ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ಅಂಬರದ ಆನಂದ ‘ಜೇನುಕಲ್ಲು ಗುಡ್ಡ

ಹಸಿರು ಹೊದ್ದು ಮಲಗಿದ ಮೌನ ತಾಣ; ಪ್ರವಾಸಿಗರಿಗೆ ಸುಲಭದಲ್ಲಿ ನೆಮ್ಮದಿಯಾನ
Last Updated 15 ಸೆಪ್ಟೆಂಬರ್ 2019, 4:35 IST
ಅಕ್ಷರ ಗಾತ್ರ

ಕಾರವಾರ:ನಿಸರ್ಗದ ಭೌಗೋಳಿಕ ಲಕ್ಷಣಗಳು ತನ್ನೊಡಲಲ್ಲಿ ವಿಸ್ತರಿಸಿಕೊಂಡು ವಿಸ್ಮಯವಾಗುತ್ತಾ ಹೊಸತನವನ್ನು ತೆರೆದಿಡುವ ಪ್ರಕೃತಿಯ ವೈಶಿಷ್ಟತೆ ಅನಂತವಾದದು. ಎತ್ತರವನ್ನು ತೋರಿಸುತ್ತಾ ಆಳ ಅಗಲದ ಅಚ್ಚರಿಗಳ ಮೂಲಕ ಬದುಕಿನ ಪಾಠಗಳು ಕಲಿಸುವ ಅನೇಕ ಸವಾಲುಗಳನ್ನು ಸೃಷ್ಟಿ ಹೊಂದಿದೆ.

ನೈಸರ್ಗಿಕ ಪ್ರವಾಸಿ ತಾಣಗಳಿಗೆ ಸಾಕ್ಷಿಯಾಗುವ ಯಲ್ಲಾಪುರ ತಾಲ್ಲೂಕಿನ ಅನೇಕ ಭಾಗಗಳು ಪ್ರಕೃತಿಯ ಸೋಜಿಗದ ಅವತರಣಿಕೆಯಾಗಿದೆ. ಅಂಥದ್ದರಲ್ಲಿ ಅಂಬರವನ್ನು ಹತ್ತಿರದಿಂದ ಕಾಣುವ ದಿಗಂತದಿಂದ ದೂರದ ಕಣಿವೆಯ ವಿಹಂಗಮ ನೋಟಗಳನ್ನು ಸೆರೆಹಿಡಿಯಬಲ್ಲ ಚಿತ್ರಕ ಶಕ್ತಿಯಿಂದ ಜೇನುಕಲ್ಲುಗುಡ್ಡದ ಸ್ಥಳ ಮನೋಹರ ತಾಣವಾಗಿದೆ. ಪಶ್ಚಿಮ ಘಟ್ಟದ ಇಳಿಜಾರಿನ ಈ ಕಣಿವೆಯ ಈ ಸಾಲು ಸಮೃದ್ದಿಯ ಹಸಿರಿನ ಸಾಕ್ಷಿರೂಪಕಗಳಾಗಿ ಗ್ರಾಮ್ಯ ನೋಟದ ಜೀವಂತಿಕೆಯನ್ನು ಉಸಿರಾಗಿಸಿಕೊಂಡಿದೆ.

ತಾಲ್ಲೂಕು ಕೇಂದ್ರದಿಂದ19 ಕಿ.ಮೀ ದೂರದ ಮಾಗೋಡು ಜಲಪಾತದ ಮಾರ್ಗದಲ್ಲಿ ಸಾಗಿ ಮುಖ್ಯ ರಸ್ತೆಯಿಂದ5 ಕಿ.ಮೀ ಒಳರಸ್ತೆಯಲ್ಲಿ ಕ್ರಮಿಸಬೇಕು. ಆಗ ಎತ್ತರದ ಪ್ರದೇಶ ಜೇನುಕಲ್ಲು ಗುಡ್ಡ ಕಾಣಸಿಗುವುದು. ಅಡಿಕೆ ತೋಟ, ಗದ್ದೆಯಂಚಿನ ಮನೆಗಳ ನಡುವೆ ಹಸಿರು ಹಾದಿಯಲ್ಲಿ ಸಾಗುವವರಿಗೆ ಅಪ್ಪಟ ಹಳ್ಳಿಯ ದರ್ಶನವಾಗುವುದು.

ಸಮುದ್ರ ಮಟ್ಟದಿಂದ650 ಅಡಿ ಎತ್ತರದ ಈ ಪ್ರದೇಶವು ಜೇನಿನ ವಾಸಕ್ಕೆ ಅನುಕೂಲವಾಗಿದೆ.ಅತಿಹೆಚ್ಚು ಜೇನಿನ ಸಂತತಿ ಇರುವ ಕಾರಣದಿಂದ ‘ಜೇನುಕಲ್ಲು ಗುಡ್ಡ’ ಎನ್ನುವ ಹೆಸರು ಬಂದಿದೆ.

ಬೇಡ್ತಿ ನದಿ ಮಾಗೋಡು ಜಲಧಾರೆಯಾದ ನಂತರ ಘಟ್ಟ ಇಳಿದು ಗಂಗಾವಳಿ ನದಿಯಾಗುತ್ತದೆ. ವಿವಿಧ ಹಳ್ಳ ಕೊಳ್ಳಗಳು ಸೇರುವ ಈ ಕಣಿವೆಯಂಚಿನಲ್ಲಿ ಅನೇಕ ಹಳ್ಳಿಗಳು ಗ್ರಾಮೀಣ ಜನಜೀವನಕ್ಕೆ ಸಾಕ್ಷಿಯಾಗಬಲ್ಲವು. ವನವಾಸಿಗಳೂ ಕೂಡ ಘಟ್ಟದ ತಪ್ಪಲಿನಲ್ಲಿ ವಾಸವಾಗಿದ್ದಾರೆ. ಗಂಗಾವಳಿ ನದಿಪಾತ್ರದ ಇಕ್ಕೆಲಗಳ ನಡುವೆ ಹಸಿರು ಭೂಮಿಯಲ್ಲಿ ಹರಿಯುವ ನದಿ ಮೇಲ್ಮುಖವಾಗಿ ಅಂಬರ ಚುಂಬಿಸುವಂತೆ ಹರಿಯುವಿಕೆಯ ರೇಖೆ ಎಳೆದಿದೆ. ಇತ್ತೀಚೆಗೆ ಸುರಿದ ಭಾರೀ ಮಳೆಗೂ ಅಂಜದೇ ಈ ಗುಡ್ಡ ತನ್ನ ಪೃಕೃತಿಯ ರಮಣೀಯತೆಯನ್ನು ಉಳಿಸಿಕೊಂಡಿದೆ. ಈ ಭಾಗದಲ್ಲಿ ಹೇರಳವಾಗಿದ್ದ ಬಿದಿರು, ಕಳೆದ ಬೇಸಿಗೆಯಲ್ಲಿ ಕಟ್ಟೆ ರೋಗದಿಂದ ಒಣಗಿತ್ತು. ಆದರೆ, ಅದರ ಬುಡದಲ್ಲಿ ಬಿದ್ದ ಬಿದರಕ್ಕಿಯ ಬೀಜ ಮೊಳೆತು ಎಳೆಯ ಚಿಗುರು ಹಸಿರಿನ ಹೆಜ್ಜೆಗೆ ಮುನ್ನುಡಿಯಾಗಿದೆ.

ವಿವಿಧ ಜಾತಿಯ ಸಸ್ಯ ಸಂಕುಲಗಳು, ಪ್ರಾಣಿ ಪಕ್ಷಿಗಳ ಅಪರೂಪದ ಜೀವ ವೈವಿಧ್ಯ ತಾಣವಾಗಿರುವ ಈ ಜೇನುಕಲ್ಲು ಗುಡ್ಡ ಪ್ರವಾಸಿಗರಿಗಂತೂ ಸ್ವರ್ಗ ಸದೃಶವಾಗಿದೆ.

‘ಮೂಲಸೌಕರ್ಯ ಕೊಡಿ’:ಈ ತಾಣಕ್ಕೆ ಸಂಪರ್ಕ ರಸ್ತೆ ಸರಿಯಾಗಿಲ್ಲ. ಪ್ರವಾಸಿಗರು ರಸ್ತೆಯಲ್ಲಿ ಪ್ರಯಾಸಪಟ್ಟು ನೇರವಾಗಿ ಜೇನುಕಲ್ಲುಗುಡ್ಡ ತಲುಪಿದರೆ ಅಲ್ಲಿಯ ಪರಿಸರ ದಣಿವನ್ನು ನಿವಾರಿಸಿ ಸಂತೋಷವನ್ನು ನೀಡಬಲ್ಲದು. ಪ್ರವಾಸಿಗರಿಗೆ ಸೂಕ್ತ ರಸ್ತೆ, ಕುಡಿಯುವ ನೀರಿನ ಸೌಲಭ್ಯದ ಅಗತ್ಯವಿದೆ. ಗುಡ್ಡದ ಆವರಣದಲ್ಲಿ ಅಪಾಯವಾಗದ ಹಾಗೆ ತಡೆಗೋಡೆ ನಿರ್ಮಿಸಬೇಕಿದೆ. ಪ್ರವಾಸೋದ್ಯಮ ಇಲಾಖೆಯು ನಿಸರ್ಗದ ಮಡಿಲಿನಲ್ಲಿರುವ ಯಲ್ಲಾಪುರದ ಪ್ರವಾಸೀ ತಾಣಗಳ ಕುರಿತು ಕಾಳಜಿವಹಿಸಬೇಕಾಗಿದೆ.

– ದತ್ತಾತ್ರೇಯ ಭಟ್ಟ, ಕಣ್ಣಿಪಾಲ, ಯಲ್ಲಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT