ಥ ಗೋಪಾಲಕೃಷ್ಣ ಭಟ್ಟ.

‘ಗ್ರಾಮಸ್ಥರೇ ಸೇರಿ ಖರ್ಚು ವೆಚ್ಚ ಭರಿಸಿ ಹೂಳು ತೆಗೆಯುತ್ತಿದ್ದೆವು. ಸರ್ಕಾರದಿಂದ ಅಲ್ಪ ಪ್ರಮಾಣದ ನೆರವು ಬಿಟ್ಟರೆ ಬೇರೇನೂ ಅನುದಾನ ಸಿಕ್ಕಿಲ್ಲ. ಈ ಬಾರಿ ಆರ್ಥಿಕ ಸಮಸ್ಯೆಯಿಂದಲೇ ಕಾಮಗಾರಿಗೆ ಹಿನ್ನಡೆಯಾಗಿದೆ.

ಈ ಐತಿಹಾಸಿಕ ಕೆರೆಯ ಉಳಿವಿಗಾಗಿ ಸರ್ಕಾರ ನೆರವು ನೀಡಿದರೆ ಸುತ್ತಮುತ್ತಲಿನ ಜಮೀನಿಗೆ ನೀರುಣಿಸಬಹುದು. ಅಲ್ಲದೇ
ನೀರಿನ ಸಮಸ್ಯೆಗೂ ಪರಿಹಾರ ದೊರೆಯುತ್ತದೆ’ ಎನ್ನುತ್ತಾರೆ ಗ್ರಾಮಸ್ಥ ಜನಾರ್ದನ ಬೆಳ್ಳಿ.

₹ 20 ಲಕ್ಷ ವೆಚ್ಚ
ಕೇವಲ ಎರಡು ಎಕರೆ ಹೂಳೆತ್ತಿದರೂ ಈ ಕೆರೆಯಲ್ಲಿ ವರ್ಷವಿಡೀ ನೀರು ತುಂಬಿಕೊಂಡಿದೆ. ಸುತ್ತಮುತ್ತಲಿನ ನೂರಾರು ಎಕರೆ ತೋಟ, ಗದ್ದೆಗಳಿಗೆ ನೀರು ಪೂರೈಕೆ ಸಾಧ್ಯವಾಗಿದೆ. ಪೈಪ್‌ಲೈನ್ ಅಳವಡಿಸಿ ನೀರು ಪೂರೈಕೆ ಮಾಡಲಾಗುತ್ತಿದೆ. ಅಲ್ಲದೇ ಕಿಲೋಮೀಟರ್‌ಗಟ್ಟಲೆ ಸುತ್ತಳತೆಯಲ್ಲಿರುವ ಕೆರೆ, ಬಾವಿಗಳಲ್ಲಿ ವರ್ಷವಿಡೀ ನೀರು ಸಂಗ್ರಹವಿರಲು ಸಾಧ್ಯವಾಗಿದೆ. ಪಕ್ಷಿಗಳಿಗೆ, ಕಾಡು ಪ್ರಾಣಿಗಳ ದಾಹವನ್ನೂ ಈ ಕೆರೆ ನೀಗಿಸುತ್ತಿದೆ. ಸರ್ಕಾರದ ವಿವಿದ ನಿಧಿಗಳಿಂದಸ್ವಲ್ಪ ಮಟ್ಟಿನ ಹಣ ದೊರೆತಿರುವುದೂ ಸೇರಿದಂತೆ ಸುಮಾರು ₹ 20 ಲಕ್ಷ ಇದುವರೆಗೂ ವೆಚ್ಚವಾಗಿದೆ.

*
ಜಲಮೂಲದ ಅಭಿವೃದ್ಧಿಗೆ ಪ್ರಯತ್ನ ಶ್ಲಾಘನೀಯ. ಗ್ರಾ.ಪಂನಿಂದ ಅಲ್ಪ ಪ್ರಮಾಣದ ನೆರವು ನೀಡಲಾಗಿದೆ. ಸರ್ಕಾರ, ದಾನಿಗಳಿಂದ ಹೆಚ್ಚಿನ ಸಹಕಾರ ಅನಿವಾರ್ಯ.
-ಎಂ.ಎನ್.ಭಟ್ಟ, ಗ್ರಾ.ಪಂ. ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT