ಶುಕ್ರವಾರ, ಅಕ್ಟೋಬರ್ 22, 2021
29 °C
‘ಕ್ರಿಮ್ಸ್’ ಆವರಣದಲ್ಲಿ ಹತ್ತಾರು ಕಿರಿಯ ವೈದ್ಯರಿಂದ ಫಲಕಗಳ ಪ್ರದರ್ಶನ

ವಿಶೇಷ ಭತ್ಯೆ ನೀಡುವಂತೆ ಕಿರಿಯ ವೈದ್ಯರ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಘೋಷಿಸಲಾಗಿದ್ದ ವಿಶೇಷ ಭತ್ಯೆಗೆ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕಗೆ ಒತ್ತಾಯಿಸಿ, ನಗರದಲ್ಲಿ ಗುರುವಾರ ಕಿರಿಯ ವೈದ್ಯರು ಧರಣಿ ಹಮ್ಮಿಕೊಂಡರು.

ನಗರದ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಆವರಣದಲ್ಲಿ ಸೇರಿದ್ದ ಕಿರಿಯ ಸ್ಥಾನಿಕ ವೈದ್ಯರು, ವೈದ್ಯಕೀಯ ಸ್ನಾತಕೋತ್ತರ ಪದವೀಧರರು ಹಾಗೂ ಇಂಟರ್ನ್ನರು ವಿವಿಧ ಫಲಕಗಳನ್ನು ಪ್ರದರ್ಶಿಸಿ ಬೇಡಿಕೆಗಳನ್ನು ಮಂಡಿಸಿದರು.

ಕೋವಿಡ್ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುವ ವೈದ್ಯರಿಗೆ ತಲಾ ₹ 10 ಸಾವಿರದ ವಿಶೇಷ ಭತ್ಯೆಯನ್ನು ಪ್ರಕಟಿಸಿತ್ತು. ಹಲವು ತಿಂಗಳುಗಳೇ ಕಳೆದರೂ ಅದು ವೈದ್ಯರ ಖಾತೆಗೆ ಜಮೆಯಾಗಿಲ್ಲ. ಒಂದು ವರ್ಷದ ಅವಧಿಯಲ್ಲಿ ಸಾಂಕ್ರಾಮಿಕ ಸೋಂಕಿನ ನಿಯಂತ್ರಣಕ್ಕಾಗಿ ಆರೋಗ್ಯ ಕ್ಷೇತ್ರದ ಸಿಬ್ಬಂದಿ ಬಹಳ ಶ್ರಮಿಸಿದ್ದಾರೆ. ಸರ್ಕಾರ ಮತ್ತು ಸಾರ್ವಜನಿಕರು ‘ಕೋವಿಡ್ ಯೋಧರು’ ಎಂದು ಹೊಗಳಿದರು. ಆದರೆ, ಕಿರಿಯ ವೈದ್ಯರು ನಿಸ್ವಾರ್ಥದಿಂದ ಈ ಕೆಲಸ ಮಾಡಿದರು ಎಂದು ಹೇಳಿದರು.

ಕೋವಿಡ್ ಭತ್ಯೆಯನ್ನು ಪಾವತಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ನೀಡಲಾಗಿದೆ. ಕರ್ನಾಟಕ ಸ್ಥಾನಿಕ ವೈದ್ಯರ ಸಂಘದ ಪ್ರತಿನಿಧಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರು, ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಒತ್ತಾಯಿಸಿದ್ದಾರೆ. ಆದರೆ, ಈವರೆಗೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಾಗಾಗಿ ಸರ್ಕಾರದ ಗಮನ ಸೆಳೆಯಲು ಒಂದು ದಿನದ ಮುಷ್ಕರ ಹಮ್ಮಿಕೊಳ್ಳಲಾಗಿದೆ. ತೀವ್ರ ನಿಗಾ ಘಟಕ ಮತ್ತು ಕೋವಿಡ್ ಸೋಂಕಿತರ ಆರೈಕೆಗೆ ತೊಂದರೆಯಾಗದಂತೆ ಮುಷ್ಕರದಲ್ಲಿ ಭಾಗವಹಿಸಿದರು. ತಮ್ಮ ಅಹವಾಲುಗಳಿಗೆ ಸರ್ಕಾರ ಸ್ಪಂದಿಸುವ ತನಕವೂ ವಿವಿಧ ರೀತಿಯಲ್ಲಿ ಹೋರಾಟ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಪ್ರತಿಭಟನಾನಿರತ ವೈದ್ಯರು ತಿಳಿಸಿದರು.

ಬೇಡಿಕೆಗಳೇನು?: ಹಲವು ಮನವಿಗಳ ನಡುವೆಯೂ ವೈದ್ಯಕೀಯ ಶಿಕ್ಷಣದ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಅದನ್ನು ಹಿಂಪಡೆಯಬೇಕು. 2021–22 ಶೈಕ್ಷಣಿಕ ವರ್ಷದ ಅವಧಿಯಲ್ಲಿ ವಿದ್ಯಾರ್ಥಿಗಳು ಬಹುಪಾಲು ಸಮಯವನ್ನು ಕೋವಿಡ್ ಆರೈಕೆಯಲ್ಲೇ ಕಳೆದಿದ್ದಾರೆ. ತರಗತಿಗಳು, ಚಿಕಿತ್ಸೆಯ ವಿಧಾನಗಳ ಬಗ್ಗೆ ತರಬೇತಿ ಸಿಕ್ಕಿಲ್ಲ. ಹಾಗಾಗಿ ಒಂದು ವರ್ಷದ ಶೈಕ್ಷಣಿಕ ಶುಲ್ಕವನ್ನು ರದ್ದು ಮಾಡಬೇಕು.

ಶುಲ್ಕ ನಿಗದಿ ವಿಧಾನವನ್ನು ಮರು ಪರಿಶೀಲಿಸಬೇಕು. ಎಂ.ಬಿ.ಬಿ.ಎಸ್ ನಂತರದ ಜೂನಿಯರ್ ವೈದ್ಯರು ಮತ್ತು ಇಂಟರ್ನ್‌ರಿಗೆ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿ ವೇತನವನ್ನು ಪಾವತಿಸಬೇಕು ಎಂದು ಪ್ರತಿಭಟನಾನಿರತರು ಬೇಡಿಕೆ ಮಂಡಿಸಿದ್ದಾರೆ.

ಡಾ.ಹೇಮಂತ ರಾಜು, ಡಾ.ಐಶ್ವರ್ಯಾ, ಡಾ.ಅಭಿನಯ, ಡಾ.ಶ್ರೀಧರ್, ಡಾ.ಚೇತನ್ ಸೇರಿದಂತೆ ಹತ್ತಾರು ವೈದ್ಯರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.