ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ ರಕ್ಷಣೆ ಮಾಡುವವರು ಮಠ ಮಾಡಿಕೊಂಡಿರಲಿ: ಆನಂದ ಅಸ್ನೋಟಿಕರ್ ಟೀಕೆ

Last Updated 7 ಏಪ್ರಿಲ್ 2019, 10:41 IST
ಅಕ್ಷರ ಗಾತ್ರ

ಶಿರಸಿ: ಧರ್ಮ ರಕ್ಷಣೆ ಮಾಡುವ ಹೇಳಿಕೆ ನೀಡುವವರು ರಾಜಕಾರಣದಲ್ಲಿ ಇರಬಾರದು, ಬದಲಾಗಿ ಮಠ ಮಾಡಿಕೊಂಡಿರಬೇಕು ಎಂದು ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ್ ಟೀಕಿಸಿದರು.

ತಾಲ್ಲೂಕಿನ ಕೊಳಗಿಬೀಸ್‌ನಲ್ಲಿ ಭಾನುವಾರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಧರ್ಮ ರಕ್ಷಣೆ ಮಾಡಲು ಯುವಕರಿಗೆ ಕತ್ತಿ ಕೊಡಬಾರದು, ಕೆಲಸ ಕೊಡುವ ಕಾರ್ಯವಾಗಬೇಕು. ಹಿಂದೂ ಧರ್ಮದಲ್ಲಿ ಬಡತನ ಹೆಚ್ಚುತ್ತಿದೆ. ಇದರಿಂದ ಮತಾಂತರವೂ ಹೆಚ್ಚುತ್ತಿದೆ. ಈ ಕ್ಷೇತ್ರದ ಸಂಸದ ಅನಂತಕುಮಾರ್ ಹೆಗಡೆ, ನಿರುದ್ಯೋಗಿ ಯುವಕರಿಗೆ ಧರ್ಮದ ಅಮಲು ಹಿಡಿಸಿ ಅವರ ಕೈಗೆ ಕತ್ತಿ ಕೊಡುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ನಾನು ರಾಜಕೀಯದಲ್ಲಿದ್ದು ಹಲವು ವರ್ಷಗಳಾಗಿವೆ. ಆದರೆ, ಅಪರಾಧ ಹಿನ್ನೆಲೆಯುಳ್ಳವರನ್ನು ಎಂದಿಗೂ ನನ್ನ ಪಕ್ಕದಲ್ಲಿ ಕುಳ್ಳಿರಿಸಿಕೊಂಡಿಲ್ಲ. ಯಾರದೋ ಹೆಸರಿನಲ್ಲಿ ಐದು ಬಾರಿ ಸಂಸದರಾಗಿರುವ ಹೆಗಡೆ, ಅಭಿವೃದ್ಧಿಯ ಮೇಲೆ ರಾಜಕಾರಣ ಮಾಡುತ್ತಿಲ್ಲ. ಘಟ್ಟದ ಮೇಲಿನ ಬಹುಸಂಖ್ಯಾತ ಅಡಿಕೆ ಬೆಳೆಗಾರರಿಗೆ ಅವರು ನ್ಯಾಯ ಒದಗಿಸಿಲ್ಲ. ರೈತರಿಗೆ ಅನ್ಯಾಯ ಮಾಡಿದ್ದಾರೆ. ಅನ್ಯಾಯಕ್ಕೊಳಗಾದವರು ಬಿಜೆಪಿಗರನ್ನು ಪ್ರಶ್ನಿಸಬೇಕು’ ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ,‘ಪಕ್ಷದ ವರಿಷ್ಠರ ಆದೇಶದಂತೆ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಪರ ಪ್ರಚಾರದಲ್ಲಿ ತೊಡಗಿಕೊಳ್ಳುತ್ತಾರೆ’ ಎಂದರು. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಆರ್.ನಾಯ್ಕ, ಪ್ರಮುಖರಾದ ಜಗದೀಶ ಗೌಡ, ರಮೇಶ ದುಬಾಶಿ, ನಾರಾಯಣ ವೈದ್ಯ, ಕೆ.ಆರ್.ಹೆಗಡೆ ಅಮ್ಮಚ್ಚಿ ಇದ್ದರು. ನಂತರ ಕೊಳಗಿಬೀಸ್ ಗ್ರಾಮದಲ್ಲಿ ಮನೆಮನೆಗೆ ತೆರಳಿ ಮತ ಯಾಚಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT