ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ: ಮೊದಲ ಬಾರಿಗೆ ‘ಕಗ್ಗ’ ಬೆಳೆ ದಾಖಲಾತಿ

ಪಹಣಿಯಲ್ಲಿ ದಾಖಲಿಸುವ ಪ್ರಕ್ರಿಯೆಗೆ ಅಧಿಕಾರಿಗಳು, ರೈತರಿಂದ ಚಾಲನೆ
Last Updated 1 ಸೆಪ್ಟೆಂಬರ್ 2021, 5:17 IST
ಅಕ್ಷರ ಗಾತ್ರ

ಕುಮಟಾ: ತಾಲ್ಲೂಕಿನ ಅಘನಾಶಿನಿ ಹಿನ್ನೀರು ಪ್ರದೇಶದ ‘ಕಗ್ಗ’ ಭತ್ತ ಗಜನಿಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರೈತರ ಪಹಣಿಯಲ್ಲಿ ಬೆಳೆ ದಾಖಲಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ರೈತರು ಕೃಷಿ ಇಲಾಖೆ ಸಿಬ್ಬಂದಿಯೊಂದಿಗೆ ದೋಣಿಯಲ್ಲಿ ತೆರಳಿ, ಮೊಬೈಲ್ ಆ್ಯಪ್ ಮೂಲಕ ಮಾಹಿತಿ ನಮೂದಿಸಿದರು.

2016– 17ನೇ ಸಾಲಿನಿಂದಲೇ ಮೊಬೈಲ್ ಆ್ಯಪ್ ಬಳಸಿ ಬೆಳೆ ದಾಖಲಾತಿ ಮಾಡುವ ಪ್ರಕ್ರಿಯೆಯನ್ನು ಕೃಷಿ ಇಲಾಖೆ ಜಾರಿಗೆ ತಂದಿತ್ತು. ಆದರೆ, ಈವರೆಗೆ ತಾಲ್ಲೂಕಿನ ಕಗ್ಗ ಭತ್ತ ಪ್ರದೇಶದಲ್ಲಿ ಮಾತ್ರ ಬೆಳೆ ದಾಖಲಾತಿ ಕೈಗೊಂಡಿರಲಿಲ್ಲ.

ತಾಲ್ಲೂಕಿನ ಮಾಣಿಕಟ್ಟಾ ಗಜನಿಯಲ್ಲಿ ಈ ವರ್ಷ ಕಗ್ಗ ಭತ್ತ ಬಿತ್ತನೆ ಮಾಡಿದ 16 ರೈತರು ಬೇಸಾಯದ ಮಾಹಿತಿ ದಾಖಲಿಸಿದ್ದಾರೆ. ಸುಮಾರು ಆರು ಎಕರೆ ಪ್ರದೇಶದ ಮಾಹಿತಿಯನ್ನು ಕೃಷಿ ಅಧಿಕಾರಿಗಳ ನೆರವಿನಿಂದ ರೈತರು ಮೊಬೈಲ್ ಆ್ಯಪ್ ಮೂಲಕ ನಮೂದಿಸಿದ್ದಾರೆ.

ಹೆಚ್ಚಿನ ಮಾಹಿತಿ ನೀಡಿದ ಸಹಾಯಕ ಕೃಷಿ ನಿರ್ದೇಶಕಿ ರಶ್ಮಿ ಶಹಾಪುರಮಠ, ‘ಮೊಬೈಲ್ ಆ್ಯಪ್ ಮೂಲಕ ರೈತರು ದಾಖಲಾತಿ ಮಾಡಿಕೊಂಡ ಕಗ್ಗ ಭತ್ತ ಬೆಳೆಯನ್ನು ಕಂದಾಯ ಇಲಾಖೆಯ ‘ಭೂಮಿ’ ಕೇಂದ್ರಕ್ಕೆ ಕಳಿಸಿಕೊಡಲಾಗುವುದು. ಅಲ್ಲಿಯ ಸಿಬ್ಬಂದಿ ಸಂಬಂಧಿಸಿದ ರೈತರ ಪಹಣಿಯ ಒಂಬತ್ತನೇ ಸಂಖ್ಯೆ ಕಾಲಂನಲ್ಲಿ ಬೆಳೆ ದಾಖಲು ಮಾಡುತ್ತಾರೆ. ಸದ್ಯ 16 ರೈತರ ಪಹಣಿಯಲ್ಲಿ ಪ್ರಾಯೋಗಿಕವಾಗಿ ಬೆಳೆ ದಾಖಲಾತಿ ಪ್ರಕ್ರಿಯೆ ಕೈಕೊಂಡಿದ್ದು, ಮುಂದೆ ಇದು ಮುಂದುವರಿಯಲಿದೆ’ ಎಂದರು.

‘ನೀರು ಮಡಿ’ ಗುರುತು:‘ಇನ್ನು ಮುಂದೆ ರೈತರೇ ಬೆಳೆ ದಾಖಲಾತಿ ಮಾಡಿಕೊಳ್ಳಲಿದ್ದಾರೆ. ಆದ್ದರಿಂದ ಪಹಣಿಯಲ್ಲಿ ಬೆಳೆ ದಾಖಲಾತಿ ಆಗಿಲ್ಲ ಎಂದು ದೂರುವುದು ತಪ್ಪುತ್ತದೆ. ಬೆಳೆ ದಾಖಲಾತಿ ಆದರೆ ಬೆಳೆ ವಿಮೆ, ಬೆಳೆ ಸಾಲದಂತಹ ಸೌಲಭ್ಯವನ್ನು ರೈತರು ಪಡೆಯಬಹುದಾಗಿದೆ. ಗಜನಿಯಲ್ಲಿ ಕಗ್ಗ ಭತ್ತ ಬೆಳೆಯಲು ಸಾಧ್ಯವಾಗದ ನೀರು ತುಂಬಿರುವ ಪ್ರದೇಶವನ್ನು ‘ನೀರು ಮಡಿ’ ಎಂದು ಗುರುತಿಸಲಾಗುವುದು’ ಎಂದು ತಿಳಿಸಿದರು.

‘ಇಲ್ಲಿ ನೈಸರ್ಗಿಕವಾಗಿ ಮೀನು, ಸಿಗಡಿ, ಏಡಿ ಬೆಳೆಯುತ್ತವೆ. ಆದ್ದರಿಂದ ಮೀನುಗಾರಿಕೆ ಇಲಾಖೆ ಸಹಕಾರದೊಂದಿಗೆ ಇದಕ್ಕೊಂದು ಗುರುತು ನೀಡಲು ಪ್ರಯತ್ನಿಸಲಾಗುವುದು’ ಎಂದರು.

ಮಾಣಿಕಟ್ಟಾ ಕಗ್ಗ ಬೆಳೆಗಾರರ ಸಂಘದ ಸದಸ್ಯರಾದ ಶ್ರೀಧರ ಪೈ, ನಾರಾಯಣ ಪಟಗಾರ, ಜಗ್ಗನಾಥ ನಾಯ್ಕ, ಜನಾರ್ದನ ನಾಯ್ಕ, ಮಂಜು ಪಟಗಾರ, ವಾಸು ಪಟಗಾರ, ಪರಮೇಶ್ವರ ಪಟಗಾರ, ತಿಪ್ಪಯ್ಯ ಪಟಗಾರ, ಸುನಿಲ್ ನಾಯ್ಕ ಕೃಷಿ ಅಧಿಕಾರಿಗಳಾದ ಚಂದ್ರಕಲಾ ಬರ್ಗಿ, ಅಕ್ರಮ್ ಆಲದಕಟ್ಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT