ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ನಿರ್ದೇಶಕರ ಬದಲಾವಣೆಗೆ ಆಗ್ರಹ: ಪ್ರತಿಭಟನೆ 28ಕ್ಕೆ

ವೈದ್ಯಕೀಯ ಕಾಲೇಜಿನಲ್ಲಿ ಭ್ರಷ್ಟಾಚಾರ: ಮಾಧವ ನಾಯಕ ಆರೋಪ
Last Updated 25 ಜೂನ್ 2019, 11:40 IST
ಅಕ್ಷರ ಗಾತ್ರ

ಕಾರವಾರ:‘ನಗರದ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ.ಶಿವಾನಂದ ದೊಡ್ಮನಿ ಹಲವು ರೀತಿಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಅವರನ್ನು ವರ್ಗಾವಣೆ ಮಾಡಿ ಬೇರೊಬ್ಬರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿ ಜೂನ್ 28ರಂದು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ’ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಿವಾನಂದ ದೊಡ್ಮನಿ ಅವರು ಕಾಲೇಜನ್ನು ಸ್ವಂತ ಆಸ್ತಿಯಂತೆ ಬಳಸಿಕೊಂಡಿದ್ದಾರೆ. ವೈದ್ಯರ ನೇಮಕಾತಿಯಲ್ಲೂ ಅಕ್ರಮ ಎಸಗಿದ್ದಾರೆ. ಈ ಹಿಂದೆ ಇದ್ದ ಹಲವು ವೈದ್ಯರು ಬಿಟ್ಟುಹೋಗಿದ್ದಾರೆ. ಅವರ ಮಾತನ್ನು ಕೇಳುವ ವೈದ್ಯರಿಗೇ ಮಣೆ ಹಾಕಲಾಗುತ್ತಿದೆ. ಹೀಗಾಗಿ ಇಲ್ಲಿಗೆ ವೈದ್ಯರು ಬರಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ದೂರಿದರು.

‌‘ನಿಯಮದ ಪ್ರಕಾರವೈದ್ಯಕೀಯ ಕಾಲೇಜಿನ ನಿರ್ದೇಶಕರನ್ನು ನಾಲ್ಕು ವರ್ಷಗಳ ಬಳಿಕ ವರ್ಗಾವಣೆ ಮಾಡಬೇಕು. ಆದರೆ, ಶಿವಾನಂದ ದೊಡ್ಮನಿ ಐದು ವರ್ಷಗಳಿಂದ ಇಲ್ಲೇ ಇದ್ದಾರೆ. ವೈದ್ಯರು ಬೇಕಾಗಿದ್ದಾರೆ ಎಂದು ಪತ್ರಿಕೆಗಳಲ್ಲಿ ಜಾಹೀರಾತು ಕೊಡಲಾಗಿತ್ತು. ಹಲವರು ಅರ್ಜಿ ಸಲ್ಲಿಸಿದ್ದರೂ ಸಂದರ್ಶನ ಮಾಡಲಿಲ್ಲ. ಈ ಎಲ್ಲ ವಿಚಾರಗಳನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಕೂಡ ತಿಳಿಸಲಾಗಿದೆ’ ಎಂದರು.

‘ದಾಖಲೆಗಳ ಪ್ರಕಾರ ಜಿಲ್ಲಾ ಆಸ್ಪತ್ರೆಗೆ 21 ಎಕರೆ ಜಮೀನಿದೆ. ಆದರೆ, ಈಗ ಅದರ ಅಧೀನದಲ್ಲಿರುವುದು ಕೇವಲ 17 ಎಕರೆ. ಉಳಿದ ನಾಲ್ಕು ಎಕರೆ ಅತಿಕ್ರಮಣವಾಗಿದ್ದು, ತೆರವು ಮಾಡಿಸಬೇಕು. ಇದು ಇಂದಿನ ಮಾರುಕಟ್ಟೆಯಲ್ಲಿ ₹ 150 ಕೋಟಿಗೂ ಅಧಿಕ ಬೆಲೆ ಬಾಳುತ್ತದೆ. ಈ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಫಕೀರಪ್ಪ ಭಂಡಾರಿ, ಅಲ್ತಾಫ್ ಶೇಖ್, ರಾಜೀವ ನಾಯ್ಕ, ಚಂದ್ರಕಾಂತ ಮಾಳ್ಸೇಕರ್, ಸಿ.ಎನ್.ನಾಯ್ಕ ಇದ್ದರು.

‘ಡಾ.ದೊಡ್ಮನಿಯನ್ನೇ ಮುಂದುವರಿಸಿ’: ಕಾರವಾರವೈದ್ಯಕೀಯ ಕಾಲೇಜಿನ ನಿರ್ದೇಶಕರನ್ನಾಗಿ ಡಾ.ಶಿವಾನಂದ ದೊಡ್ಮನಿ ಅವರನ್ನೇ ಮುಂದುರಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.

ಈ ಸಂಬಂಧ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಅವರನ್ನು ಮಂಗಳವಾರ ಭೇಟಿ ಮಾಡಿದ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ದೀಪಕ್ ಕುಡಾಳಕರ್ಮನವಿ ಸಲ್ಲಿಸಿದರು.

‘ಕಾಲೇಜಿನ ಉನ್ನತಿಗಾಗಿ ನಿಷ್ಠಾವಂತರಾಗಿ ಡಾ.ಶಿವಾನಂದ ದೊಡ್ಮನಿ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಅವರು ಯಾವುದೇ ಆಸೆ, ಆಕಾಂಕ್ಷೆಗಳಿಗೆ ಒಳಗಾಗದೇ ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದಾರೆ. ಇಂಥ ನಿಷ್ಠಾವಂತ ಅಧಿಕಾರಿ ಆಡಳಿತ ಮಾಡುತ್ತಿರುವುದನ್ನು ನೋಡಲಾಗದೇ ವೈಯಕ್ತಿಕ ದ್ವೇಷದಿಂದ ಕೆಲವರು ಉದ್ದೇಶಪೂರ್ವಕವಾಗಿ ಅವರ ವಿರುದ್ಧ ಆರೋಪ ಮಾಡುತ್ತಿದ್ದಾರೆ’ ಎಂದು ಅವರು ಮನವಿಯಲ್ಲಿ ದೂರಿದ್ದಾರೆ.

ಈ ಸಂದರ್ಭದಲ್ಲಿ ಪ್ರಮುಖರಾದ ದುಂಡಪ್ಪ ಬಂಡಿವಡ್ಡರ್, ದಾರು ಮಾಂಗ್ರೆ ಮತ್ತು ಸಚಿನ್ ಬೋರ್ಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT