ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದಂಬೋತ್ಸವದಲ್ಲಿ ಮಲ್ಲಕಂಬ, ಗಾಳಿಪಟ ಪ್ರಾತ್ಯಕ್ಷಿಕೆ

ಫೆ. 9 ಮತ್ತು 10 ಉತ್ಸವ, ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲು ಒತ್ತಾಯ
Last Updated 17 ಜನವರಿ 2019, 13:31 IST
ಅಕ್ಷರ ಗಾತ್ರ

ಶಿರಸಿ: ಫೆ.9 ಹಾಗೂ 10ರಂದು ತಾಲ್ಲೂಕಿನ ಬನವಾಸಿಯಲ್ಲಿ ನಡೆಯಲಿರುವ ಕದಂಬೋತ್ಸವದಲ್ಲಿ ‘ಕದಂಬ ಕಪ್’ ಕಬಡ್ಡಿ, ಮಲ್ಲಕಂಬ ಪ್ರದರ್ಶನ, ಗಾಳಿಪಟ ತಯಾರಿಕೆ ಪ್ರಾತ್ಯಕ್ಷಿಕೆ ವಿಶೇಷ ಆಕರ್ಷಣೆಯಾಗಿದೆ.

ಗುರುವಾರ ಇಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಉತ್ಸವದ ದಿನಾಂಕ ಪ್ರಕಟಿಸಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು, ಫೆ.7ಕ್ಕೆ ಗುಡ್ನಾಪುರದಲ್ಲಿ ಜ್ಯೋತಿ ಉದ್ಘಾಟನೆ, 8ಕ್ಕೆ ಕ್ರೀಡಾಕೂಟ, 9ರಂದು ಕದಂಬೋತ್ಸವ ಉದ್ಘಾಟನೆ, ಸಾಂಸ್ಕೃತಿಕ ಕಾರ್ಯಕ್ರಮ, 10ರ ಬೆಳಿಗ್ಗೆ ಮಕ್ಕಳ ಪ್ರತಿಭಾ ಕಾರಂಜಿ, ಸಂಜೆ ಸಮಾರೋಪ ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದರು.

‘ಕದಂಬೋತ್ಸವ ವೇದಿಕೆಯಲ್ಲಿ ಕವಿಗೋಷ್ಠಿ ನಡೆಸಲು ಅವಕಾಶ ಕಲ್ಪಿಸಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ ಭಾಗವತ ಒತ್ತಾಯಿಸಿದರು. ‘ಹಿಂದಿನ ಬಾರಿ ಸಾಕ್ಷ್ಯಚಿತ್ರ ಪ್ರದರ್ಶನ ನಡೆಸಿದಾಗ, ಚಿತ್ರ ತಯಾರಕರಿಗೆ ನ್ಯಾಯ ದೊರೆತಿಲ್ಲ’ ಎಂದು ರಾಘವೇಂದ್ರ ಭಟ್ ಆರೋಪಿಸಿದರು.

‘ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಿಗೆ ಕದಂಬೋತ್ಸವದಲ್ಲಿ ಸ್ಥಾನ–ಮಾನ ನೀಡಬೇಕು. ನಶಿಸುತ್ತಿರುವ ಸ್ಥಳೀಯ ಕಲೆಗಳನ್ನು ಪ್ರೋತ್ಸಾಹಿಸಬೇಕು’ ಎಂದು ಅಕಾಡೆಮಿ ಸದಸ್ಯ ನಾಗರಾಜ ಜೋಶಿ ಹೇಳಿದರು. ಗುಡ್ನಾಪುರ ಶಾಸನಕ್ಕೆ ವಜ್ರಲೇಪನ ಮಾಡಿ, ಸಂರಕ್ಷಣೆ ಮಾಡಬೇಕು. ವೀರಭದ್ರ ದೇವಾಲಯವನ್ನು ಸುವ್ಯವಸ್ಥಿತಗೊಳಿಸಬೇಕು ಎಂದು ಸುಧಾಕರ ನಾಯ್ಕ, ರಘು ನಾಯ್ಕ ಒತ್ತಾಯಿಸಿದರು. ಕದಂಬೋತ್ಸವಕ್ಕೆಂದು ರಚನೆಯಾಗುವ ಸಮಿತಿಗಳು ಸಕ್ರಿಯವಾಗಿರಬೇಕು. ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡಿದಾಗ ಉತ್ಸವಕ್ಕೆ ಕಳೆ ಬರುತ್ತದೆ ಎಂದು ಬಿ.ಶಿವಾಜಿ ಸಲಹೆ ನೀಡಿದರು.

‘ಉತ್ಸವದಲ್ಲಿ ಸ್ವಚ್ಛತೆಗೆ ಒತ್ತು ನೀಡಬೇಕು. ಉತ್ಸವ ನಡೆಯುವ ಎರಡು ದಿನ ಮೊದಲು ಮೈದಾನಕ್ಕೆ ನೀರು ಸಿಂಪಡಣೆ ಮಾಡಿ, ದೂಳಿನ ಸಮಸ್ಯೆ ನಿವಾರಿಸಬೇಕು’ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ತಿಳಿಸಿದರು. ಕೃಷಿಕರೇ ಹೆಚ್ಚಿರುವ ಬನವಾಸಿಯಲ್ಲಿ ಕೃಷಿ ಉಪಕರಣಗಳ ಪ್ರದರ್ಶನ ಹಮ್ಮಿಕೊಳ್ಳಬೇಕು ಎಂದು ಎಂ.ಜಿ.ದಾವಣಗೇರಿ ವಿನಂತಿಸಿದರು.

ಇತಿಹಾಸ ಮತ್ತು ವರ್ತಮಾನಕ್ಕೆ ಸಂಬಂಧಿಸಿ ವಸ್ತು ಪ್ರದರ್ಶನ ಆಯೋಜಿಸುವ ಮೂಲಕ ಜನರಿಗೆ ಬನವಾಸಿ ಮಹತ್ವ ತಿಳಿಸಬೇಕು. ದೇವಾಲಯದ ಎದುರಿನ ಹಣ್ಣಿನ ಅಂಗಡಿಗಳಿಂದಾಗಿ ತ್ಯಾಜ್ಯ ಹೆಚ್ಚಾಗುತ್ತಿದ್ದು, ಅದನ್ನು ಸ್ವಲ್ಪ ದೂರಕ್ಕೆ ಸ್ಥಳಾಂತರಿಸಬೇಕು ಎಂದು ದೇವಾಲಯ ಆಡಳಿತ ಸಮಿತಿ ಉಪಾಧ್ಯಕ್ಷ ಶಿವಾನಂದ ದೀಕ್ಷಿತ ಸಲಹೆ ಮಾಡಿದರು.

ದೇವಾಲಯ ಶೌಚಾಲಯಕ್ಕೆ ನಿರಂತರ ನೀರಿನ ಸೌಲಭ್ಯ ಒದಗಿಸಬೇಕು. ಕದಂಬೋತ್ಸವದ ಸಂದರ್ಭದಲ್ಲಿ ರಾತ್ರಿ ಹೊತ್ತು ಮಹಿಳೆಯರಿಗೆ ತೊಂದರೆಯಾಗುವುದರಿಂದ ಹೆಚ್ಚು ಮೊಬೈಲ್ ಶೌಚಾಲಯ ಸೌಲಭ್ಯ ಕಲ್ಪಿಸಬೇಕು ಎಂದು ಉಮಾ ಒತ್ತಾಯಿಸಿದರು. ಕದಂಬೋತ್ಸವ ಮೆರವಣಿಗೆಗೆ ಪ್ರತಿ ತಾಲ್ಲೂಕಿನಿಂದ ಒಂದು ಬಂಡಿಚಿತ್ರ ಬರುವಂತಾಗಬೇಕು ಎಂದು ಬನವಾಸಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣನವರ್ ಹೇಳಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ರೋಷನ್ ಮಾತನಾಡಿ, ‘ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ಸಂಬಂಧ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದರು. ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ ಮಾತನಾಡಿ, ‘ಕಳೆದ ಉತ್ಸವಗಳಲ್ಲಿ ಸ್ಥಳೀಯ ಕಲಾವಿದರಿಗೆ ಶೇ 50ಕ್ಕಿಂತ ಹೆಚ್ಚು ಅವಕಾಶ ನೀಡಲಾಗಿದೆ’ ಎಂದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿ.ಎಫ್.ನಾಯ್ಕ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಜಿ.ಎನ್.ಹೆಗಡೆ ಮುರೇಗಾರ, ರೂಪಾ ನಾಯ್ಕ, ಬಸವರಾಜ ದೊಡ್ಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT